Peace of mind is essential for life.
ತುರುವೇಕೆರೆ: ದೇವರ ದೃಷ್ಟಿಯಲ್ಲಿ ನಮ್ಮ ಆಯಸ್ಸು ಮುಗಿದು ಹೋಗಿದ್ದರೆ, ಅದೆಷ್ಟೇ ಹಣ ಖರ್ಚು ಮಾಡಿದರೂ ಆರೋಗ್ಯ, ಆಯಸ್ಸು ಲಭಿಸದು ಎಂದು ನೊಣವಿನಕೆರೆಯ ವಿರಕ್ತ ಮಠದ ಕಿರಿಯ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ತಾಲೂಕಿನ ಆರೋಗ್ಯ ಇಲಾಖಾ ಮಹಿಳಾ ಸಿಬ್ಬಂದಿಗೆ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಜನರು ಆರೋಗ್ಯವಂತರಾಗಿರಲು ಕಾರಣಕರ್ತರಾದ ಆರೋಗ್ಯ ಇಲಾಖೆ ಸಿಬ್ಬಂದಿಯ ಆರೋಗ್ಯವೂ ಮುಖ್ಯ. ಅವರು ಬಹಳ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಅವರಿಗೂ ಮಾನಸಿಕ ನೆಮ್ಮದಿ ಅತ್ಯಗತ್ಯ. ತಮ್ಮ ಒತ್ತಡದ ಪ್ರಪಂಚದಿಂದ ಹೊರಬಂದು ಮಾನಸಿಕ ಮತ್ತು ದೈಹಿಕ ಕಸರತ್ತಿಗೆ ಅವಕಾಶ ನೀಡಿದರೆ ಅವರೂ ಸಹ ನೆಮ್ಮದಿಯಿಂದ ಜೀವನ ಸಾಗಿಸುತ್ತಾರೆ. ತಾಲೂಕು ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಈ ಕ್ರೀಡಾಕೂಟ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಆರೋಗ್ಯ ಇಲಾಖೆಯವರಿಗೆ ಮಾನಸಿಕ ಒತ್ತಡ ಹೆಚ್ಚು. ಆರೋಗ್ಯ ಇಲಾಖಾ ಸಿಬ್ಬಂದಿಗೂ ಮಾನಸಿಕ ನೆಮ್ಮದಿ ಬೇಕು. ಸಾರ್ವಜನಿಕರೊಂದಿಗೆ ಬಹಳ ಶಾಂತಿಯುತವಾಗಿ ವರ್ತಿಸಬೇಕಾದರೆ, ಮಾನಸಿಕವಾಗಿ ನಾವು ನೆಮ್ಮದಿಯಾಗಿದ್ದರಷ್ಟೇ ಸಾಧ್ಯ ಎಂದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಮೋಹನ್ ಮಾತನಾಡಿ, ಆರೋಗ್ಯ ಇಲಾಖೆ ಸಿಬ್ಬಂದಿ ಅತ್ಯುತ್ತಮ ಪ್ರತಿಭಾನ್ವಿತರಿದ್ದಾರೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದರು.
ಕ್ರೀಡಾಕೂಟದ ಆಯೋಜಕ ಡಾ.ಸಂದೇಶ್ ಮಾತನಾಡಿ, ತಮ್ಮ ಆರೋಗ್ಯ ಇಲಾಖೆಯಲ್ಲಿ ಒತ್ತಡ ಹೆಚ್ಚು. ದಿನವಿಡಿ ಯೋಧರಂತೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನೂ ಸಹ ತಮ್ಮ ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳಲಾಗಿದೆ. ಅವರೆಲ್ಲರಿಗೂ ಇದೊಂದು ಮನರಂಜನೆಯ ಹಬ್ಬವಿದ್ದಂತೆ ಎಂದರು.
ಥ್ರೋಬಾಲ್, ಕಬಡ್ಡಿ, ಟಿನಿಕ್ವಾಯಿಟ್, ಬ್ಯಾಡ್ಮಿಂಟನ್, ಹಗ್ಗಜಗ್ಗಾಟ, ಕೇರಂ, ಅಥ್ಲೆಟಿಕ್ಗಳನ್ನು ಆಯೋಜಿಸಲಾಗಿತ್ತು. ಸುಮಾರು 200ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ತಾಲೂಕು ವೈದ್ಯಾಧಿಕಾರಿ ಡಾ.ರಂಗನಾಥ್, ದೀಪು ಕಾನ್ವೆಂಟ್ನ ಮುಖ್ಯಶಿಕ್ಷಕ ನಟೇಶ್, ಕ್ರೀಡಾ ಸಮಿತಿಯ ಕಾರ್ಯದರ್ಶಿಗಳಾದ ನಾಗೇಶ್, ಯೋಗೀಶ್, ಮಿಥುನ್ ರಾವತ್, ಗಿಡ್ಡೇಗೌಡ, ಮಂಜುನಾಥ್, ಶ್ರೀಧರ್ ಮತ್ತಿತರರುಯ ಇದ್ದರು.