ಗ್ರೇಡ್-1 ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿ ಮುಂಬಡ್ತಿ  
ರಾಜ್ಯ

Migration: ಗುಳೆ ತಡೆಯುವ ಜವಾಬ್ದಾರಿ ಪಿಡಿಒಗಳದ್ದು: ಸಚಿವ ಈಶ್ವರ್ ಖಂಡ್ರೆ

ಪ್ರಮುಖ ಮುಖ್ಯಾಂಶಗಳು

  • ಗ್ರೇಡ್-1 ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿ ಮುಂಬಡ್ತಿ ಪಡೆದ 528 ಸಿಬ್ಬಂದಿಗೆ ನಿಷ್ಠೆ, ದಕ್ಷತೆ ಮತ್ತು ಪ್ರಾಮಾಣಿಕತೆಯ ಪ್ರತಿಜ್ಞಾವಿಧಿ
  • ಗ್ರಾಮೀಣ ಪ್ರದೇಶದಲ್ಲಿ ಬಡ, ಶೋಷಿತ ಜನರಿಗೆ ಉದ್ಯೋಗ ನೀಡಲು ಶ್ರಮಿಸಬೇಕಿದೆ. ಗ್ರಾಮಗಳ ವಿಕಾಸವೇ ಪಿಡಿಒಗಳ ಧ್ಯೇಯ ಮತ್ತು ಗುರಿಯಾಗಬೇಕಿದೆ.
  • ರಾಜ್ಯದಲ್ಲಿ ಮಳೆಯ ಕೊರತೆಯಾಗಿದ್ದು, ಯಾರೊಬ್ಬರೂ ಗುಳೆ ಹೋಗದಂತೆ ತಡೆಯುವ ಜವಾಬ್ದಾರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲಿದೆ.
  • ಅಂತರ್ಜಲ ಮಟ್ಟ ಹೆಚ್ಚಳ, ಕೊಟ್ಟಿಗೆ ನಿರ್ಮಾಣ, ರಸ್ತೆ ನಿರ್ಮಾಣ, ಕಾಲುವೆ ನಿರ್ಮಾಣ ಸೇರಿ 318 ಕಾಮಗಾರಿಗಳನ್ನು ಕೈಗೊಳ್ಳಲು ವಿಬಿಜಿ ರಾಮ್ ಜಿ ಅಡಿಯಲ್ಲಿ ಅವಕಾಶ
ಬೆಂಗಳೂರು:

ರಾಜ್ಯದಲ್ಲಿ ಮಳೆಯ ಕೊರತೆಯಾಗಿದ್ದು, ಯಾರೊಬ್ಬರೂ ಗುಳೆ ಹೋಗದಂತೆ ತಡೆಯುವ ಜವಾಬ್ದಾರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲಿದೆ. ಇದಕ್ಕಾಗಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಅನುಷ್ಠಾನ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.

ನಗರ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಮಂಗಳವಾರ ಗ್ರೇಡ್-1 ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿ ಮುಂಬಡ್ತಿ ಪಡೆದ 528 ಸಿಬ್ಬಂದಿಗೆ ನಿಷ್ಠೆ, ದಕ್ಷತೆ ಮತ್ತು ಪ್ರಾಮಾಣಿಕತೆಯ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಬಡ, ಶೋಷಿತ ಜನರಿಗೆ ಉದ್ಯೋಗ ನೀಡಲು ಶ್ರಮಿಸಬೇಕಿದೆ. ಗ್ರಾಮಗಳ ವಿಕಾಸವೇ ಪಿಡಿಒಗಳ ಧ್ಯೇಯ ಮತ್ತು ಗುರಿಯಾಗಬೇಕಿದೆ. ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಕೆರೆ ಅಭಿವೃದ್ಧಿಯಂತಹ ಕಾಮಗಾರಿಗಳನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ತಿಳಿಸಿದರು.
ಅಂತರ್ಜಲ ಮಟ್ಟ ಹೆಚ್ಚಳ, ಕೊಟ್ಟಿಗೆ ನಿರ್ಮಾಣ, ರಸ್ತೆ ನಿರ್ಮಾಣ, ಕಾಲುವೆ ನಿರ್ಮಾಣ ಸೇರಿ 318 ಕಾಮಗಾರಿಗಳನ್ನು ಕೈಗೊಳ್ಳಲು ವಿಬಿಜಿ ರಾಮ್ ಜಿ ಅಡಿಯಲ್ಲಿ ಅವಕಾಶವಿದೆ. ಪ್ರತಿ ದಿನ 3 ಲಕ್ಷ ಮಾನವ ದಿನ ಸೃಜನೆಯಾಗುತ್ತಿದೆ. ಈ ಮಾಸಾಂತ್ಯದೊಳಗೆ ವಿಬಿಜಿ ರಾಮ್ ಜಿ ಅಡಿಯಲ್ಲಿ ಕನಿಷ್ಠ 5ರಿಂದ 6 ಲಕ್ಷ ಮಾನವ ದಿನ ಸೃಜನೆ ಗುರಿಯೊಂದಿಗೆ ಕೆಲಸ ಮಾಡುವಂತೆ ಅವರು ಕರೆ ನೀಡಿದರು.

ಗ್ರಾಮೀಣ ಆರೋಗ್ಯ ಕಾಪಾಡಿ

ಗ್ರಾಮದ ಸ್ವಚ್ಛತೆ ಅತ್ಯಂತ ಮುಖ್ಯವಾಗಿದೆ. ಸಮುದಾಯ ಆರೋಗ್ಯ ಕಾಪಾಡುವಲ್ಲಿ ಸ್ವಚ್ಛತೆ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ, ನಿಮ್ಮ ನಿಮ್ಮ ಗ್ರಾಮಗಳ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅರಿವು ಕೇಂದ್ರ ಅಂದರೆ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಈ ಅರಿವು ಕೇಂದ್ರಗಳು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಹೇಳಿದರು.
ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತಾಂತ್ರಿಕವಾಗಿ ಹೆಚ್ಚಿನ ಅರಿವು ಪಡೆದು, ಸಕಾಲದಲ್ಲಿ ಇ-ಸ್ವತ್ತು ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು. ಶಿಕ್ಷಣ, ಮುಕ್ಕಳ ಅಪೌಷ್ಟಿಕತೆಯ ನಿವಾರಣೆಗೂ ಕ್ರಮ ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಆಯುಕ್ತೆ ಡಾ. ಅರುಂದತಿ ಚಂದ್ರಶೇಖರ್, ಬೆಂ. ನಗರ ಜಿಪಂ ಸಿಇಒ ಯತೀಶ್ ಉಪಸ್ಥಿತರಿದ್ದರು.