PDO Suicide 
ರಾಜ್ಯ

PDO Suicide: ರೋಣ ತಾಲ್ಲೂಕಿನ ಪಿಡಿಒ ಮಕ್ತುಂಹುಸೇನ ಆತ್ಮಹತ್ಯೆ!

ರೋಣ: ತಾಲ್ಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಕ್ತುಂಹುಸೇನ ಕರಡಿಗುಡ್ಡ (46) ಅವರು ನೇಣು(PDO Suicide) ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಮೂಲತಃ ಧಾರವಾಡ ಜಿಲ್ಲೆಯವರಾದ ಇವರು, ಕಳೆದ ತಿಂಗಳಷ್ಟೇ ಕೊತಬಾಳ ಪಂಚಾಯಿತಿಯ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. 2022-23ನೇ ಸಾಲಿನಲ್ಲಿ ಇವರ ಮೇಲೆ ಲೋಕಾಯುಕ್ತ ದಾಳಿಯಾಗಿತ್ತು. ಅಂದಿನಿಂದಲೂ ಈ ಪ್ರಕರಣದ ಬಗ್ಗೆ ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ ಅವರು ಸದಾ ಚಿಂತಿತರಾಗಿರುತ್ತಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?

ಕಳೆದ ಎರಡು ದಿನಗಳಿಂದ ಕರಡಿಗುಡ್ಡ ಅವರು ಪತ್ನಿಯ ಯಾವುದೇ ಕರೆಗೆ ಸ್ಪಂದಿಸಿರಲಿಲ್ಲ. ಇದರಿಂದ ಆತಂಕಗೊಂಡ ಪತ್ನಿ, ಪತಿ ವಾಸವಿದ್ದ ಬಾಡಿಗೆ ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರಿಸುವಂತೆ ವಿನಂತಿಸಿದ್ದರು. ಮಾಲೀಕರು ಮನೆಗೆ ಹೋಗಿ ಪರಿಶೀಲಿಸಿದಾಗ ಆತ್ಮಹತ್ಯೆಯ ಕೃತ್ಯ ಬೆಳಕಿಗೆ ಬಂದಿದೆ. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).