ಆಳಂದನಲ್ಲಿ ಹಮ್ಮಿಕೊಂಡಿದ್ದ ಕುಡಿವ ನೀರಿನ ತುರ್ತು ಕಾರ್ಯ ಪಡೆ ಸಭೆಯಲ್ಲಿ ಶಾಸಕ ಬಿ.ಆರ್​.ಪಾಟೀಲ್​ ಮಾತನಾಡಿದರು. ಶಿವಪುತ್ರಪ್ಪ ಪಾಟೀಲ್​, ಅಣ್ಣಾರಾವ ಪಾಟೀಲ್​, ಮಾನಪ್ಪ ಕಟ್ಟಿಮನಿ, ಸಂಗಮೇಶ ಪನಶೆಟ್ಟಿ ಇದ್ದರು. 
ರಾಜ್ಯ

ನೀರಿನ ಸಮಸ್ಯೆ ಆದ್ರೆ ಪಿಡಿಒ, ಇಒ ಹೊಣೆ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಆರ್​.ಪಾಟೀಲ್​ ಎಚ್ಚರಿಕೆ
  • ಆಳಂದನಲ್ಲಿ ಕುಡಿವ ನೀರು ಕಾರ್ಯ ಪಡೆ ಸಭೆ
ಆಳಂದ: ಬೇಸಿಗೆ ಬೀಸಿಲು ಹೆಚ್ಚಾಗುತ್ತಿದ್ದು, ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ತಾಪಂ ಇಒ ಹಾಗೂ ಗ್ರಾಪಂ ಪಿಡಿಗಳು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಜಲ ಸಮಸ್ಯೆ ಕಾಣಿಸಿಕೊಂಡಿರೆ ಅದಕ್ಕೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಶಾಸಕ ಬಿ.ಆರ್​.ಪಾಟೀಲ್​ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುಡಿವ ನೀರಿನ ತುರ್ತು ಕಾರ್ಯ ಪಡೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ಸಮಸ್ಯೆ ಕಾಣಿಸಿಕೊಂಡಿರುವ ಎಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದೀರಿ ? ಗ್ರಾಮ ಪಂಚಾಯಿತಿ ಪಿಡಿಒಗಳು ಈವರೆಗೂ ಎಷ್ಟು ಕರ ವಸೂಲಿ ಮಾಡಿದ್ದಾರೆ ? ಸುಮ್ಮನೆ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡುವುದಲ್ಲ. ಫೀಲ್ಡ್​ಗೆ ಇಳಿದು ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ಬೇಸಿಗೆ ಮುಗಿಯುವವರೆಗೂ ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ನೀರಿನ ಸಮಸ್ಯೆ ಕುರಿತು ಎಲ್ಲ ಕರೆಗಳನ್ನು ಸ್ವೀಕರಿಸಬೇಕು, ರ್ನಿಲಕ್ಷ ವಹಿಸಿದರೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಶಿರೂರ (ಜಿ) ಗ್ರಾಮದಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ ಎಂದು ಗ್ರಾಮಸ್ಥರು ನನಗೆ ಕರೆ ಮಾಡಿ ದೂರಿದ್ದಾರೆ. ಸ್ಥಳಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ? ಕೂಡಲೇ ಹಳ್ಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.
ಗ್ರಾಮ ಪಂಚಾಯಿತಿಗಳ ಕರ ನೂರರಷ್ಟು ವಸೂಲಿ ಮಾಡಲೇಬೇಕು. ಇಒ ಅವರ ವರದಿ ಪ್ರಕಾರ ಗ್ರಾಮಾಭಿವೃದ್ಧಿಗಾಗಿ ಬಡವರು ಕಡ್ಡಾಯವಾಗಿ ಕರ ಕಟ್ಟುತ್ತಾರೆ. ಆದರೆ ಶ್ರೀಮಂತರು ತೆರಿಗೆ ನೀಡುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ತೆರಿಗೆ ವಿಚಾರದಲ್ಲಿ ಶ್ರೀಮಂತ, ಬಡವ ಎಂಬ ತಾರತಮ್ಯವಿಲ್ಲ. ಕಾನೂನಿನ ಮುಂದೆ ಯಾರೂ ದೊಡ್ಡವರಿಲ್ಲ. ಪಕ್ಷಪಾತ ಮಾಡದೆ ನೋಟಿಸ್​ ನೀಡಿ ಕರ ವಸೂಲಿ ಮಾಡಿ. ಇಲ್ಲಿ ಸಂಗ್ರಹವಾದ ಹಣವನ್ನೇ ಕುಡಿವ ನೀರಿಗಾಗಿ ಬಳಸಿಕೊಳ್ಳಿ ಎಂದು ಸೂಚನೆ ನೀಡಿದರು.
ತಾಪಂ ಇಒ ಮಾನಪ್ಪ ಕಟ್ಟಿಮನಿ ಮಾತನಾಡಿ, ಹಾಳ ತಡಕಲ್​, ಜೀರಹಳ್ಳಿ, ವೈಜಾಪುರ, ಧುತ್ತರಗಾಂವ್​ ಗ್ರಾಮಗಳಲ್ಲಿ ಈಗಾಗಲೇ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆಯಲಾಗುತ್ತಿದೆ. ಖಾತರಾಬಾದ್​, ನಿಂಬಾಳ, ಖಜೂರಿ, ಗುಂಜಬಬಲಾದ್​ ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ತಲೆದೂರಿದ್ದು, ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಮುನ್ನಹಳ್ಳಿ, ತಹಸೀಲ್ದಾರ್​ ಅಣ್ಣಾರಾವ ಪಾಟೀಲ್​, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಎಇಇ ಸಂಗಮೇಶ ಬಿರಾದಾರ, ಸಿಪಿಐ ಜಗದೀಶ, ಪಿಐ ಶರಣಬಸಪ್ಪ ಕೋಡ್ಲಾ ಇತರರಿದ್ದರು.
ಕೆಲಸಕ್ಕೆ ಅಡ್ಡಿಪಡಿಸುವವರ ವಿರುದ್ಧ ಕೇಸ್​ ದಾಖಲಿಸಿ
ಮುನ್ನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಂಪ್​ಸೆಟ್​ ಸ್ಟಾಟರ್​ ತೆಗೆದುಕೊಂಡು ಹೋಗಿದ್ದಾರೆ, ಸಾವಳೇಶ್ವರದಲ್ಲಿ ಯುವಕನೋರ್ವ ಪಂಪ್​ಸೆಟ್​ ರಿಪೇರಿಗೆ ಅಡ್ಡಿ ಪಡಿಸುತ್ತಿದ್ದಾನೆ ಎಂಬ ದೂರುಗಳಿವೆ. ಅಲ್ಲದೆ ಗ್ರಾಪಂ ಪಿಡಿಒ ಅವರು ದೂರು ನೀಡಿದರೂ ಪೊಲೀಸರು ಕೇಸ್​ ಸ್ವೀಕರಿಸುತ್ತಿಲ್ಲ ಎಂಬ ಆರೋಪಗಳಿವೆ. ಇದೆಲ್ಲ ಇಲ್ಲಿಗೆ ನಿಲ್ಲಬೇಕು, ಕೂಡಲೇ ಕೆಲಸಕ್ಕೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಶಾಸಕ ಬಿ.ಆರ್​.ಪಾಟೀಲ್​ ಪೊಲೀಸರಿಗೆ ತಾಕೀತು ಮಾಡಿದರು.
ಸಸ್ಪೆಂಡ್​ ಆದ ಪಿಡಿಒಗಳು ಭಾಗಿ!
ಕರ ವಸೂಲಿಯಲ್ಲಿ ಶೇ.50ಕ್ಕೂ ಕಡಿಮೆ ಸಾಧನೆ ಹಿನ್ನೆಲೆ ಕವಲಗಾ ಗ್ರಾಪಂ ಪಿಡಿಒ ಶರಣಬಸಪ್ಪ ಕಡಗಂಚಿ ಹಾಗೂ ಅನುದಾನ ದುರ್ಬಳಕೆ ಆರೋಪದಲ್ಲಿ ಕೋಡಲ ಹಂಗರಗಾ ಪ್ರಭಾರಿ ಪಿಡಿಒ ಮಂಜೂರ್​ ಪಟೇಲ್​ ಅವರನ್ನು ಜಿಪಂ ಸಿಇಒ ಅವರು ಇತ್ತೀಚೆಗಷ್ಟೆ ಅಮಾನತು ಮಾಡಿ ಆದೇಶಿಸಿದ್ದರು. ಆದರೆ ಇಬ್ಬರೂ ಪಿಡಿಒಗಳು ಶಾಸಕ ಬಿ.ಆರ್​.ಪಾಟೀಲ್​ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕುಡಿವ ನೀರಿನ ಕಾರ್ಯಪಡೆ ಸಭೆಯಲ್ಲಿ ಹಾಜರಾಗಿ ಗ್ರಾಪಂಗಳ ಮಾಹಿತಿ ಸಲ್ಲಿಸಿದರು.

ಆಳಂದ ಬಸ್​ ನಿಲ್ದಾಣದಿಂದ ಶ್ರೀರಾಮ ಮಾರ್ಕೆಟ್​ವರೆಗಿನ ರಸ್ತೆಯ ಎರಡು ಬದಿಯಲ್ಲಿ ಅಂಗಡಿಗಳು ಮುಂಭಾಗದಲ್ಲಿ ಛಾವಣಿ ಅಳವಡಿಸಿದ್ದಾರೆ. ಹಣ್ಣಿನ ವ್ಯಾಪಾರಿಗಳು ರಸ್ತೆ ಮಧ್ಯೆದಲ್ಲಿ ನಿಲ್ಲುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತದೆ. ಪುರಸಭೆ ಹಾಗೂ ಪೊಲೀಸ್​ ಅಧಿಕಾರಿಗಳಿಗೆ ಇದೆಲ್ಲವೂ ಕಾಣಲ್ವಾ ? ಕೂಡಲೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಿ.

> ಬಿ.ಆರ್​.ಪಾಟೀಲ್​,

ಶಾಸಕ