ನೀರು ಸರಬರಾಜು ಹೊರಗುತ್ತಿಗೆ ನೌಕರರಿಗೆ ವೇತನ ಹಾಗೂ ಭವಿಷ್ಯ ನಿಧಿ ನೀಡುವಂತೆ ಒತ್ತಾಯಿಸಿ ಬೇಲೂರು ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿಗೆ ನೌಕರರು ಮನವಿ ಸಲ್ಲಿಸಿದರು. 
ರಾಜ್ಯ

ಹೊರಗುತ್ತಿಗೆ ನೌಕರರಿಗೆ ಎರಡು ತಿಂಗಳ ವೇತನ ನೀಡಿ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ
  • ನೀರು ಸರಬರಾಜು ಹೊರಗುತ್ತಿಗೆ ನೌಕರರಿಗೆ
ಬೇಲೂರು: ಪುರಸಭೆ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ನೀರು ಸರಬರಾಜು ಹೊರಗುತ್ತಿಗೆ ನೌಕರರಿಗೆ ಎರಡು ತಿಂಗಳಿಂದ ವೇತನ ಹಾಗೂ 27 ತಿಂಗಳ ಭವಿಷ್ಯ ನಿಧಿ ನೀಡದ ಹಿನ್ನೆಲೆಯಲ್ಲಿ ಜು.15ರಿಂದ ಪುರಸಭೆ ಮುಂದೆ ಪ್ರತಿಭಟಿಸಬೇಕಾಗುತ್ತದೆ. ಹಾಗಾಗಿ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು ಎಂದು ನೌಕರರು ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘದ ಗೌರವಾಧ್ಯಕ್ಷ ಮಹೇಶ್ ಮಾತನಾಡಿ, ನೌಕರರಿಗೆ ಎರಡೂವರೆ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದರಿಂದ ನೌಕರರ ಕುಟುಂಬ ಜೀವನ ನಿರ್ವಹಣೆ ಮಾಡಲು ತೊಂದರೆಯಾಗಿದೆ. ಈ ನಡುವೆ 27 ತಿಂಗಳ ಭವಿಷ್ಯ ನಿಧಿ ಹಣವನ್ನು ನೌಕರರ ವೇತನದಿಂದ ಕಡಿತಗೊಳಿಸಿದ್ದರೂ ಅವರ ಖಾತೆಗೆ ಜಮೆ ಮಾಡಿಲ್ಲ. ಪುರಸಭೆ ಮುಖ್ಯಧಿಕಾರಿ 10 ತಿಂಗಳ ಪಿಎಫ್ ಹಣ ಮಾತ್ರ ಪಾವತಿಸಿದ್ದು, ಉಳಿದ ಹಣ ಪಾವತಿಸಿಲ್ಲ. ಬೆಂಗಳೂರು ಮೂಲದ ನೀಲಾದ್ರಿ ಎಂಟರ್ ಪ್ರೈಸಸ್‌ಗೆ 4 ವರ್ಷದ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಈಗ ಗುತ್ತಿಗೆ ಅವಧಿ ಮುಗಿದಿದೆ ಎಂದು ಹೇಳಿ ಸಂಸ್ಥೆ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದೆ. ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಬಗೆಹರಿಸದಿದ್ದರೆ ನೌಕರರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಲಿದ್ದಾರೆ ಎಂದು ಎಚ್ಚರಿಸಿದರು.
ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಅಣ್ಣಯ್ಯ ಮಾತನಾಡಿ, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 29 ಕಾರ್ಮಿಕರಿಗೆ ಎರಡು ತಿಂಗಳಿಂದ ವೇತನ ಸಿಗದೆ ಸಂಕಷ್ಟ ಎದುರಾಗಿದೆ. ವೇತನಕ್ಕಾಗಿ ನಿತ್ಯ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪ್ರತಿ ತಿಂಗಳ 7ರಂದು ವೇತನ ನೀಡಬೇಕೆಂಬ ಆದೇಶವಿದ್ದರೂ ಅಧಿಕಾರಿಗಳು ಅದನ್ನು ಗಾಳಿಗೆ ತೂರಿದ್ದಾರೆ. ಈ ಬಗ್ಗೆ ಕೇಳಲು ಹೋದರೆ ಇನ್ನೂ ಟೆಂಡರ್ ಆಗಿಲ್ಲ, ಚೆಕ್ ಸಿದ್ಧವಾಗಿಲ್ಲ, ಚೆಕ್ ಸ್ಲಿಪ್ ಇಲ್ಲ, ನಾಳೆ ಬನ್ನಿ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಎರಡು ತಿಂಗಳಿಂದ ವೇತನ ಇಲ್ಲದ ಕಾರಣ ಮಕ್ಕಳ ಶಾಲಾ ಶುಲ್ಕ, ಇತರ ತುರ್ತು ಅಗತ್ಯಗಳಿಗೆ ಹಣವಿಲ್ಲದಂತಾಗಿದೆ. ಅಧಿಕಾರಿಗಳು ತಕ್ಷಣ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದರು.
ನೀರು ಸರಬರಾಜು ಹೊರಗುತ್ತಿಗೆ ನೌಕರರ ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮಕ್ಕೆ ಮುಂದಾಗಿದ್ದು, ಇನ್ನೆರಡು ದಿನಗಳಲ್ಲಿ ಎರಡು ತಿಂಗಳ ವೇತನ ನೀಡಲಾಗುವುದು ಎಂದರು.
ಹೊರಗುತ್ತಿಗೆ ನೌಕರರಾದ ರಮೇಶ್, ನರಸಿಂಹ, ಕೇಶವ, ಲೋಕೇಶ್, ಉಮೇಶ್, ಶಿವು, ಸುನೀಲ್, ಕೇಶವಮೂರ್ತಿ ಇತರರಿದ್ದರು.