ವಿಧಾನಸೌಧ 
ರಾಜ್ಯ

ರಾಜ್ಯದಲ್ಲಿ ಭಾರತ್ ಜೋಡೋ ಯುವಸಂಘಗಳ ಸ್ಥಾಪನೆಗೆ ಮುನ್ನುಡಿ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆ ಭಾರತ್ ಜೋಡೋ ಯುವಸಂಘಗಳ ಸ್ಥಾಪನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಪ್ಪಿಗೆ ಸೂಚಿಸಿ ರೂಪುರೇಷಗಳ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯಮಟ್ಟದ ಉಸ್ತುವಾರಿ ಸಮಿತಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಸಚಿವರು, ಅಧಿಕಾರಿಗಳು ಸೇರಿ 13 ಸದಸ್ಯರು ಇರಲಿದ್ದಾರೆ.
ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಮತ್ತು ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು 10 ಸಾವಿರ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ 6 ಸಾವಿರ, ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ 4 ಸಾವಿರ ಸಂಘಗಳನ್ನು ಸ್ಥಾಪಿಸಿ ತಲಾ 10 ಲಕ್ಷ ರೂ.ನಂತೆ ಒಟ್ಟಾರೆ 1 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಆಡಳಿತ ಮತ್ತು ಪಿಎಂಯು ವೆಚ್ಚಕ್ಕೆಂದು ಪ್ರತಿ ವರ್ಷ 10 ಕೋಟಿ ರೂ. ಪ್ರತ್ಯೇಕ ಅನುದಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಸರ್ಕಾರ ಅನುಮೋದನೆ ನೀಡಿದೆ.
ಪ್ರತಿ ಗ್ರಾಪಂಗೆ ಒಂದು ಸಂಘ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಸಾವಿರ ಜನಸಂಖ್ಯೆಗೆ 1 ಸಂಘ, ಪುರಸಭೆಯಲ್ಲಿ 6 ಸಾವಿರ ಜನಸಂಖ್ಯೆಗೆ ಹಾಗೂ ನಗರಸಭೆಯಲ್ಲಿ 8 ಸಾವಿರ ಹಾಗೂ ಮಹಾನಗರ ಪಾಲಿಕೆ, ಜಿಬಿಎ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪನೆಗೆ ಸೂಚಿಸಲಾಗಿದೆ. ಮಹಾನಗರ ಮತ್ತು ಜಿಬಿಎ ಯೋಜನೆಗೆ ತಗುಲುವ ವೆಚ್ಚವನ್ನು ಸ್ವಂತ ಆಯವ್ಯಯದಿಂದ ಭರಿಸಬೇಕು. ಅನುಷ್ಠಾನ ಜವಾಬ್ದಾರಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಹಿಸಲಿದೆ. ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಕಂದಾಯ ಮತ್ತು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಅನುಷ್ಠಾನ ಮಾಡಬೇಕಾಗಿದೆ. ಪ್ರತಿ ಸಂಘಕ್ಕೆ ಒಬ್ಬ ತರಬೇತುದಾರರಿಗೆ ಗೌರವಧನಕ್ಕಾಗಿ ವಾರ್ಷಿಕ ತಲಾ 24 ಸಾವಿರ ರೂ. ಒಟ್ಟು 24 ಕೋಟಿ ರೂ. ವೆಚ್ಚ ಭರಿಸಬೇಕು.
ಗ್ರಾಮೀಣ ಮತ್ತು ನಗರ ಯುವಜನತೆಯಲ್ಲಿ ಕ್ರೀಡೆ, ಫಿಟ್‌ನೆಸ್, ಆರೋಗ್ಯಕರ ಜೀವನಶೈಲಿ ಮತ್ತು ನಾಯಕತ್ವದ ಅವಕಾಶಗಳಲ್ಲಿನ ಅಡಚಣೆಗಳನ್ನು ನಿವಾರಿಸಲು ಸಾಂಸ್ಥಿಕ ವೇದಿಕೆ ಸ್ಥಾಪಿಸಲಾಗುತ್ತಿದೆ. ನಾಯಕತ್ವ, ಜವಾಬ್ದಾರಿ ಮತ್ತು ನಾಗರಿಕ ಪ್ರಜ್ಞೆ ಬೆಳೆಸಬೇಕಾಗಿದೆ. ಸಶಕ್ತ ಯುವಜನತೆ ಒಳಗೊಂಡ ಬಲಿಷ್ಠ ಸಮುದಾಯಗಳನ್ನು ಒಂದುಗೂಡಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ತಿಳಿಸಿದೆ.

ಸಂಘ ಸ್ಥಾಪನೆ, ನೋಂದಣಿ :

ಬಿಜಿವೈಎಸ್ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್, ಗ್ರಾಮ ಒನ್, ಕರ್ನಾಟಕ ಒನ್, ನಾಗರಿಕ ಸೇವಾಕೇಂದ್ರಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದು. ಆಧಾರ್ ಕಡ್ಡಾಯ, 16 ರಿಂದ 35 ವರ್ಷದ ಒಳಗಿನವರು, ಕನಿಷ್ಠ 100 ಯುವ ಸದಸ್ಯರಿರಬೇಕು, ನೋಂದಣಿ ಶುಲ್ಕ 10 ರೂ., ಪ್ರತಿ ಸಂಘವು ಕರ್ನಾಟಕ ಸೊಸೈಟಿ ರಿಜಿಸ್ಟ್ರೇಷನ್ ಆಕ್ಟ್ 1960ರಲ್ಲಿ ನೋಂದಣಿ ಆಗಲಿದೆ. ಅರ್ಜಿದಾರರು ಆಯಾ ಗ್ರಾಪಂ/ವಾರ್ಡ್ ನಿವಾಸಿ ಆಗಿರಬೇಕು. ಒಬ್ಬ ಸದಸ್ಯ ಒಂದು ಸಂಘದಲ್ಲಿ ಮಾತ್ರ ಸದಸ್ಯನಾಗಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಶಾಲೆ-ಕಾಲೇಜು, ಸರ್ಕಾರಿ ಸಮುದಾಯ ಭವನ ಅಥವಾ ಸರ್ಕಾರಿ ಕಟ್ಟಡದಲ್ಲಿ ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಆದೇಶ ಹೊರಡಿಸಲಿದೆ. ಹೊರಾಂಗಣ ಚಟುವಟಿಕೆಗಳಿಗೆ ಶಾಲಾ-ಕಾಲೇಜು, ಸರ್ಕಾರಿ ಮೈದಾನ ಬಳಕೆ ಮಾಡಬಹುದು. ಶಾಲಾ-ಕಾಲೇಜು ಅವಧಿಯ ನಂತರ ಮತ್ತು ರಜೆ ದಿನಗಳಲ್ಲಿ ಸಂಘದ ಚಟುವಟಿಕೆಗೆ ಬಳಸುವಂತೆ ಷರತ್ತು ವಿಧಿಸಲಾಗಿದೆ.

ಘಟಕದ ಆಡಳಿತ, ಕಾರ್ಯಕಾರಿ ಸಮಿತಿ

ಪ್ರತಿ ಸಂಘದಲ್ಲಿ ಆಯ್ಕೆಯಾದ 15 ಜನರಿಗೆ ಆಂತರಿಕ ಕಾರ್ಯಕಾರಿ ಸಮಿತಿ ಸದಸ್ಯರು ಇರುತ್ತಾರೆ. ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ, ಕಾರ್ಯಕಾರಿ ಸದಸ್ಯರು-12 (ಅಧ್ಯಕ್ಷ-ಉಪಾಧ್ಯಕ್ಷರಲ್ಲಿ ಓರ್ವ ಮಹಿಳೆ ಕಡ್ಡಾಯ) ಇರಬೇಕು. ಇದರಲ್ಲಿ ಎಸ್‌ಸಿ/ಎಸ್‌ಟಿ ಮೂವರು ಸದಸ್ಯರು (ಓರ್ವ ಮಹಿಳೆ), ಒಬಿಸಿ+ಅಲ್ಪಸಂಖ್ಯಾತರು-4 (ಓರ್ವ ಮಹಿಳೆ) ಮತ್ತು ಸಾಮಾನ್ಯ 8 ಸದಸ್ಯರು (ಮೂವರು ಮಹಿಳೆ) ಇರಬೇಕು. ಸಮಿತಿಯ ಅವಧಿ 2 ವರ್ಷಗಳು, ಯಾವುದೇ ಸದಸ್ಯರು ಮುಂದಿನ ಅವಧಿಗೆ ಪುನರಾವರ್ತನೆ ಆಗಲು ಅವಕಾಶ ಇಲ್ಲ. ಎಲ್ಲ ಗ್ರಾಮಗಳನ್ನು ಸಮವಾಗಿ ಪ್ರತಿನಿಧಿಸುವಂತೆ ಇರಬೇಕು, ಎಲ್ಲ ಜಾತಿ ಮತ್ತು ಧರ್ಮದವರನ್ನು ಕಡ್ಡಾಯವಾಗಿ ಹೊಂದಿರಬೇಕು.
ಅನುದಾನ ಹಂಚಿಕೆ: ಸಂಘದ ಕಾರ್ಯಕಾರಿ ಸಮಿತಿ ರಚನೆಯಾದ ಬಳಿಕ ಜುಲೈನಲ್ಲಿ 1ನೇ ಕಂತು 2 ಲಕ್ಷ ರೂ. ಪ್ರಾರಂಭಿಕ ಮೊತ್ತ ನೀಡಲಾಗುತ್ತದೆ. ಅಕ್ಟೋಬರ್‌ನಲ್ಲಿ 2ನೇ ಕಂತು 4 ಲಕ್ಷ ರೂ., ಜನವರಿಯಲ್ಲಿ 3ನೇ ಕಂತು 4 ಲಕ್ಷ ರೂ. ಅನ್ನು ಬಿಡುಗಡೆ ಮಾಡಲಾಗುತ್ತದೆ.

ಸಂಘದ ಕರ್ತವ್ಯ, ಜವಾಬ್ದಾರಿಗಳು:

-ವಾರ್ಷಿಕ ಕ್ಯಾಲೆಂಡರ್ ತಯಾರಿಸಿ ಕ್ರೀಡೆ, ಫಿಟ್‌ನೆಸ್, ಸಮುದಾಯ ಅಭಿವೃದ್ಧಿ, ಅರಣ್ಯ, ಪರಿಸರ ಸಂರಕ್ಷಣೆ, ಆರೋಗ್ಯ, ಯೋಗಕ್ಷೇಮ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ, ಕೌಶಲ, ಯುವ ಸಬಲೀಕರಣ
-ಪಾರದರ್ಶಕ ಲೆಕ್ಕಪತ್ರ ನಿರ್ವಹಣೆ, ಪ್ರತಿಯೊಂದು ಚಟುವಟಿಕೆ ಜಿಯೋ ಟ್ಯಾಗ್ ಮಾಡಿ ೆಟೋ ಅಪ್‌ಲೋಡ್ ಮಾಡಬೇಕು
-ಸಮುದಾಯದಲ್ಲಿ ಏಕತೆ, ಸಾಮರಸ್ಯ, ಸಮಗ್ರ ಅಭಿವೃದ್ಧಿಯನ್ನು ಬೆಳೆಸುವುದು, ನೈಸಿಕ, ಶಿಸ್ತಿನ ಕಾರ್ಯ ನಿರ್ವಹಿಸಬೇಕು
-ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ
-ಬಾಲ್ಯ ವಿವಾಹಗಳ ವಿರುದ್ಧ ಜಾಗೃತಿ, ಅಪೌಷ್ಟಿಕತೆ ನಿರ್ಮೂಲನೆ