ಚಿತ್ತಾಪುರ ಸ್ಟೇಷನ್​ ತಾಂಡಾದ ಬಂಜಾರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವರದಕ್ಷಿಣೆ ನಿಷೇಧ ಜಾಗೃತಿ ಸಭೆಯಲ್ಲಿ ಭೀಮಸಿಂಗ್​ ಚವ್ಹಾಣ್​, ಜಗದೀಶ ಚವ್ಹಾಣ್​, ಖೇಮುಸಿಂಗ್​, ವಿನೋದ್​ ಚವ್ಹಾಣ್​, ಚಂದು ಜಾಧವ್​, ನಾಮದೇವ ರಾಠೋಡ್​ ಇತರರಿದ್ದರು. 
ರಾಜ್ಯ

ಸರಳ ಮದುವೆ ಸಂಪ್ರದಾಯಕ್ಕೆ ಶ್ರೀಕಾರ

ಪ್ರಮುಖ ಮುಖ್ಯಾಂಶಗಳು

  • ಸ್ಟೇಷನ್​ ತಾಂಡಾದಲ್ಲಿ ಆಯೋಜಿಸಿದ್ದ ಬಂಜಾರ ಸಭೆಯಲ್ಲಿ ನಿರ್ಣಯ
  • ವರದಕ್ಷಿಣೆಗಿಲ್ಲ ಅವಕಾಶ
ಚಿತ್ತಾಪುರ: ಬಂಜಾರ ಸಮಾಜದಲ್ಲಿ ನೆಲೆಯೂರಿರುವ ವರದಣೆ ಪಿಡುಗನ್ನು ಹೊಡೆದೊಡಿಸುವುದು ಹಾಗೂ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ತಾಲೂಕಿನ ಎಲ್ಲ ತಾಂಡಾಗಳ ಮುಖಂಡರು ಒಕ್ಕೋರಲಿನ ನಿರ್ಧಾರ ಕೈಗೊಂಡರು.
ಸ್ಟೇಷನ್​ ತಾಂಡಾದ ಬಂಜಾರ ಭವನದಲ್ಲಿ ಎಲ್ಲ ತಾಂಡಾಗಳ ನಾಯಕ, ಕಾರಬಾರಿ, ಡಾವ, ಪಂಚ, ನಸಾಬಿಗಳ ಸಮ್ಮುಖದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಂಜಾರ ಸಮಾಜದ ಸಭೆಯಲ್ಲಿ ಚರ್ಚೆ ನಡೆಸಿ ಒಮ್ಮತದಿಂದ ರ್ನಿಣಯಗಳನ್ನು ಅಂಗಿಕರಿಸಲಾಯಿತು.
ಇಂದಿನ ದುಬಾರಿ ವೆಚ್ಚದ ಮದುವೆಗಳಿಂದ ಅನೇಕ ಕುಟುಂಬ ಬೀದಿಗೆ ಬರುತ್ತಿವೆ. ವರದಣೆ ಪಿಡುಗು ಶ್ರೀಮಂತರಿಗಿಂತ ಬಡವರಿಗೆ ಶಾಪವಾಗುತ್ತಿದೆ. ವರದಣೆ ಸೇರಿ ಅನೇಕ ಖರ್ಚುಗಳು ಇತಿಮಿತಿಯಲ್ಲಿ ಇರಬೇಕು. ಶ್ರೀಮಂತ, ಬಡವರು ಎನ್ನದೇ ಎಲ್ಲರೂ ಒಂದೇ ಸಮಾನರು ಎಂಬ ಭಾವನೆಯೊಂದಿಗೆ ಮದುವೆ ಸಂಪ್ರದಾಯ ನಡೆಯಬೇಕು. ಗಂಡಿನವರು ಹೆಣ್ಣಿನವರಿಗೆ ಕಾನಸುಳ್ಳಿಗೆ 1,100 ರೂ., ಮೋಟು ಕರ 21,551 ರೂ., ಗೋಳ ಕಾರ್ಯಕ್ರಮಕ್ಕೆ 600 ರೂ., ಗೋಟ್​ ಕಾರ್ಯಕ್ರಮಕ್ಕೆ ಪಂಚರಿಗೆ 21,000 ರೂ. ನೀಡಬೇಕು ಎಂದು ನಿರ್ಧರಿಸಲಾಯಿತು.
ಹೆಣ್ಣಿನ ಕಡೆಯವರು ಗಂಡಿನವರಿಗೆ ಗೋಳ ಕಾರ್ಯಕ್ರಮಕ್ಕೆ 500 ರೂ., ಹೆಣ್ಣಿನವರು ಮದುವೆಗಾಗಿ 20 ಗ್ರಾಂ ಬಂಗಾರ ಮಾತ್ರ ಗಂಡಿನವರಿಗೆ ನೀಡಬೇಕು. ಅದರಲ್ಲಿ 10 ಗ್ರಾಂ ಹೆಣ್ಣಿಗೆ, 10 ಗ್ರಾಂ ಗಂಡಿಗೆ ನೀಡಬೇಕು. ಮಂಚ ಸೇರಿ ಇತರೆ ಸಾಮಗ್ರಿಗೆ ಹೆಣ್ಣಿವರು ಗಂಡಿನವರಿಗೆ 51,000 ರೂ. ಹಣ ಕೊಡಬೇಕು. ಗಂಡಿನ ಕಡೆಯವರು ಸಾಕ ಪಿಸಾ ಎಂದು ತಾಂಡಾದ ನಾಯಕರಿಗೆ 1 ರೂ., ನಾಯಕರ ಗಾದಿಗೆಂದು 201 ರೂ. ನೀಡಬೇಕು. ನಿಶ್ಚಿತಾರ್ಥ ಸಮಯದಲ್ಲಿ ಕುಪ್ಪಸ, ಟೋಪಿ ನಿಷೇಧಿಸಲಾಗಿದೆ. ಪಂಗಡಿ, ಹಳದಿ ಕಾರ್ಯಕ್ರಮ, ಮದುವೆ ಮೆರವಣಿಗೆಗೆ ಡಿಜೆ ಸೌಂಡ್​ ಬಳಕೆ ಸಂಪೂರ್ಣ ನಿಷೇಧಿಸಿ ರ್ನಿಣಯ ಕೈಗೊಳ್ಳಲಾಯಿತು.
ಅನಿಲ್​ ಮಹಾರಾಜ್​, ಬಂಜಾರಾ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್​ ಚವ್ಹಾಣ್​, ಪ್ರಮುಖರಾದ ಜಗದೀಶ ಚವ್ಹಾಣ್​, ಖೇಮುಸಿಂಗ್​, ವಿನೋದ್​ ಚವ್ಹಾಣ್​, ಚಂದು ಜಾಧವ್​, ನಾಮದೇವ ರಾಠೋಡ್​, ಜಗದೀಶ್​ ಚವ್ಹಾಣ್​, ಕಿಶನ್​ ನಾಯಕ, ತುಕಾರಾಮ್​ ನಾಯಕ, ಶಂಕರ್​ ನಾಯಕ, ಲಕ್ಷ$್ಮಣ್​ ನಾಯಕ, ವಿಜಯಕುಮಾರ್​ ಚವ್ಹಾಣ್​, ಅಶೋಕ ರಾಠೋಡ್​, ಹೀರಾಸಿಂಗ್​ ರಾಠೋಡ್​, ಸಂತೋಷ್​ ರಾಠೋಡ್​, ವಿಷ್ಣು ನಾಯಕ್​ ಕಾರಬರಿ, ಶಂಕರ ಪವಾರ್​ ಸರಪಂಚ್​, ರಾಜೇಶ ಪವಾರ್​ ಡಾವ್​, ಅಂಬು ಚವ್ಹಾಣ್​, ರಾಜು ಪವಾರ್​ ಇತರರಿದ್ದರು.
ನಿಯಮ ಪಾಲಿಸದಿದ್ದರೆ
ತಾಂಡಾದಿಂದ ಬಹಿಷ್ಕಾರ
ನಿಯಮಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ರ್ನಿಣಯ ಮೀರಿ ಏನಾದರೂ ಮಾಡಿದರೆ ತಾಂಡಾದ ನಾಯಕರು, ಪಂಚರು, ಡಾವ, ಕಾರಬಾರಿ ಕೈಗೊಳ್ಳುವ ರ್ನಿಣಯಕ್ಕೆ ಬದ್ಧರಾಗಿರಬೇಕು. ರ್ನಿಣಯಕ್ಕೆ ಬದ್ಧರಾಗಿ ನಡೆದುಕೊಳ್ಳದಿದ್ದರೆ ತಾಂಡಾದಿಂದ ಬಹಿಷ್ಕಾರ ಹಾಕಲಾಗುವುದು ಮತ್ತು 5 ಲಕ್ಷ ರೂ. ದಂಡ ವಿಧಿಸಲಾಗುವುದು ಎಂಬ ರ್ನಿಣಯ ಮಂಡಿಸಲಾಯಿತು.
ಹೊಸ ಸಂಪ್ರದಾಯದಂತೆ ಮದುವೆ ನಿಶ್ಚಯ
ಚಿತ್ತಾಪುರ ತಾಲೂಕಿನ ತರಿತಾಂಡಾದಲ್ಲಿ ಕೋಮಲ ಜಾಧವ್​ ಹಾಗೂ ಕಡಗಂಚಿ ತಾಂಡಾದ ಅಮನ್​ ರಾಠೋಡ್​ ಕುಟುಂಬದವರು ಸೋಮವಾರ ಬಂಜಾರ ಸಮಾಜದ ಹೊಸ ಮದುವೆ ಸಂಪ್ರದಾಯದಂತೆ ವಿವಾಹ ನಿಶ್ಚಯ ಮಾಡಿಕೊಂಡು ಮಾದರಿಯಾದರು. ಭಾನುವಾರವಷ್ಟೆ ಹೊಸ ಸಂಪ್ರದಾಯ ಜಾರಿಗೆ ತಂದಿದ್ದು, ಮರುದಿನವೇ ಕಾರ್ಯರೂಪಕ್ಕೆ ಬಂದಂತಾಗಿದೆ.