ಜೇವರ್ಗಿ ತಾಲೂಕು ಕ್ರೀಡಾಂಗಣಕ್ಕೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಭೇಟಿ ನೀಡಿ ಕುಸಿದು ಬಿದ್ದಿರುವ ಪೆವಿಲಿಯನ್ ಛಾವಣಿಯನ್ನು ಪರಿಶೀಲಿಸಿದರು. ರೌಫ್ ಹವಾಲ್ದಾರ್, ಸಾಯಬಣ್ಣ ದೊಡ್ಡಮನಿ, ಶಿವರಡ್ಡಿ ಹಾಲ್ಗಡ್ಲಾ, ಗುರುಲಿಂಗಪ್ಪಗೌಡ ಮಾಲಿಪಾಟೀಲ್ ಇದ್ದರು.
- ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಆರೋಪ
- ಜೇವರ್ಗಿ ತಾಲೂಕು ಕ್ರೀಡಾಂಗಣಕ್ಕೆ ಭೇಟಿ
ಜೇವರ್ಗಿ: ತಾಲೂಕು ಕ್ರೀಡಾಂಗಣದ ಪೆವಿಲಿಯನ್ ಮೇಲೆ ಅಳವಡಿಸಿದ್ದ ಛಾವಣಿ ಗಾಳಿ, ಮಳೆಗೆ ಕುಸಿದು ಬಿದ್ದಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ದೂರಿದರು.
ತಾಲೂಕು ಕ್ರೀಡಾಂಗಣಕ್ಕೆ ಸೋಮವಾರ ಭೇಟಿ ನೀಡಿ ಕುಸಿದಿರುವ ಛಾವಣಿ ವೀಕ್ಷಿಸಿದ ಅವರು, ಕ್ರೀಡಾಂಗಣ ಸುತ್ತಲೂ ನಿರ್ಮಿಸಿರುವ ಸಿಸಿ ರಸ್ತೆ ಕಾಮಗಾರಿ ಆರಂಭದ ಹಂತದಲ್ಲಿಯೇ ಬಿರುಕು ಬಿಟ್ಟಿದೆ. ಇದಕ್ಕೂ ಮುನ್ನ ಒಳ ಕ್ರೀಡಾಂಗಣ ಕಾಮಗಾರಿ ಹಂತದಲ್ಲಿಯೇ ಕುಸಿದು ಬಿದ್ದು ವ್ಯಕ್ತಿಯೊಬ್ಬ ಮೃತ ಪಟ್ಟಿದ್ದರು. ಇಷ್ಟೆಲ್ಲ ಅವಡ ನಡೆದರೂ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಕಿಡಿಕಾರಿದರು.
ಹಿಡಿತವಿಲ್ಲದ ಆಡಳಿತದಿಂದ ಸರ್ಕಾರದಿಂದ ಬರುತ್ತಿರುವ ಅನುದಾನ ಪೋಲಾಗುತ್ತಿದೆ. ಭೂಸೇನಾ ನಿಗಮದಿಂದ ನಡೆಯುತ್ತಿರುವ ಸಾಕಷ್ಟು ಕಾಮಗಾರಿಗಳು ವರ್ಷಗಳೇ ಉರುಳಿದರೂ ಮೆಟಲಿಂಗ್ ಹಂತದಿಂದ ಮೇಲೇಳುತ್ತಿಲ್ಲ. ಹೀಗಾದಲ್ಲಿ ತಾಲೂಕು ಅಭಿವೃದ್ಧಿ ಪಥದತ್ತ ಸಾಗುವುದು ಯಾವಾಗ ? ಭೂಸೆನಾ ನಿಗಮ ಅಧಿಕಾರಿಗಳು ಕಚೇರಿಯಲ್ಲೂ ಕಾಣಲ್ಲ, ದೂರವಾಣಿಯಲ್ಲೂ ಸಂಪರ್ಕಕ್ಕೆ ಸಿಗಲ್ಲ. ಶಾಸಕ ಡಾ.ಅಜಯಸಿಂಗ್ ಅವರಿಗೆ ತಾಲೂಕು ಆಡಳಿತದ ಮೇಲೆ ಹಿಡಿತವಿಲ್ಲದಂತಾಗಿದೆ, ಹೀಗಾಗಿ ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದೆ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ರೌಫ್ ಹವಾಲ್ದಾರ್, ಪ್ರಮುಖರಾದ ಸಾಯಬಣ್ಣ ದೊಡ್ಡಮನಿ, ಶಿವರಡ್ಡಿ ಹಾಲ್ಗಡ್ಲಾ, ಗುರುಲಿಂಗಪ್ಪಗೌಡ ಮಾಲಿಪಾಟೀಲ್, ಸಂತೋಷ ಸಜ್ಜನ್, ರಾಜು ತಳವಾರ, ಸಿದ್ದರಾಮ ಯಳಸಂಗಿ, ಭೀಮರಾಯ ಹಳ್ಳಿ, ವಿಜಯಕುಮಾರ ಬೆಲ್ಲದ, ಶರಣು ಕೋಳಕೂರ, ರವೀಂದ್ರ ಪಡಶೆಟ್ಟಿ, ವೀರು ಪಾಟೀಲ್, ಶರಣು ಪೂಜಾರಿ, ರಾಕೇಶ ಹರಸೂರ ಇತರರಿದ್ದರು.