Mid-Air Scare 
ರಾಜ್ಯ

ಅಯ್ಯೋ ದೇವ್ರೇ ಕಾಪಾಡು..!; FLY91ರಲ್ಲಿ ತಾಂತ್ರಿಕ ದೋಷ, 4 ಗಂಟೆ ಆಗಸದಲ್ಲೇ ಹಾರಡಿ ಫ್ಲೈಟ್​ ಪ್ರಯಾಣಿಕರು ಕಂಗಾಲು..Mid-Air Scare

ಪ್ರಮುಖ ಮುಖ್ಯಾಂಶಗಳು

  • ಹುಬ್ಬಳ್ಳಿಯಲ್ಲಿ ಲ್ಯಾಂಡ್​ ಆಗಬೇಕಿದ್ದ FLY91ರಲ್ಲಿ ತಾಂತ್ರಿಕ ದೋಷ
  • 4ಗಂಟೆ ಆಗಸದಲ್ಲೇ ಹಾರಾಟ ನಡೆಸಿ, ಬೆಂಗಳೂರಿನಲ್ಲಿ ಲ್ಯಾಂಡ್​ ಆದ ಫ್ಲೈಟ್
  • ಹವಾಮಾನ ವೈಪರೀತ್ಯದಿಂದ ಹೀಗಾಗುತ್ತದೆ ಎಂದ ಅಧಿಕಾರಿಗಳು
  • ವಿಮಾನದಲ್ಲಿದ್ದ ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಸೇಫ್
ಬೆಂಗಳೂರು: ಇತ್ತೀಚೆಗೆಷ್ಟೇ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಹೈದರಾಬಾದ್​ಗೆ ವಿಮಾನ ಹಾರಾಟ ಆರಂಭಿಸಿದ್ದ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಫ್ಲೈ 91ರಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿ ಪ್ರಯಾಣಿಕರು, ಆತಂಕಗೊಂಡು ದಿಕ್ಕು ತೋಷದೆ ಪರದಾಡಿದ ಘಟನೆ ಇಂದು ನಡೆದಿದೆ.
ಹೈದರಾಬಾದ್​ನಿಂದ ಹೊರಟಿದ್ದ ಫ್ಲೈ 91ನಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಈ ಹಿನ್ನೆಲೆ ಹುಬ್ಬಳ್ಳಿ ಏರ್ಪೋರ್ಟ್​ನಲ್ಲಿ ಲ್ಯಾಂಡ್​ ಆಗಬೇಕಿದ್ದ ವಿಮಾನವು 4 ಗಂಟೆಗಳ ಕಾಲ ಆಕಾಶದಲ್ಲೇ ಹಾರಾಟ ನಡೆಸಿ, ಕೊನೆಗೆ ಬೆಂಗಳೂರಿನಲ್ಲಿ ಲ್ಯಾಂಡ್​ ಆಗಿದೆ. ಈ ವೇಳೆ ಪ್ರಯಾಣಿಕರು ದಿಗ್ಭ್ರಾಂತರಾಗಿ ಕಣ್ಣೀರಿಟ್ಟ ವಿಡಿಯೋಗಳು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
4ಗಂಟೆ ಆಗಸದಲ್ಲೇ ಹಾರಾಟ
ಫ್ಲೈ 91 ವಿಮಾನವು ಏಪ್ರಿಲ್​ 2ನೇ ವಾರದಿಂದ ಹೈದರಾಬಾದ್​​, ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಸೇವೆಯನ್ನು ನೀಡುತ್ತಿದೆ. ಭಾನುವಾರ(ಏ.19)ರಂದು ಹೈದರಾಬಾದ್​​ನಿಂದ ಮಧ್ಯಾಹ್ನ 3ಗಂಟೆಗೆ ಟೇಕ್​ ಆಗಿದ್ದ ವಿಮಾನ ಸಂಜೆ 4:30ಗೆ ಹುಬ್ಬಳ್ಳಿಯಲ್ಲಿ ಲ್ಯಾಂಡ್​ ಆಗಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದ ಆಗಸದಲ್ಲೇ 4 ಗಂಟೆ ಕಾಲ ಕಳೆದು ನಂತರ ಬೆಂಗಳೂರು ಏರ್ಪೋರ್ಟ್​​ನಲ್ಲಿ ಲ್ಯಾಂಡ್​ ಆಗಿದೆ.

ದೇವ್ರೇ ಕಾಪಾಡಪ್ಪ....

ಅಯ್ಯೋ ದೇವರೆ ಇವನು ಹೀಗ್ಯಾಕೆ ಮಾಡ್ತಿದ್ದಾನೆ. ನಮ್ಮ ಪ್ರಾಣ ನೀನೆ ಉಳಿಸಬೇಕು ಎಂದು ಹಣೆಗೆ ಬಿಂದಿ ಇಟ್ಟು ಕೆಂಪು ಡ್ರೆಸ್​ ತೊಟ್ಟಿದ್ದ ಮಹಿಳೆ ಬೇಡಿಕೊಳ್ಳುತ್ತಿರುವ ವಿಡಿಯೋ ಸದ್ಯ ಸದ್ದು ಮಾಡುತ್ತಿದ್ದಾರೆ. ಅವರು ಅಳುವೇ ನಿಲ್ಲಿಸದ್ದನ್ನು ಕಂಡ ಅವರ ಪಕ್ಕದಲ್ಲೇ ಇದ್ದ ಪತಿ ಅಳಬೇಡ, ಸುಮ್ನಿರು ಎನು ಸಮಸ್ಯೆಯಾಗೋದಿಲ್ಲ ಎಂದಿದ್ದಾರೆ. ವಿಮಾನದ ತಾಂತ್ರಿಕ ದೋಷವು ಪ್ರಯಾಣಿಕರನ್ನು ನಡುಗಿಸಿತ್ತು.

ಹೆದರಬೇಡಿ ಎಂದ ಪೈಲಟ್

ಇನ್ನು ಪೈಲೆಟ್​ ಮಾತನಾಡಿ, ಫ್ಲೈಟ್​ ಲ್ಯಾಂಡ್ ಮಾಡಲು ನೋಡುತ್ತಿದ್ದೇವೆ. ಏನೇ ವಿಚಾರ ಇದ್ದರೂ ನಿಮಗೆ ಮಾಹಿತಿ ಕೊಡ್ತೇವೆ. ಕೊಂಚ ತಾಳ್ಮೆಯಿಂದಿರಿ ಎಂದು ಬೇಡಿಕೊಂಡಿದ್ದಾರೆ. ಇದಕ್ಕೆ ಕೆಲವು ವಿಮಾನವನ್ನು ಬೆಳಗಾವಿ ಅಥವಾ ಬೆಂಗಳೂರು ಏರ್ಪೋರ್ಟ್​ನಲ್ಲಿ ಲ್ಯಾಂಡ್​ ಮಾಡ್ಬೋದಾ ನೋಡಿ ಎಂದು ಸಲಹೆ ಕೊಟ್ಟಿದ್ದಾರೆ.

ಫ್ಲೈ 91ರ ಅಧಿಕಾರಿ ಏನಂದ್ರು?

ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, 'ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಒಂದು ಗಂಟೆ ಹುಬ್ಬಳ್ಳಿ ಬಳಿಯೇ ಹಾರಾಟ ನಡೆಸಿ, ನಂತರ ಬೇರೆಡೆಗೆ ತೆರಳಿದೆ. ಈ ರೀತಿ ಆದಾಗ ವಿಮಾನಗಳನ್ನು ಲ್ಯಾಂಡ್​ ಮಾಡುವ ಬದಲಾಗಿ ಹಾರಾಟ ಮುಂದುವರೆಸುತ್ತಾರೆ. ಇದು ಪೈಲಟ್​ಗಳ ಮೇಲೆ ನಿರ್ಧಾರವಾಗುತ್ತದೆ. ಬೆಂಗಳೂರು ಏರ್ಪೋರ್ಟ್​ನಲ್ಲಿ ವಿಮಾನ ಲ್ಯಾಂಡ್​ ಆಗಿ ಮತ್ತೆ ಹುಬ್ಬಳಿಗೆ ತೆರಳಿದೆ' ಎಂದು ಹೇಲಿದರು.
'ಇತ್ತೀಚೆಗೆ ಮುಂಬೈನಿಂದ ಕೊಲ್ಹಾಪುರಿಗೆ ತೆರಳುತ್ತಿದ್ದ ವಿಮಾನವೂ ಸಹ ಹವಾಮಾನ ವೈಪರೀತ್ಯದಿಂದಾಗಿ ಗೋವಾದಲ್ಲಿ ಲ್ಯಾಂಡ್​ ಮಾಡಲಾಗಿತ್ತು. ಇದು ಪ್ರಯಾಣಿಕರ ಸುರಕ್ಷತೆಗಾಗಿ ತೆಗೆದುಕೊಳ್ಳುವ ನಿರ್ಧಾರ. ಸದ್ಯ ಅವರು ತೆಗೆದುಕೊಂಡ ನಿರ್ಧಾರದಿಂದ ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ' ಎಂದು ಅವರು ಹೇಳಿದರು, (ಏಜೆನ್ಸೀಸ್​).