ಸಿಂದಗಿ ನಗರದ ಶ್ರೀ ಚನ್ನವೀರ ಸ್ವಾಮೀಜಿ ಬಸ್ ನಿಲ್ದಾಣದಲ್ಲಿ ದಿ. ಎಂ.ಸಿ. ಮನಗೂಳಿ ಪ್ರತಿಷ್ಠಾನದಿಂದ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಚಾಲನೆ ನೀಡಿದರು. ಶಾಸಕ ಅಶೋಕ ಮನಗೂಳಿ, ಅಶೋಕ ವಾರದ, ಶಾಂತಪ್ಪ ರಾಣಾಗೋಳ ಇತರರಿದ್ದರು.
- ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿಕೆ
- ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ
ಸಿಂದಗಿ: ಶುದ್ಧ ಮತ್ತು ಆರೋಗ್ಯಕರ ಕುಡಿಯುವ ನೀರು ಒದಗಿಸುವ ಮೂಲಕ ಪ್ರಯಾಣಿಕರ ಆರೋಗ್ಯಕ್ಕೆ ಆದ್ಯತೆ ನೀಡಿರುವುದು ಸ್ತುತ್ಯಾರ್ಹ ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ನಗರದ ಶ್ರೀ ಚನ್ನವೀರ ಸ್ವಾಮೀಜಿ ಬಸ್ ನಿಲ್ದಾಣದಲ್ಲಿ ಮಾಜಿ ಸಚಿವ ದಿ. ಎಂ.ಸಿ. ಮನಗೂಳಿ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಸಾರ್ವಜನಿಕ ಸಂಚಾರಿಗಳಿಗಾಗಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ದಿ. ಮನಗೂಳಿ ಅವರು ಹಾಗೂ ಅವರ ಕುಟುಂಬದವರು ಸದಾ ಸಾಮಾಜಿಕ ಸೇವೆಗಳಿಗೆ ಮೊದಲಿಗರು. ಬಸ್ ನಿಲ್ದಾಣಕ್ಕೆ ಬರುವ ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ಶುದ್ಧವಾದ ನೀರು ಒದಗಿಸುವ ಮೂಲಕ ಅವರೆಲ್ಲರ ಆರೋಗ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಮೊದಲ ಹಂತದಲ್ಲಿ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಲಾಗಿತ್ತು. ಈ ಬಾರಿ ನಿತ್ಯ ಪ್ರಯಾಣಿಕರ ಅನುಕೂಲಕ್ಕಾಗಿ, ನೀರಿನ ಘಟಕ ಆರಂಭಿಸಲಾಗಿದ್ದು ಸಾರ್ವಜನಿಕರು, ಪ್ರಯಾಣಿಕರು ಈ ಸೌಲಭ್ಯವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಅಶೋಕ ವಾರದ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಆಲಮೇಲ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ, ಅಲ್ಪಸಂಖ್ಯಾತ ಘಟಕದ ಮುಖಂಡ ಎಂ.ಎ. ಖತೀಬ, ಶಾಂತಪ್ಪ ರಾಣಾಗೋಳ, ಪ್ರವೀಣ ಕಂಟಿಗೊಂಡ, ಪರಶುರಾಮ ಕಾಂಬಳೆ, ಸಾಯಬಣ್ಣ ಪುರಾದಾಳ, ಸುನಂದಾ ಯಂಪುರೆ, ಜಯಶ್ರೀ ಹದನೂರ, ಸಾರಿಗೆ ಸಿಬ್ಬಂದಿಗಳು ಇದ್ದರು.