ಮಹಾಲಿಂಗಪುರ ಸಮೀಪದ ಕೆಸರಗೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ನ್ಯಾಯವಾದಿ ಶಿವಾನಂದ ಉಳ್ಳಾಗಡ್ಡಿ ಉದ್ಘಾಟಿಸಿದರು. ಸಿದ್ದುಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಮಹಾಲಿಂಗ ನಿಪನ್ಯಾಳ, ಮಹೇಶಚಂದ್ರ ತೇಲಿ, ಶ್ರೀಶೈಲ ಕಾರಜೋಳ, ಗಿರೀಶ ಕೋರಡ್ಡಿ ಇತರರಿದ್ದರು. 
ರಾಜ್ಯ

ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ನ್ಯಾಯವಾದಿ ಶಿವಾನಂದ ಉಳ್ಳಾಗಡ್ಡಿ ಅಭಿಮತ
  • ಕೆಸರಗೊಪ್ಪ ಪ್ರೀಮಿಯರ್ ಲೀಗ್
ಮಹಾಲಿಂಗಪುರ: ಕ್ರಿಕೆಟ್ ಆಡುವುದರಿಂದ ದೈಹಿಕ ಸದೃಢತೆ ಹಾಗೂ ಸಹಿಷ್ಣುತೆ ಹೆಚ್ಚುತ್ತದೆ. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ ಎಂದು ನ್ಯಾಯವಾದಿ ಶಿವಾನಂದ ಉಳ್ಳಾಗಡ್ಡಿ ಹೇಳಿದರು.
ಸಮೀಪದ ಕೆಸರಗೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತರುಣ ಕ್ಷೇಮಾಭಿವೃದ್ಧಿ ಸಂಘ ಹಾಗೂ ನೇತಾಜಿ ಸ್ಫೋರ್ಟ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಭಾನುವಾರ ಪ್ರಥಮ ಬಾರಿಗೆ ಹಮ್ಮಿಕೊಂಡ ಕೆಸರಗೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲು ಗ್ರಾಮದಲ್ಲಿ ಮೈದಾನಗಳ ಸೌಲಭ್ಯವಿರಲಿಲ್ಲ. ಗ್ರಾಮಕ್ಕೆ ಸುಸಜ್ಜಿತ ಮೈದಾನ, ಪ್ರೌಢಶಾಲೆ ಮತ್ತು ಪಿಯು ಕಾಲೇಜ್ ಸೌಲಭ್ಯ ಒದಗಿಸಿದ ಗ್ರಾಮದ ಹಿರಿಯರ ಕಾರ್ಯ ಶ್ಲಾಘನೀಯ ಎಂದರು.
ರನ್ನಬೆಳಗಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ ಮಾತನಾಡಿ, ಕ್ರಿಕೆಟ್ ಆಟಕ್ಕೆ ಮನಸೋಲದವರೇ ಇಲ್ಲ. ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕ ಮತ್ತು ಯುಕ್ತಿಯ ಮೂಲಕ ಯುವಕರು ಸದಾ ಕ್ರಿಯಾಶೀಲರಾಗಿರಲು ಸಾಧ್ಯವಾಗುತ್ತದೆ. ಗ್ರಾಮಸ್ಥರು, ಯುವಕರು ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಬೆಂಬಲಿಸುವ ಮೂಲಕ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿ ಇತರ ಗ್ರಾಮಗಳಿಗೆ ಮಾದರಿಯಾಗಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮೈದಾನ ಪೂಜೆ ಸಲ್ಲಿಸಿದರು. ಮಹಾಲಿಂಗ ನಿಪನ್ಯಾಳ, ಮಹೇಶಚಂದ್ರ ತೇಲಿ, ಶ್ರೀಶೈಲ ಕಾರಜೋಳ, ಗಿರೀಶ ಕೋರಡ್ಡಿ, ಷಣ್ಮುಖ ಸುತಾರ ಜ್ಯೋತಿ ಬೆಳಗಿಸಿದರು. ಡಾ.ವಿನೋದ ಮೇತ್ರಿ ಜರ್ಸಿ ಬಿಡುಗಡೆಗೊಳಿಸಿದರು. ದುಂಡಪ್ಪ ಜಾಧವ, ಪರಪ್ಪ ಬ್ಯಾಕೂಡ ಚನ್ನು ದೇಸಾಯಿ, ಸತೀಶ ಪೂಜಾರಿ, ಮಹೇಶ ಬಗಲಿ ಟ್ರೋಫಿ ಅನಾವರಣಗೊಳಿಸಿದರು.
ಶಿಕ್ಷಕರಾದ ಪರಶುರಾಮ ಮಾದರ ಸ್ವಾಗತಿಸಿದರು. ಹಣಮಂತ ಬ್ಯಾಕೂಡ ನಿರೂಪಿಸಿ-ವಂದಿಸಿದರು. ರಾಯಪ್ಪಗೌಡ ಪಾಟೀಲ, ಪ್ರಶಾಂತ ದೇಸಾಯಿ, ಮಲ್ಲಪ್ಪ ಜಗದಾಳ, ಲಕ್ಷ್ಮಣ ಹುಣಶ್ಯಾಳ, ರಾಹುಲ್ ಹುಣಸಿಕಟ್ಟಿ ಸೇರಿ ತರುಣ ಕ್ಷೇಮಾಭಿವೃದ್ಧಿ ಸೇವಾ ಸಂಘ ಹಾಗೂ ನೇತಾಜಿ ಕ್ರಿಕೆಟ್ ಕ್ಲಬ್‌ನ ಸದಸ್ಯರು ಪಂದ್ಯಾವಳಿಯನ್ನು ಸಂಘಟಿಸಿದ್ದರು.