ಶಹಾಪುರದಲ್ಲಿ 18ರಂದು ನಡೆಯುವ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ತೆರಳುವುದಕ್ಕಾಗಿ ದೋರನಹಳ್ಳಿಯ ಶಾಂಭವಿ ಮಾತಾ ಚಿಕ್ಕಮಠದಲ್ಲಿ ಕರೆದಿದ್ದ ಸಭೆಯಲ್ಲಿ ಪೀಠಾಧಿಪತಿ ಶಿವಲಿಂಗರಾಜೇಂದ್ರ ಶಿವಾಚಾರ್ಯರು ಮಾತನಾಡಿದರು. ಸೂಗೂರೇಶ್ವರ ಶಿವಾಚಾರ್ಯ, ಸಿದ್ದೇಶ್ವರ ಶಿವಾಚಾರ್ಯ, ಶೇಖಯ್ಯ ದೇವರು ಇಟಗಿ ಇದ್ದರು.
- ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶ್ರೀ ಮನವಿ
- ದೋರನಹಳ್ಳಿಯಲ್ಲಿ ಕಾರ್ಯಕರ್ತರ ಸಭೆ
ದೋರನಹಳ್ಳಿ: ಶಹಾಪುರದಲ್ಲಿ ಸೋಮವಾರ ನಡೆಯುವ ಬಸವಾದಿ ಶರಣರ ಹಿಂದೂ ಬೃಹತ್ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಹಿಂದೂಪರ ಸಂಟನೆಗಳು ಭಾಗವಹಿಸಬೇಕು ಎಂದು ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶಾಂಭವಿಮಾತಾ ಚಿಕ್ಕಮಠದಲ್ಲಿ ಶುಕ್ರವಾರ ಸಂಜೆ ಕರೆದಿದ್ದ ಪಟ್ಟಣದ ಹಿಂದೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಂಸತಿ ನಾಶ ಮಾಡಲೆಂದು ಕೆಲ ದುಷ್ಟಶಕ್ತಿಗಳು ನಿರಂತರ ಪ್ರಯತ್ನ ನಡೆಸುತ್ತಿವೆ. ಆದರೆ ಹಿಂದೂ ಧರ್ಮದ ಉಳಿವಿಗಾಗಿ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ. ಹೀಗಾಗಿ ಶಹಾಪುರದಲ್ಲಿ ಹಮ್ಮಿಕೊಂಡ ಬೃಹತ್ ಸಮಾವೇಶದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ಅವರು ಹೇಳಿದರು.
ಕೆಲ ಪಟ್ಟಭದ್ರ ದುಷ್ಟ ಶಕ್ತಿಗಳು ಈ ಧರ್ಮದ ಕುರಿತು ಇಲ್ಲ ಸಲ್ಲದ ಆರೋಪ ಮಾಡುವುದರ ಜತೆಗೆ ನಮ್ಮ ಆರಾಧ್ಯ ದೇವತೆಗಳನ್ನು ಅಪಾಹಾಸ್ಯ, ಅವಮಾನ, ತಮಾಷೆ, ಕುಹಕ ಮಾತುಗಳಿಂದ ಸದಾ ಅಗೌರವ ಮಾಡುತ್ತಿದ್ದು, ಅದರಿಂದ ನಮ್ಮ ಧಾರ್ಮಿಕ ಭಾವನೆಗೆ ತೀರಾ ದಕ್ಕೆಯುಂಟಾಗುತ್ತಿದೆ. ಇದನ್ನು ಖಂಡಿಸಿದ ಕನ್ಹೇರಿ ಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ಕೂಡ ಅಗೌರವದಿಂದ ನಡೆಸಿಕೊಂಡರು. ಇದು ಹೀಗೆ ಮುಂದುವರೆದರೆ ನಮ್ಮ ಧರ್ಮದ ಆಚಾರ, ವಿಚಾರ, ಪದ್ಧತಿ ಮತ್ತು ನಮ್ಮ ಸಂಸತಿಗೆ ಧಕ್ಕೆ ಬರುತ್ತದೆ ಎಂದು ಮನಗಂಡು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಬಸವಣ್ಣನವರನ್ನು ಮುಂದಿಟ್ಟುಕೊಂಡು ಹಿಂದೂ ಧರ್ಮವನ್ನು ಅವಮಾನಿಸುವ ಕೆಲ ನಮ್ಮದೆ ಸ್ವಾಮೀಜಿಗಳಿಗೆ ಬುದ್ದಿ ಕಲಿಸಬೇಕಿದೆ. ಬಸವಣ್ಣನವರು ಹಿಂದೂ ಧರ್ಮವನ್ನು ಎಂದೂ ದೂಷಿಸಿಲ್ಲ ಸಮಯಕ್ಕೆ ತಕ್ಕಂತೆ ಅದರ ವಿವರಣೆ ನೀಡಿದ್ದಾರೆಯೇ ಹೊರತು ಅವಮಾನಿಸಿಲ್ಲ. ಕಾರಣ ಬಸವಾದಿ ಶರಣರ ಬೃಹತ್ ಹಿಂದೂ ಸಮಾವೇಶವನ್ನು ಸೋಮವಾರ ಶಹಾಪುರದ ಸಿಪಿಎಸ್ ಶಾಲಾ ಮೈದಾನದಲ್ಲಿ ಸಂಜೆ 4ಕ್ಕೆ ಆಯೋಜಿಸಿದ್ದು, ಕನ್ಹೇರಿ ಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿ 200ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಲಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತಕರು ಈ ಸಮಾವೇಶದಲ್ಲಿ ಭಾಗವಹಿಸಿ ಯಶಸ್ಸುಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಈ ವೇಳೆ ಚಿಕ್ಕಮಠದ ಪೀಠಾಧಿಪತಿ ಶಿವಲಿಂಗರಾಜೇಂದ್ರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು, ಶೇಖಯ್ಯ ದೇವರು ಇತರರಿದ್ದರು.