ದೇವರಹಿಪ್ಪರಗಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್)2026 ಕುರಿತ ಮಾಧ್ಯಮಗೋಷ್ಠಿಯಲ್ಲಿ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಮಾತನಾಡಿದರು. ಸುರೇಶ ಇದ್ದಾರೆ.
- ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿಕೆ
- ಮಾಧ್ಯಮ ಸಭೆ
ದೇವರಹಿಪ್ಪರಗಿ: ತಾಲೂಕಿನಲ್ಲಿ ಪ್ರತಿಶತ ಶೇ.95.05ರಷ್ಟು ಮ್ಯಾಪಿಂಗ್ ಕಾರ್ಯ ಮುಗಿದಿದ್ದು, ಎಸ್‌ಐಆರ್ ಕುರಿತು ಯಾವುದೇ ರೀತಿಯ ಭಯ ಬೇಡ ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-(ಎಸ್‌ಐಆರ್) 2026 ಕುರಿತು ಹಮ್ಮಿಕೊಂಡ ಮಾಧ್ಯಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‌ಐಆರ್ ಇದೊಂದು ಚುನಾವಣಾ ಆಯೋಗದ ಪ್ರಕ್ರಿಯೆಯಾಗಿದೆ. ಪ್ರತಿಯೊಬ್ಬ ಮತದಾರರು ವಿಳಂಬವಿಲ್ಲದೆ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಯಾವುದೇ ರೀತಿಯ ಊಹಾಪೋಹಗಳಿಗೆ ಅವಕಾಶ ನೀಡದೆ ನೇರವಾಗಿ ಬಿಎಲ್‌ಒಗಳು ಅಥವಾ ಕಾರ್ಯಾಲಯಕ್ಕೆ ಸಂಪರ್ಕಿಸಬೇಕು. ಇನ್ನು ತಾಲೂಕಿನಲ್ಲಿ ಇಲ್ಲಿಯವರೆಗೆ ಶೇ.75.40ರಷ್ಟು ಮ್ಯಾಪಿಂಗ್ ಮತ್ತು 118.98 ಪ್ರೋಜೆನಿ ಕಾರ್ಯವಾಗಿದ್ದು, ಒಟ್ಟು ಶೇ.95.05ರಷ್ಟು ಲಿತಾಂಶ ಬಂದಿದೆ.
ಜೂ. 20ರಿಂದ 29ರವರೆಗೆ ಬಿಎಲ್‌ಒ ಮತ್ತು ಬಿಎಲ್‌ಎಗಳಿಗೆ ತರಬೇತಿ ಮತ್ತು ರಾಜಕೀಯ ಮುಖಂಡರ ಸಭೆ ಜರುಗಲಿವೆ.
ನಂತರ ಜೂ.30 ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಪ್ರತಿ ಮನೆಗೆ ತೆರಳಿ ನಮೂನೆ ಅನುಬಂಧ-3 ನೀಡಿ ಅವರಿಂದ ಆಯೋಗ ಸೂಚಿಸಿದ 12 ದಾಖಲೆಗಳಲ್ಲಿ ಒಂದನ್ನು ಪಡೆಯುತ್ತಾರೆ. ಮತದಾರರು ಕಡ್ಡಾಯವಾಗಿ ಬಿಎಲ್‌ಒ ಅವರು ಕೇಳಿದ 12 ನಮೂನೆಗಳಲ್ಲಿ ಒಂದನ್ನು ನೀಡಬೇಕು. ಈ ಕುರಿತು ಘೋಷಣಾ ವಿವರಗಳನ್ನು ಒದಗಿಸಲು ಸಂಬಂಧಪಟ್ಟ ಬಿಎಲ್‌ಒಗಳನ್ನು ಸಂಪರ್ಕಿಸಬಹುದಾಗಿದೆ. ಘೋಷಣಾ ನಮೂನೆಯಲ್ಲಿ ಒದಗಿಸಲಾದ ಮತದಾರರ ಪಟ್ಟಿಯ ವಿವರಗಳು ಲಭ್ಯವಿಲ್ಲದಿದ್ದರೇ ಅಥವಾ ಹೊಂದಿಕೆಯಾಗದಿದ್ದರೆ ಅಂತಹ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಮತದಾರರು ನಮೂನೆಯಲ್ಲಿ ಸಾರ್ವಜನಿಕರು ಮತ್ತು ದಾಖಲೆಗಳ ಯಾವುದೇ ಸುಳ್ಳು ಸುದ್ದಿಗಳನ್ನು ನಂಬುವುದು ಹಾಗೂ ಹರಡದೇ ಸಂಬಂಧಿತ ದಾಖಲೆಗಳ ಮೂಲಕ ಕ್ರಮ ಜರುಗಿಸುವಂತೆ ಸೂಚಿಸಲಾಯಿತು. ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಶಿರಸ್ತೇದಾರ ಸುರೇಶ ಮ್ಯಾಗೇರಿ, ಸಿಬ್ಬಂದಿ ಇದ್ದರು.