High court 
ರಾಜ್ಯ

ಪಿಂಚಣಿಗೆ ಅರೆಕಾಲಿಕ ಅವಧಿ ಪರಿಗಣಿಸಲಾಗದು| High court

ಬೆಂಗಳೂರು: ತಮ್ಮಒಟ್ಟು ಸೇವಾವಧಿಯಲ್ಲಿ ಅರೆಕಾಲಿಕ ಸ್ಥಾನಮಾನದಲ್ಲಿ ಕಾರ್ಯನಿರ್ವಹಿಸಿದ್ದ ಮೊದಲ 18 ವರ್ಷಗಳನ್ನು ಕೂಡ ಕಾಯಂ ಸೇವೆ ಎಂದು ಪರಿಗಣಿಸಿ ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕು ಎಂದು ಕೋರಿ ಭಾರತೀಯ ಜೀವ ವಿಮಾ ನಿಗಮದ (ಎಲ್​ಐಸಿ) ನಿವೃತ್ತ ನೌಕರರೊಬ್ಬರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್​ ತಿರಸ್ಕರಿಸಿದೆ. 
ಬೀದರ್​ ನಿವಾಸಿಯಾದ ಕೆ. ಶಿವಲಿಂಗಪ್ಪ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್​. ಕಮಲ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಮನವಿಯನ್ನು ತಿರಸ್ಕರಿಸಿದೆ. 1960ರ ಎಲ್​ಐಸಿ ಸಿಬ್ಬಂದಿಗಳ ನಿಯಮಾವಳಿಗಳ ಪ್ರಕಾರ ಪೂರ್ಣಕಾಲಿಕ ನೌಕರರಾಗಿ ಪರಿಗಣಿಸಲ್ಪಟ್ಟ ದಿನದಿಂದ ಮಾತ್ರ ನಿವೃತ್ತಿ ಸೌಲಭ್ಯಗಳು ಅನ್ವಯಿಸುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. 
ಅಲ್ಲದೆ, ಅರ್ಜಿದಾರರು 2003ರಲ್ಲಿ ಅರೆಕಾಲಿಕ ಸ್ಥಾನಮಾನದಿಂದ ಕಾಯಂ ಸ್ಥಾನ ಪಡೆದಿಲ್ಲ. ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ನೇಮಕಾತಿಗೊಂಡಿದ್ದಾರೆ. ಅವರ ನೇಮಕಾತಿ ಪತ್ರದಲ್ಲಿ 2003ರಿಂದಲೇ ಮೂಲ ವೇತನ ಮತ್ತು ಸೇವಾ ಷರತ್ತುಗಳು ಆರಂಭವಾಗುತ್ತದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಅದಕ್ಕೆ ಯಾವುದೇ ಆಕ್ಷೇಪಣೆಗಳನ್ನು ವ್ಯಕ್ತಪಡಿಸದ ಅವರು ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅರೆಕಾಲಿಕ ಸೇವೆಯನ್ನು ಕಾಯಂ ಸೇವೆ ಎಂದು ಪರಿಗಣಿಸಿ ಸೌಲಭ್ಯ ಒದಗಿಸ ಬೇಕು ಎಂಬುದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಆದ್ದರಿಂದ ಅರ್ಜಿ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. 

ಪ್ರಕರಣದ ಹಿನ್ನೆಲೆ: 

1985ರಲ್ಲಿ ಎಲ್​ಐಸಿಯಲ್ಲಿ ಅರೆಕಾಲಿಕ ಸ್ವೀಪರ್​ ಕಮ್​ ಅಟೆಂಡರ್​ ಆಗಿ ಕೆ. ಶಿವಲಿಂಗಪ್ಪ ಸೇವೆಗೆ ನೇಮಕವಾಗಿದ್ದರು. ಅದಾಗಿ ಸುಮಾರು 18 ವರ್ಷಗಳ ನಂತರ 2003ರಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಾಯಂ ನೌಕರರಾಗಿ ನೇಮಕಗೊಂಡಿದ್ದರು. 2022ರ ಸೆ.30ರಂದು ಸೇವೆಯಿಂದ ನಿವೃತ್ತರಾಗಿದ್ದರು. ಅವರಿಗೆ 2003ರಿಂದ ಅನ್ವಯವಾಗುವಂತೆ ಗ್ರಾಚ್ಯುಟಿ, ಪಿಂಚಣಿ ಮತ್ತು ಪಿಎ್​ ಸೌಲಭ್ಯಗಳನ್ನು ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ ಅವರು 1985ರಿಂದ ಅನ್ವಯಿಸುವಂತಲೇ ಸೌಲಭ್ಯಗಳನ್ನು ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.