ಬೆಂಗಳೂರು: ಮಹಾನಗರದಲ್ಲಿ ವಾಹನದಟ್ಟಣೆ ನಿವಾರಣೆ ಹಾಗೂ ವಾಹನ ನಿಲುಗಡೆ ವಿಚಾರದಲ್ಲಿ ಶಿಸ್ತು ತರಲು ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ವಸೂಲು ಮಾಡುವ ಪ್ರಸ್ತಾಪವನ್ನು ಶೀಘ್ರವೇ ಜಾರಿಗೆ ತರಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಐದೂ ಪಾಲಿಕೆ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ತಲಾ 10-15 ರಸ್ತೆಗಳನ್ನು ಪಾರ್ಕಿಂಗ್ ಶುಲ್ಕ ವಸೂಲಾತಿಗೆ ಗುರುತು ಮಾಡುವಂತೆ ಸೂಚಿಸಲಾಗಿದೆ. ಇದರನ್ವಯ ಆಯಾ ಕಾಪೋರೇಷನ್ಗಳ ಆಯುಕ್ತರು ಕಾರ್ಯೋನ್ಮುಖರಾಗಿದ್ದಾರೆ. ಈ ಬಗ್ಗೆ ಶೀಘ್ರವೇ ರಸ್ತೆಗಳ ಪಟ್ಟಿ ಅಂತಿಮಗೊಳ್ಳಲಿದ್ದು, ಆ ಬಳಿಕ ಅಧಿಕೃತವಾಗಿ ನಿಲುಗಡೆ ಶುಲ್ಕ ವಸೂಲಾತಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಪಾರ್ಕಿಂಗ್ ಶುಲ್ಕ ವಸೂಲಿಗೆ ನಿಯಮಾವಳಿಯನ್ನು ಪರಿಷ್ಕರಣೆ ಮಾಡಲಾಗುವುದು. ಇದಕ್ಕೆ ಸರ್ಕಾರದಿಂದ (ನಗರಾಭಿವೃದ್ಧಿ ಇಲಾಖೆ) ಅನುಮೋದನೆ ಪಡೆಯಲಾಗುವುದು. ನಗರದೆಲ್ಲೆಡೆ ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿರುವುದರಿಂದ ‘ಪೇ ಆಂಡ್ ರ್ಪಾಂಗ್’ ವ್ಯವಸ್ಥೆ ಅನಿವಾರ್ಯವಾಗಿದೆ. ಮೆಟ್ರೋ ನಿಲ್ದಾಣಗಳಲ್ಲೂ ನಾಗರಿಕರಿಗೆ ವಾಹನ ನಿಲುಗಡೆ ಸಂಬಂಧ ಹೊಸ ಮಾದರಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ವಸತಿ ಪ್ರದೇಶಗಳಲ್ಲಿ ಮನೆಗಳ ಮುಂದೆ ವಾಹನ ನಿಲುಗಡೆಯಿಂದ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ. ಈ ದೂರು ಆಧರಿಸಿ ಕ್ರಮ ಕೈಗೊಳ್ಳಲು ಹೋದಲ್ಲಿ ಸ್ಥಳೀಯರು ಜಗಳಕ್ಕೆ ನಿಲ್ಲುತ್ತಾರೆ. ಪಾರ್ಕಿಂಗ್ ವಿಚಾರದಲ್ಲಿ ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ನಿವಾರಿಸಬೇಕಿದೆ. ಮೊದಲಿಗೆ ಆಯ್ದ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ಟೆಂಡರ್ ಆಹ್ವಾನಿಸಿದ ಬಳಿಕವಷ್ಟೇ ಮನೆಗಳ ಮುಂದೆ ವಾಹನ ನಿಲ್ಲಿಸುವವರಿಗೆ ದಂಡ ಹಾಕುವ ಬಗ್ಗೆ ಗಮನ ಹರಿಸಲಾಗುವುದು. ಈ ವಿಚಾರದಲ್ಲಿ ಸಾರ್ವಜನಿಕರು ಪಾಲಿಕೆಗಳೊಂದಿಗೆ ಸಹಕರಿಸಿದ್ದಲ್ಲಿ ಸೂಕ್ತ ಪರಿಹಾರ ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಈ ವರ್ಷದ ಆರಂಭದಿಂದಲೇ ನಗರದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಸೂಚನೆ ಅನ್ವಯ ಪ್ರಮುಖ ರಸ್ತೆಗಳಿಗೆ ಒಂದು ಪದರ ಡಾಂಬರು ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೆ ಎಲ್ಲ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಕೆಲಸ ನಡೆಯುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಎಲ್ಲ ಕಾಮಗಾರಿ ಮುಕ್ತಾಯಗೊಳಿಸಲು ಗಡುವು ನೀಡಲಾಗಿದೆ ಎಂದು ಮಹೇಶ್ವರ ರಾವ್ ವಿವರಿಸಿದರು.
ನಗರದಲ್ಲಿ ಇಂದಿರಾ ಕ್ಯಾಂಟೀನ್ಗಳು ಬಡವರಿಗೆ ಆಹಾರ ಒದಗಿಸುವಲ್ಲಿ ನಿರತವಾಗಿವೆ. ಇವುಗಳಲ್ಲಿ ಕೆಲವು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರು ಬಂದಿದೆ. ಇವುಗಳನ್ನು ಪರಿಶೀಲಿಸುವಂತೆ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಪರಿಶೀಲನೆ ವೇಳೆ ಕೆಲವೊಂದು ಕ್ಯಾಂಟೀನ್ಗಳಿಗೆ ಜನ ಬರುತ್ತಿಲ್ಲ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಜತೆಗೆ ಕೆಲ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕ್ಯಾಂಟೀನ್ಗಳನ್ನು ಮುಂದುವರಿಸಲಾಗುವುದು. ಆಹಾರದಲ್ಲಿ ಗುಣಮಟ್ಟ ಹೆಚ್ಚಳ, ಹೊಸ ಮೆನು ಸಹಿತ ಅಗತ್ಯ ಮೂಲಸೌಕರ್ಯ ಒದಗಿಸಲು ಪಾಲಿಕೆಗಳು ಸಿದ್ಧವಿವೆ. ಕಾಯಕಲ್ಪ ನೀಡುವ ವೇಳೆ ಹೊಸದಾಗಿ 52 ಕ್ಯಾಂಟೀನ್ ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.