ಬೋರಗಾಂವನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿದರು. 108 ಗುಣಧರನಂದಿ ಮುನಿ ಮಹಾರಾಜರು, ಜಯಕುಮಾರ ಖೋತ, ಸುದರ್ಶನ ಖೋತ, ಬಾಬಣ್ಣ ಖೋತ ಇದ್ದರು.
ವಿಜಯವಾಣಿ ಸುದ್ದಿಜಾಲ ಬೋರಗಾಂವ
ಶಮನೆವಾಡಿ ಬಳಿಯ ನೇಜ ಕ್ರಾಸ್ ಬಳಿಯ ಗುಣಧರ ತೀರ್ಥದಲ್ಲಿ ಮೇ 24, 25 ಮತ್ತು 26ರಂದು ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಗುಣಧರ ತೀರ್ಥ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಲ್ಲೆ ಮೊದಲ 151 ಅಡಿ ಎತ್ತರದ ಭಗವಾನ ಪಾರ್ಶ್ವನಾಥ ಮೂರ್ತಿ ಪ್ರತಿಷ್ಠಾಪನೆ, ಭೂಮಿ ಶುದ್ಧೀಕರಣ, ಸರಸ್ವತಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಎಜಿಎಂ ಇಂಜಿನಿಯರಿಂಗ್ ಕಾಲೇಜು ಉದ್ಘಾಟನೆ ಜರುಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ, ಶ್ರಾವಕಿಯರು ಪಾಲ್ಗೊಳ್ಳಬೇಕು ಎಂದರು.
ಮೇ 24ರಂದು ಅಭಿಷೇಕ, ಪೂಜೆ, ವಾಸ್ತು ವಿಧಾನ, ಆರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಮೇ 25ರಂದು ಅಭಿಷೇಕ, ಪೂಜೆ, ಭಗವಾನ ಪಾಶ್ವನಾಥ ವಿಧಾನ ಹಾಗೂ ಸರಸ್ವತಿ ಮೂರ್ತಿ ಶುದ್ಧೀಕರಣ, ಸಂಜೆ 7 ಗಂಟೆಗೆ ಸನ್ಮಾನ ಸಮಾರಂಭ ಜರುಗಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಶಶಿಕಲಾ ಜೊಲ್ಲೆ, ಶಾಸಕ ಲಕ್ಷ್ಮಣ ಸವದಿ, ಡಿಡಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ವೀರಕುಮಾರ ಪಾಟೀಲ, ಯುವಮುಖಂಡ ಉತ್ತಮ ಪಾಟೀಲ ಪಾಲ್ಗೊಳ್ಳಲಿದ್ದಾರೆ. ಮೇ 26ರಂದು ಬೆಳಗ್ಗೆ ಎಜಿಎಂ ಇಂಜಿನಿಯರಿಂಗ್ ಕಾಲೇಜು ಉದ್ಘಾಟನಾ ಹಾಗೂ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರಗುಲಿದ್ದು, ರಾಜ್ಯಪಾಲ ಥಾವರಚಂದ್ ಗಹಲೋತ್ ಉದ್ಘಾಟಿಸುವರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಪಾಲ್ಗೊಳ್ಳಲಿದ್ದಾರೆ ಎಂದರು.
ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮುನಿ ಮಹಾರಾಜರು ಮಾತನಾಡಿ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕೃತಿ, ಉತ್ತಮ ಸಮಾಜ ನಿರ್ಮಾಣದ ಉದ್ದೇಶದಿಂದ ಶಮನೆವಾಡಿ ಸಮೀಪದ ನೇಜ ಕ್ರಾಸ್ ಬಳಿ ವಸತಿ ಸಹಿತ ಕಾಲೇಜು ನಿರ್ಮಿಸಿದ್ದೇವೆ. ವಿಶ್ವದ ಅತಿ ದೊಡ್ಡ 151 ಅಡಿ ಎತ್ತರದ ಭಗವಾನ ಪಾರ್ಶ್ವನಾಥ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸರಸ್ವತಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದೇವೆ. ಕಾರ್ಯಕ್ರಮಕ್ಕೆ ರಾಜ್ಯದ ಜೈನ ಮುನಿಗಳು, ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಜಯಕುಮಾರ ಖೋತ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುದರ್ಶನ ಖೋತ, ಬಾಬಣ್ಣ ಖೋತ, ಆರ್.ಟಿ.ಚೌಗುಲಾ, ನೇಮಗೂಂಡ ಪಾಟೀಲ, ಅಜಿತ ಪಾರಿಸಾಖೋತ, ಪುರುಷ ಚೌಗುಲೆ, ಬಾಹುಬಲಿ ಹನಿಮನಾಲಿ ಸೇರಿದಂತೆ ಗುಣಧರ ತೀರ್ಥ ಸಮಿತಿ ಪದಾಧಿಕಾರಿಗಳು ಇದ್ದರು.