Parents of disabled children should receive honorarium
ಚಿಕ್ಕನಾಯಕನಹಳ್ಳಿ: ಅಂಗವೈಕಲ್ಯತೆಯು ಕೆಲ ನ್ಯೂನತೆಗಳಿಂದ ಬರುತ್ತದೆ ಹಾಗೂ ಸಂಬಂಧಗಳಲ್ಲಿ ವಿವಾಹವಾಗುವುದರಿಂದಲೂ ಬರುತ್ತದೆ ಎಂದೇ ವೈದ್ಯರು ಹೇಳುತ್ತಾರೆ. ಆದರೆ, ಈ ರೀತಿಯ ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳುವುದು ಪುಣ್ಯದ ಕೆಲಸವಾಗಿದ್ದು, ಮಕ್ಕಳ ಪಾಲಕರಿಗೆ ಸರ್ಕಾರ ವಿಶೇಷ ಗೌರವಧನ ನೀಡಿ ಪ್ರೋತ್ಸಾಹಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಸೋಮವಾರ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಅಂಗವಿಕಲ ಮಕ್ಕಳ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಹೀಗೆಯೇ ಹುಟ್ಟಬೇಕೆಂದು ಕೇಳಿಕೊಂಡು ಜನ್ಮತಾಳುವುದಿಲ್ಲ. ಆದರೆ, ಈ ರೀತಿಯಲ್ಲಿ ಹುಟ್ಟಿದ ಮಕ್ಕಳನ್ನು ನೋಡಿಕೊಳ್ಳುವುದು, ಅವರ ಪಾಲನೆ, ಪೋಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಸಂಘ&ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಅದೇ ರೀತಿ ಅವರ ಪಾಲಕರಿಗೆಅಗತ್ಯ ಗೌರವಧನವನ್ನು ಸರ್ಕಾರ ನೀಡಬೇಕು ಎಂದರು.
ಮುಂದಿನ ದಿನಗಳಲ್ಲಿ ನಿಮಗೆ ಪ್ರಕೃತಿದತ್ತವಾಗಿ ಅಗತ್ಯವಾಗಿ ಸಿಗಬೇಕಾದ ಸಿಗುವಂತಹ ಕಾರ್ಯಕ್ರಮವನ್ನು ಒಂದೇ ಜಾಗದಲ್ಲಿ ಮಾಡುವುದು ಸೇರಿದಂತೆ ತಾಲೂಕಿನ ಎಲ್ಲ ಅಂಗವಿಕಲರಿಗೆ ಮಾಸಿಕ ವೇತನ ನೀಡುವ ಕಾರ್ಯಮಾಡಲಾಗುವುದು. 100 ದಿನದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಇವೆಲ್ಲರಿಗೂ ವಿಶೇಷ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಸಲಕರಣೆಗಳನ್ನು ನೀಡುವೆ ಎಂದರು.
ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಅಂಗವಿಕಲಮಕ್ಕಳೊಂದಿಗೆ ಬೆರೆಯುವುದು ನಮ್ಮ ಪುಣ್ಯ. ಪ್ರತಿ ಮಕ್ಕಳಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ಅಂತಹ ಮಕ್ಕಳನ್ನು ಗುರುತಿಸಿ ಬೆಳೆಸಬೇಕಿದೆ. ಮಕ್ಕಳ ಬಗ್ಗೆ ಪ್ರತಿ ಶಿಕ್ಷಕರು, ಪಾಲಕರು ಹೆಮ್ಮೆ ಬೆಳೆಸಿಕೊಳ್ಳಬೇಕು. ಕೀಳರಿಮೆ ಮಾಡಬೇಡಿ. ಪ್ರತಿ ಮಕ್ಕಳನ್ನು ಗುರುತಿಸಿ ಅವರಿಗೆ ಭವಿಷ್ಯ ರೂಪಿಸಿ ಎಂದರು.