ಕರ್ನಾಟಕ ಪರೀಕ್ಷಾ ಪ್ರಾಧಿಕಾರ
- ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು ಅಥವಾ ಸಿಕ್ಕಿರುವ ಸೀಟು ಇಷ್ಟ ಇಲ್ಲ ಎನ್ನುವವರು ಚಾಯ್ಸ-4 ಆಯ್ಕೆ ಮಾಡಿಕೊಂಡು ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಬಹುದು
- 3ನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ, 2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಳ್ಳಬೇಕು. ಇದಕ್ಕಾಗಿ 5,000 ರೂ. ದಂಡ ಪಾವತಿಸಬೇಕಾಗುತ್ತದೆ
- ಸೀಟು ಪಡೆದವರು ಕಾಲೇಜುಗಳಿಗೆ ದಾಖಲಾಗಲು ಆ.28ರವರೆಗೆ ಸಮಯ ನಿಗದಿ ಮಾಡಿದೆ. ಈ ಅವಧಿಯಲ್ಲಿ ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇಂಜಿನಿಯರಿಂಗ್ ಸೇರಿ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಆದರೆ, ಈ ಸುತ್ತಿನಲ್ಲಿ ಕೆಲ ಷರತ್ತುಗಳನ್ನು ಅನ್ವಯಿಸಿದೆ. ಈ ಹಂತದಲ್ಲಿ ಸೀಟು ಇಷ್ಟವಿಲ್ಲದವರು ನೇರವಾಗಿ ಮುಂದಿನ ಹಂತಕ್ಕೆ ತೆರಳಲು ಅವಕಾಶವಿಲ್ಲ. ಬದಲಿಗೆ ಸೀಟು ಪಡೆದವರು ಕಾಲೇಜುಗಳಿಗೆ ದಾಖಲಾಗಬೇಕು, ಇಲ್ಲವೇ ಇದೇ ಸುತ್ತಿನಲ್ಲಿ ಕೌನ್ಸೆಲಿಂಗ್‌ನಿಂದ ಹೊರನಡೆಯಬೇಕಾದ ಅನಿವಾರ್ಯತೆ ಎದುರಿಸಬೇಕಾಗಿದೆ.
ಸೀಟು ಪಡೆದವರು ಕಾಲೇಜುಗಳಿಗೆ ದಾಖಲಾಗಲು ಆ.28ರವರೆಗೆ ಸಮಯ ನಿಗದಿ ಮಾಡಿದೆ. ಈ ಅವಧಿಯಲ್ಲಿ ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು.
ಮೊದಲ ಆಯ್ಕೆ: ಸೀಟು ಹಂಚಿಕೆ ತೃಪ್ತಿಕರ ಎನಿಸಿದಲ್ಲಿ ಚಾಯ್ಸ-1 ಆಯ್ಕೆ ಮಾಡಿ ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು ಅಥವಾ ಸಿಕ್ಕಿರುವ ಸೀಟು ಇಷ್ಟ ಇಲ್ಲ ಎನ್ನುವವರು ಚಾಯ್ಸ-4 ಆಯ್ಕೆ ಮಾಡಿಕೊಂಡು ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ವಿವರಿಸಿದ್ದಾರೆ.
ಸೀಟು ರದ್ದು ಮಾಡಿ: ಒಂದು ವೇಳೆ ಚಾಯ್ಸ-1 ಆಯ್ಕೆ ಮಾಡದೆ, 3ನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ, 2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಳ್ಳಬೇಕು. ಇದಕ್ಕಾಗಿ 5,000 ರೂ. ದಂಡ ಪಾವತಿಸಬೇಕಾಗುತ್ತದೆ. ಇದಾದ ನಂತರವೇ 3ನೇ ಸುತ್ತಿನಲ್ಲಿ ಲಾಗಿನ್ ಆಗಿ, ಮತ್ತೆ ನೋಂದಣಿ ಶುಲ್ಕ ಪಾವತಿಸಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ನೀಟ್‌ನವರಿಗೆ ನಿರ್ಗಮನ ಅವಕಾಶ
ಎಂಸಿಸಿ ಅಲ್ಲದೆ ಇತರ ರಾಜ್ಯಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟು ಪಡೆದಿರುವ ಅಭ್ಯರ್ಥಿಗಳಿಗೆ ಕೆಇಎ ಕೌನ್ಸೆಲಿಂಗ್‌ನಿಂದ ಉಚಿತವಾಗಿ ಹೊರ ಹೋಗುವುದಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಅಂತಹವರಿಂದ ತೆರವಾಗುವ ಸೀಟುಗಳನ್ನೂ ಸೇರಿಸಿಕೊಂಡು ಮತ್ತೊಮ್ಮೆ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುವುದು ಎಂದು ಕೆಇಎ ತಿಳಿಸಿದೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ. ಕೆಲ ಅಭ್ಯರ್ಥಿಗಳು ರಾಜ್ಯದಲ್ಲೂ ಹಾಗೂ ಎಂಸಿಸಿ ನಡೆಸುವ ಕೌನ್ಸೆಲಿಂಗ್‌ನಲ್ಲೂ ಸೀಟು ಪಡೆದಿದ್ದು, ಅಂತಹವರು ಇಚ್ಛಿಸಿದಲ್ಲಿ ಚಾಯ್ಸ್-4 ಆಯ್ಕೆ ಮಾಡಿಕೊಂಡು ಕೆಇಎ ಕೌನ್ಸೆಲಿಂಗ್‌ನಿಂದ ಉಚಿತವಾಗಿ ಹೊರ ಹೋಗಬಹುದು.
ಆ.25 ಮತ್ತು 26ರಂದು ನಿರ್ಗಮಿಸುವುದಕ್ಕೆ ಸಮಯ ನೀಡಿದ್ದು, ಇದರಿಂದ ಮೊದಲ ಸುತ್ತಿನಲ್ಲೇ ಇತರ ಮೆರಿಟ್ ಅಭ್ಯರ್ಥಿಗಳಿಗೂ ಇಚ್ಛೆಯನುಸಾರ ಸೀಟು ಲಭ್ಯವಾದಂತಾಗಲಿದೆ ಎಂದು ಪ್ರಾಧಿಕಾರ ವಿವರಿಸಿದೆ.
ಆತಂಕಕಾರಿ ನಿಯಮ ಎಂದ ಪಾಲಕರು
ಕೆಇಎ ಪ್ರಕಟಿಸಿರುವ ಹೊಸ ನಿಯಮವು ಗೊಂದಲ ಮತ್ತು ಆತಂಕಕಕಾರಿಯಾಗಿದೆ. ಎರಡನೇ ಸುತ್ತಿನಲ್ಲಿ ಭಾಗವಹಿಸಿ ಕಾಲೇಜಿಗೆ ದಾಖಲಾಗುತ್ತೇನೆ. ಮುಂದಿನ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ ಎಂಬ ಸಂದೇಶವು ಸಾಕಷ್ಟು ಆತಂಕ ಮೂಡಿಸುತ್ತಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಮೂರನೇ ಸುತ್ತಿನಲ್ಲಿ ಹಾಜರಾಗುವುದಕ್ಕಾಗಿ ಎಕ್ಸಿಟ್ ಆಗುವ ವಿದ್ಯಾರ್ಥಿಗಳಿಗೆ ಇಂತಹ ಸಂದೇಶ ಕಳುಹಿಸುತ್ತಿರುವುದು, ಮುಂದಿನ ಸುತ್ತಿನಲ್ಲಿ ಪರಿಗಣಿಸದಿದ್ದರೆ ಏನು ಗತಿ ಎಂಬ ಆತಂಕ ನಿರ್ಮಾಣವಾಗಿದೆ. ಅಲ್ಲದೆ, ಮತ್ತೆ ಐದು ಸಾವಿರ ರೂ. ದಂಡ ಪಾವತಿಸುವ ನಿಮಯ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.