ಬೆಂಗಳೂರಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ ಕಲರವ!: 5ನೇ ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ಅರ್ಹತಾ ಕೂಟ 
ರಾಜ್ಯ

5ನೇ ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ಅರ್ಹತಾ ಕೂಟ: ಬೆಂಗಳೂರಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ ಕಲರವ!

ಪ್ರಮುಖ ಮುಖ್ಯಾಂಶಗಳು

  • ಇಂಡಿಯಾ ಓಪನ್‌ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌
  • ಭಾರತ ಸೇರಿ 5 ದೇಶಗಳ 350 ಅಥ್ಲೀಟ್‌ಗಳಿಂದ ಸ್ಪರ್ಧೆ
  • ಒಟ್ಟು 155 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ
  • ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 3 ದಿನಗಳ ಕೂಟ
ಬೆಂಗಳೂರು: ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ(ಪಿಸಿಐ) ಆಯೋಜಿಸುತ್ತಿರುವ 8ನೇ ಆವೃತ್ತಿಯ ಇಂಡಿಯನ್‌ ಓಪನ್‌ ಪ್ಯಾರಾ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಮಂಗಳವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ. 3 ದಿನಗಳ ಕಾಲ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 341 ಮಂದಿ ಸೇರಿ ಒಟ್ಟು 5 ರಾಷ್ಟ್ರಗಳ 350 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.
ಕೂಟದಲ್ಲಿ ಒಟ್ಟು 155 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಕೂಟವು ಅಕ್ಟೋಬರ್‌ 18ರಿಂದ 24ರ ವರೆಗೂ ಜಪಾನ್‌ನ ಐಚಿ-ನಗೊಯಾದಲ್ಲಿ ನಡೆಯಲಿರುವ 5ನೇ ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ಅರ್ಹತಾ ಕೂಟವಾಗಿರಲಿದೆ.
155 ವಿಭಾಗಗಳ ಪೈಕಿ 89 ವಿಭಾಗಗಳಲ್ಲಿ ಪುರುಷ ಅಥ್ಲೀಟ್‌ಗಳು, 66 ವಿಭಾಗಗಳಲ್ಲಿ ಮಹಿಳಾ ಅಥ್ಲೀಟ್‌ಗಳಿಗೆ ಸ್ಪರ್ಧೆಗಳು ನಡೆಯಲಿವೆ. ಭಾರತದ 341 ಅಥ್ಲೀಟ್‌ಗಳು ಪೈಕಿ 66 ಮಂದಿಗೆ ಪ್ಯಾರಾ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ದೊರೆಯಲಿದೆ.
ವಿದೇಶಿಗರ ಪೈಕಿ ಶ್ರೀಲಂಕಾದ ಮೂವರು, ಕಿರ್ಗಿಸ್ತಾನದ ಇಬ್ಬರು, ಥಾಯ್ಲೆಂಡ್‌ ಹಾಗೂ ಫಿಲಿಪ್ಪೀನ್ಸ್‌ನ ತಲಾ ಒಬ್ಬರು ಇದ್ದಾರೆ. ಅಫ್ಘಾನಿಸ್ತಾನದ ಇಬ್ಬರು ಆಗಮಿಸುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸದ್ಯ ಪಟ್ಟಿಯಲ್ಲಿರುವ ಅಥ್ಲೀಟ್‌ಗಳ ಪೈಕಿ 30 ಮಂದಿ ತಲಾ 3 ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನ ಸೆಳೆಯಲಿದ್ದಾರೆ. ಭಾರತದ 19 ರಾಜ್ಯ ಹಾಗೂ ಸರ್ವಿಸಸ್‌ನ ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ. ಕರ್ನಾಟಕದ 15 ಅಥ್ಲೀಟ್‌ಗಳಿದ್ದರೆ, ಅತಿಹೆಚ್ಚು ಅಥ್ಲೀಟ್‌ಗಳು ಹರ್ಯಾಣ ರಾಜ್ಯದವರಾಗಿದ್ದಾರೆ. ಹರ್ಯಾಣದ 84 ಮಂದಿ ಸ್ಪರ್ಧೆಗಿಳಿಯಲಿದ್ದಾರೆ. ಗೋವಾದ ಏಕೈಕ ಪ್ಯಾರಾ ಅಥ್ಲೀಟ್‌ ಪಾಲ್ಗೊಳ್ಳುತ್ತಿರುವುದು ಕೂಡ ವಿಶೇಷ.
ಮೇ 28ರ ವರೆಗೂ ನಡೆಯಲಿರುವ ಕೂಟಕ್ಕೆ ಭಾರತೀಯ ಪ್ಯಾರಾ ಅಥ್ಲೆಟಿಕ್ಸ್‌ ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಥ್ಲೀಟ್‌ಗಳಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಮುಂಬರುವ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ದಾಖಲೆಯ ಪದಕಗಳನ್ನು ಗೆಲ್ಲಲು ಈ ಕೂಟ ಮೊದಲ ಹೆಜ್ಜೆ ಆಗಲಿದೆ ಎಂದು ಭಾರತೀಯ ಪ್ಯಾರಾಲಿಂಪಿಕ್‌ ಸಮಿತಿಯ ಮುಖ್ಯಸ್ಥ ಡಾ.ಸತ್ಯನಾರಾಯಣ ಅವರು ತಿಳಿಸಿದ್ದಾರೆ.
ಇಂಡಿಯನ್‌ ಓಪನ್‌ ಪ್ಯಾರಾ ಅಥ್ಲೆಟಿಕ್ಸ್‌ನ ಪ್ರಮುಖಾಂಶ
* ಪುರುಷ ಅಥ್ಲೀಟ್‌ಗಳು 89 ವಿಭಾಗಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ
* ಮಹಿಳಾ ಅಥ್ಲೀಟ್‌ಗಳು 66 ವಿಭಾಗಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ
* ಭಾರತದ 341 ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ
* 30 ಅಥ್ಲೀಟ್‌ಗಳು ತಲಾ 3 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ
* ಸರ್ವಿಸಸ್‌ ತಂಡ, ಭಾರತದ 19 ರಾಜ್ಯಗಳ ಸ್ಪರ್ಧಿಗಳಿದ್ದಾರೆ
* ಹರ್ಯಾಣದಿಂದ ಬರೋಬ್ಬರಿ 84 ಅಥ್ಲೀಟ್‌ಗಳ ಆಗಮನ
* ಶ್ರೀಲಂಕಾ, ಕಿರ್ಗಿಸ್ತಾನ, ಥಾಯ್ಲೆಂಡ್‌, ಫಿಲಿಪ್ಪೀನ್ಸ್‌ನ ಅಥ್ಲೀಟ್‌ಗಳೂ ಭಾಗಿ
* ಅಫ್ಘಾನಿಸ್ತಾನ ಅಥ್ಲೀಟ್‌ಗಳೂ ಪಾಲ್ಗೊಳ್ಳುವ ನಿರೀಕ್ಷೆ