ಪೇಪರ್‌ಲೆಸ್ ನೋಂದಣಿ ದಸ್ತಾವೇಜು ಹಸ್ತಾಂತರ ಮಾಡುತ್ತಿರುವ ಐಜಿಆರ್ 
ರಾಜ್ಯ

ಪೇಪರ್‌ಲೆಸ್ ನೋಂದಣಿ

ಗೋವಿಂದರಾಜು ಚಿನ್ನಕುರ್ಚಿ
ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿನ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿಗಳ ದಸ್ತಾವೇಜು ನೋಂದಣಿ ಇನ್ಮುಂದೆ ಕಾಗದರಹಿತ (ಪೇಪರ್‌ಲೆಸ್) ಆಗಲಿದ್ದು, ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಇದರೊಂದಿಗೆ ಆಸ್ತಿಪತ್ರ ಎಂಬ ಭೌತಿಕ ದಾಖಲೆ ಮೇಲಿದ್ದ ಭಾವನಾತ್ಮಕ ಸಂಬಂಧ ಕೊನೆಯಾಗಲಿದೆ. ಡಿಜಿಟಲ್ ಕೋಡ್‌ನಲ್ಲಿ ನಮ್ಮ ಆಸ್ತಿಯ ದಾಖಲೆ ಪತ್ರಗಳು ಇರಲಿದ್ದು, ಅಗತ್ಯ ಇದ್ದಾಗ ಸರ್ಟಿೈಡ್ ಕಾಪಿ ಸಿಗಲಿದೆ.
ಕಾಗದರಹಿತ ರಿಜಿಸ್ಟ್ರೇಷನ್ ಸೇವೆಗೆ ಕಾವೇರಿ 2.0 ತಂತ್ರಾಂಶವನ್ನು ಅಪ್‌ಗ್ರೇಡ್ ಮಾಡಿದ್ದು, ನೋಂದಣಿ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್‌ನಲ್ಲೇ ನಡೆಯಲಿದೆ. ನೋಂದಣಿ ಬಳಿಕ ದಾಖಲೆ ಪತ್ರ ಕೈಗೆ ಸಿಗುವುದಿಲ್ಲ. ಬದಲಿಗೆ ಲಾಗಿನ್ ಐಡಿ ಪಾಸ್‌ವರ್ಡ್ ಸಿಗಲಿದ್ದು, ಏನೇ ವ್ಯವಹಾರ ಇದ್ದರೂ ಈ ಮೂಲಕವೇ ನಡೆಸಬೇಕಿದೆ.
ಪೇಪರ್‌ಲೆಸ್ ಸೇವೆ ಪ್ರಾಯೋಗಿಕವಾಗಿ ಚಾಮರಾಜನಗರ ಜಿಲ್ಲೆಯ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಗುರುವಾರ ಜಾರಿಗೆ ಬರಲಿದೆ. ಸಾಧಕ-ಬಾಧಕಗಳ ಅಧ್ಯಯನ ಮಾಡಿ ರಾಜ್ಯವ್ಯಾಪಿ ಹಂತ ಹಂತವಾಗಿ ವಿಸ್ತರಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಜ್ಜಾಗಿದೆ.
ನೋಂದಣಿ ಪ್ರಕ್ರಿಯೆ ಹೇಗೆ?:
ಜಮೀನು, ನಿವೇಶನ, ಮನೆ, ವಾಣಿಜ್ಯ ಕಟ್ಟಡ ಇನ್ನಿತರ ಸ್ಥಿರಾಸ್ತಿಗಳ ಕ್ರಯ, ವಿಲ್, ದಾನಪತ್ರ, ಕರಾರು ಸೇರಿ ವಿವಿಧ ರೀತಿಯ ದಸ್ತಾವೇಜುಗಳ ನೋಂದಣಿಗೆ ಕಾಗದದ ಮೇಲೆ ಪಕ್ಷಕಾರರ ನಡುವಿನ ವ್ಯವಹಾರವನ್ನು ಮುದ್ರಿಸಲಾಗುತ್ತದೆ. ನಂತರ ಕಾವೇರಿ 2.0ನ ಸಿಟಿಜನ್ ಲಾಗಿನ್‌ನಲ್ಲಿ ದಸ್ತಾವೇಜು ಅಪ್‌ಲೋಡ್ ಮಾಡಿ ಆಸ್ತಿ ವಿವರವನ್ನು ಸರ್ಕಾರದ ದತ್ತಾಂಶದಿಂದ ಸ್ವೀಕರಿಸಿ ಅಪ್‌ಲೋಡ್ ಮಾಡಲಾಗುತ್ತದೆ. ಸಬ್‌ರಿಜಿಸ್ಟ್ರಾರ್ ಪರಿಶೀಲನೆ ನಡೆಸಿ ಸರಿ ಇದ್ದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಗೆ ವಾಪಸ್ ಸಿಟಿಜನ್ ಲಾಗಿನ್‌ಗೆ ಕಳುಹಿಸುತ್ತಾರೆ. ದೋಷ ಇದ್ದರೂ ಹಿಂತಿರುಗಿಸುತ್ತಾರೆ. ಇದಾದ ಮೇಲೆ ಪಕ್ಷಕಾರರು, ಆನ್‌ಲೈನ್ ಪೇಮೆಂಟ್ ಗೇಟ್‌ವೇನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಬೇಕು. ಎರಡೂ ಕಡೆಯ ಪಕ್ಷಕಾರರು ಆಧಾರ್ ಆಧಾರಿತ ಇ-ಸೈನ್ ಅಥವಾ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರ (ಡಿಎಸ್‌ಸಿ) ಮೂಲಕ ರುಜು ಮಾಡಬೇಕು. ಡಿಜಿಟಲ್ ಸಹಿ ಮಾಡಿ ನೋಂದಣಿಗಾಗಿ ಸಬ್‌ರಿಜಿಸ್ಟ್ರಾರ್‌ಗಳ ಲಾಗಿನ್‌ಗೆ ಕಳುಹಿಸಬೇಕು. ಭೌತಿಕ ದಾಖಲೆ ಅಥವಾ ಕಾಗದವನ್ನು ಅಧಿಕಾರಿ ಮುಂದೆ ಕೊಡುವ ಅಗತ್ಯ ಇರುವುದಿಲ್ಲ. ಲಾಗಿನ್‌ನಲ್ಲಿ ಬಂದ ಕಾಗದರಹಿತ ದಾಖಲೆಯನ್ನು ನೋಂದಣಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಪರಿಶೀಲನೆ ನಡೆಸಿ ಸಬ್‌ರಿಜಿಸ್ಟ್ರಾರ್, ಪಕ್ಷಕಾರರು, ಸಾಕ್ಷಿಗಳ ಛಾಯಚಿತ್ರ ಮತ್ತು ಬೆರಳಚ್ಚು ಗುರುತನ್ನು ಡಿಜಿಟಲ್ ಯಂತ್ರದ ಮೂಲಕವೇ ಸೆರೆಹಿಡಿದುಕೊಳ್ಳಲಿದ್ದಾರೆ. ಅಂತಿಮವಾಗಿ ಸಬ್‌ರಿಜಿಸ್ಟ್ರಾರ್, ಡಿಜಿಟಲ್ ಸಹಿ ಮಾಡಿ ದಸ್ತಾವೇಜು ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣ ಮಾಡಲಿದ್ದಾರೆ. ಶುಲ್ಕ ಪಾವತಿ ರಸೀದಿ ಮತ್ತು ದಾಖಲೆ ಸಂಗ್ರಹಿಸಿ ಪಕ್ಷಕಾರರಿಗೆ (ಸಂಬಂಧಪಟ್ಟ ವ್ಯಕ್ತಿಗೆ) ಲಾಗಿನ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತಾರೆ.

ಡೇಟಾಬೇಸ್‌ನಲ್ಲಿ ಅಸಲಿ ದಾಖಲೆ

ನೋಂದಾಯಿತ ದಸ್ತಾವೇಜು ದಾಖಲೆ ಸ್ವಯಂಚಾಲಿತವಾಗಿ ಕಂದಾಯ ಇಲಾಖೆಯ ಕರ್ನಾಟಕ ನೋಂದಾಯಿತ ದಾಖಲೆ ಸಂಗ್ರಹಾಲಯ ಮತ್ತು ಡಿಜಿ ಲಾಕರ್‌ನಲ್ಲಿ ಸೇವ್ ಆಗಲಿದೆ. ಈ ದಾಖಲೆ ಡೌನ್‌ಲೋಡ್‌ಗೆ ಅಥವಾ ಮುದ್ರಿಸಲು ವಿಶಿಷ್ಟ ದಾಖಲೆ ಸಂಖ್ಯೆ ನೀಡಲಾಗುತ್ತದೆ. ಡಿಜಿಟಲ್ ದಾಖಲೆಯು ಅಧಿಕೃತ ಮತ್ತು ಕಾನೂನುಬದ್ಧವಾಗಿ ಮಾನ್ಯವಾದ ನೋಂದಾಯಿತ ದಾಖಲೆಯಾಗಲಿದೆ. ಡಿಜಿಟಲ್ ಸಹಿ ಇರುವುದರಿಂದ ಪ್ರಮಾಣೀಕೃತ ಪ್ರತಿಯಾಗಿ ಬಳಸಿಕೊಳ್ಳಲು ಅನುಕೂಲವಾಗಲಿದೆ. ಕಂದಾಯ ಇಲಾಖೆಯ ಡೇಟಾಬೇಸ್‌ನಲ್ಲಿ ಇರುವುದೇ ಅಸಲಿ ದಾಖಲೆ ಎಂದು ಪರಿಗಣಿಸಲಾಗಿದ್ದು, ವಾರಸುದಾರರ ಬಳಿ ಕೇವಲ ಸರ್ಟಿೈಡ್ ದಾಖಲೆ ಇರಲಿದೆ.

ಕಳಚಲಿದೆ ಭಾವನಾತ್ಮಕ ಸಂಬಂಧ

ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ದಸ್ತಾವೇಜು ರಿಜಿಸ್ಟ್ರೇಷನ್ ಮುಗಿದ ಮೇಲೆ ಭೌತಿಕ ಅಥವಾ ದಾಖಲೆ ಪತ್ರದ ಬದಲಿಗೆ ವಿಶಿಷ್ಟ ಸಂಖ್ಯೆ ನೀಡಲಿದ್ದಾರೆ. ಅದನ್ನು ಬಳಸಿಕೊಂಡು ಡಿಜಿಲಾಕರ್ ಅಥವಾ ಕಾವೇರಿ 2.0 ತಂತ್ರಾಂಶದಲ್ಲಿ ದೃಢೀಕರಿಸಿದ ದಾಖಲೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಮೊದಲು ಸಿಗುತ್ತಿದ್ದ ಗ್ರೀನ್‌ಶೀಟ್ ಮೇಲೆ ಸಹಿ ಅಥವಾ ಬೆರಳಚ್ಚು ಒತ್ತುತ್ತಿದ್ದ ದಾಖಲೆಪತ್ರ ಸಿಗುವುದಿಲ್ಲ. ಈ ಮೂಲಕ ಆಸ್ತಿ ದಾಖಲೆ ಮೇಲಿದ್ದ ಭಾವನಾತ್ಮಕ ಸಂಬಂಧ ಕಳಚಲಿದೆ.

ಸವಾಲು, ಅನನುಕೂಲಗಳು

*ಆಸ್ತಿ ದಾಖಲೆ ಎಂಬ ಭಾವನಾತ್ಮಕ ಸಂಬಂಧ ಇರುವುದಿಲ್ಲ
*ಸರ್ಕಾರದ ಡೇಟಾ ಬೇಸ್‌ನಲ್ಲಿ ಇರುವುದೇ ಅಸಲಿ ದಾಖಲೆ
*ಅನಕ್ಷರಸ್ಥರು ಪೇಪರ್‌ಲೆಸ್ ಸೇವೆ ಬಳಕೆಗೆ ಬೇರೆಯವರ ಅವಲಂಬನೆ
*ಡಿಜಿಟಲ್ ದಾಖಲೆ ಆಗಿರುವ ಕಾರಣ ತಂತ್ರಜ್ಞಾನದ ಜ್ಞಾನ ಅಗತ್ಯ
*ವಿಶಿಷ್ಟ ಸಂಖ್ಯೆ ಮರೆತರೆ ಅಥವಾ ಕೇಂದ್ರ ದತ್ತಾಂಶ ನಾಶವಾದರೆ ರಿಕವರಿ ಕಷ್ಟ
*ಮೂಲ ದಾಖಲೆ ಬದಲು ದೃಢೀಕರಿಸಿದ ದಾಖಲೆಯಷ್ಟೇ ಕೈಗೆ ಸಿಗಲಿದೆ
*ಡಿಜಿಟಲ್ ಇ-ಸಹಿ, ಛಾಯಾಚಿತ್ರ, ಬೆರಳಚ್ಚು ಮಾಡಲು ತಾಂತ್ರಿಕ ದೋಷ ಅಡ್ಡಿ ಸಾಧ್ಯತೆ