Panchayat Actor Vinod Suryavanshi: 
ರಾಜ್ಯ

'ನನ್ನ ಬಣ್ಣ, ಜಾತಿಯಿಂದ ಇಂದಿಗೂ ನನ್ನೂರಿನಲ್ಲಿ ನಮ್ಮ ಕುಟುಂಬಕ್ಕೆ ದೇಗುಲ ಪ್ರವೇಶ ನಿಷಿದ್ಧ'; ವಾಸ್ತವತೆ ಬಿಚ್ಚಿಟ್ಟ ಕನ್ನಡದ ಈ ನಟ..Panchayat Actor

 Panchayat Actor Vinod Suryavanshi: 'ಬಣ್ಣದ ವಿಚಾರಕ್ಕಾಗಿ ನಮ್ಮ ಊರಿನಲ್ಲಿ ಇಂದಿಗೂ ಸಹ ದೇವಸ್ಥಾನಗಳಿಗೆ ನಮಗೆ ಪ್ರವೇಶವಿಲ್ಲ. ಹಬ್ಬಗಳು ನಮ್ಮ ಜೀವನದಲ್ಲಿ ಖುಷಿ ಕೊಡುತ್ತಿರಲಿಲ್ಲ. ಬದಲಾಗಿ ದುಃಖವನ್ನೇ ಹೊತ್ತು ತರುತ್ತಿತ್ತು. ಯಾಕಾಗಿ ಹಬ್ಬ ಬಂತೋ ಎಂದು ನಾನು ಬೈದುಕೊಂಡಿದ್ದೇನೆ. ನನ್ನ ತಂದೆ-ತಾಯಿ ಆಗಾಗ ಈ ವಿಚಾರವಾಗಿ ಅಳುತ್ತಿದ್ದದ್ದನ್ನು ನಾನು ನೋಡಿದ್ದೇನೆ' ಎಂದು ಕರ್ನಾಟಕದಲ್ಲಿರುವ ಜಾತಿ ತಾರತಮ್ಯ, ವರ್ಣಬೇಧ ನೀತಿಯಿಂದ ತಾವು ಅನುಭವಿಸುತ್ತಿರುವ ನೋವನ್ನು ಬಿಚ್ಚಿಟ್ಟಿದ್ದು ಪಂಚಾಯತ್ ಸೀಸನ್ 3 ರಲ್ಲಿ ಹೊಸ ಸಚಿವ್ ಜಿ ಪಾತ್ರ ನಿರ್ವಹಿಸಿದ ನಟ ವಿನೋದ್ ಸೂರ್ಯವಂಶಿ.
ನಟ ವಿನೋದ್ ಸೂರ್ಯವಂಶಿ ಮೂಲತಃ ಕರ್ನಾಟಕದವರು ಬಡತನದಲ್ಲಿ  ಬೆಳೆದ ಅವರು, ಕಪ್ಪು ಮೈ ಬಣ್ಣ ಹಾಗೂ ತುಳಿತಕ್ಕೊಳಗಾದ ವರ್ಗಕ್ಕೆ ಸೇರಿದ ಅವರು  ಇಲ್ಲಿಯವರೆಗೂ ತಾವು ಅನುಭವಿಸಿದ ನೋವು,  ನಟನೆಗೆ ದಾರಿ ಕಂಡು ಕೊಂಡಿದ್ದು ಹಾಗೂ ಅನುಭವಿಸಿದ ಅವಮಾನಗಳನ್ನು ಸಿದ್ಧಾರ್ಥ್ ಕನ್ನನ್ ಅವರೊಂದಿಗಿನ ಸಂದರ್ಶನದಲ್ಲಿ  ಬಿಚ್ಚಿಟ್ಟಿದ್ದಾರೆ.

ಹಬ್ಬದ ಆನಂದವೇ ಇರಲಿಲ್ಲ

'ಹಬ್ಬ ಬಂದ್ರೆ ಯಾಕಾದರೂ ಬರುತ್ತೋ ಎಂದು ಕೊಳ್ಳುತ್ತಿದ್ದೆ. ಏಕೆಂದರೆ ನಾವು ಅವುಗಳನ್ನು ಇತರರಂತೆ ಎಂದಿಗೂ ಆಚರಿಸಲು ಸಾಧ್ಯವಿಲ್ಲ. ಯಾರಾದರು ನಮಗೆ ಹಣವೋ, ಅಕ್ಕಿಯನ್ನಫ ಕೊಟ್ಟರೆ ಮಾತ್ರ ನಾವು ಹಬ್ಬ ಆಚರಿಸಲು ಸಾಧ್ಯ. ಅದೇ  ನಮ್ಮ ಪ್ರತಿ ಹಬ್ಬದ ವಾಸ್ತವ. ಇದರಿಂದ ಪ್ರತಿ ಬಾರಿಯೂ ತಾಯಿ ಆಕ್ರಂದಿಸುತ್ತಿದ್ದರು' ಎಂದಿದ್ದಾರೆ. 

ಬಾಲ್ಯದ ದಿನಗಳು ಬಲು ಕಷ್ಟ

'ನನ್ನ ತಾಯಿ ಮನೆಕೆಲಸ ಮಾಡುತ್ತಿದ್ದರು.  ನನ್ನ ತಂದೆ ಮೇಸ್ತ್ರಿ. ಅವರಿಗೆ ಪ್ರತಿದಿನ ಕೆಲಸ ಸಿಗುತ್ತಿರಲಿಲ್ಲ, ಮತ್ತು ಅವರು ಸಿಗದಿದ್ದಾಗ, ಅವರು ಕುಡಿದು ಮನೆಗೆ ಬರುತ್ತಿದ್ದರು.  ನನ್ನ ತಾಯಿಯನ್ನು ನಿಂದಿಸುತ್ತಿದ್ದರು, ಹೊಡೆಯುತ್ತಿದ್ದರು. ನಾನು ಇದನ್ನೆಲ್ಲಾ ನೋಡುತ್ತಾ ಬೆಳೆದೆ, ಅದು ಭಯಾನಕವೆನಿಸಿತು. ನಾನು  ನನ್ನ ತಂದೆಯನ್ನು ದ್ವೇಷಿಸಲಿಲ್ಲ. ನಾನು ಕಂಡ ಬಾಲ್ಯ ನಿಜಕ್ಕೂ ಚೆನ್ನಾಗಿರಲಿಲ್ಲ. ಪ್ರತಿ ಘಟ್ಟದಲ್ಲೂ ನೋವನ್ನೇ ಉಂಡಿದ್ದೇನೆ' ಎಂದು ವಿನೋದ್ ಸೂರ್ಯವಂಶಿ  ಮಾತನಾಡಿದರು. 

ಇಂದಿಗೂ ದೇವಸ್ಥಾನ ಪ್ರವೇಶಿಸಲ್ಲ

'ನನ್ನ ಊರಿನಲ್ಲಿ ಇಂದಿಗೂ ಸವರ್ಣೀಯರು ಒಂದು ಪ್ರದೇಶದಲ್ಲಿ, ದಲಿತರು ಮತ್ತೊಂದು ಕಡೆ ವಾಸವಾಗಿದ್ದೇವೆ. ದಲಿತರು ವಾಸಿಸುವ ಪ್ರದೇಶವು ಮುಖ್ಯ ಗ್ರಾಮದಿಂದ ದೂರವಿದೆ. ಇಂದಿಗೂ ನಮ್ಮ ಕುಟುಂಬ ದೇವಸ್ಥಾನಕ್ಕೆ ಹೋಗುವಂತಿಲ್ಲ. ಇತರರ ಮನೆಗೆ ಹೋಗಲು ಬಿಡುವುದಿಲ್ಲ' ಎಂದು ನೋವು ತೋಡಿಕೊಂಡರು

ದುಡ್ಡುಕೊಟ್ಟು ತಟ್ಟೆ ತೊಳೆದಿದ್ದೆ

ನಾನು 12ನೇ ವರ್ಷದಲ್ಲಿದ್ದಾಗ ನನ್ನ ತಂದೆ ಜೊತೆ ಹೋಟೆಲ್​ವೊಂದಕ್ಕೆ ಹೋಗಿದ್ದೆ. ಅಲ್ಲಿ ನಾವು ಬೇಕಾದದ್ದನ್ನು ಕೊಂಡು ತಿಂದೆವು ಆದರೆ, ನಾವು ಹಣ ಕೊಟ್ಟರು ಸಹ ನಾವು ಊಟ ಮಾಡಿದ ನಂತರ ನಮ್ಮ ತಟ್ಟೆಯನ್ನು ನಾವೇ ತೊಳೆಯಬೇಕಾಯಿತು. ಹಣ ಕೊಟ್ಟರು ಸಮಾನತೆ ಮಾತ್ರ ಕಂಡಿಲ್ಲ ಎಂದರು. 
 ಚಿತ್ರರಂಗಕ್ಕೆ ಕಾಲಿಡುವ ಮೊದಲು ಲಿಫ್ಟಮನ್​ ಆಗಿ  1600 ರೂಪಾಯಿ ಸಂಬಳಕ್ಕೆ ಕೆಲಸ ಮಾಡಿದ್ದೇಮೆ. ಅಷ್ಟೇ ಅಲ್ಲದೆ, ಆಫೀಸ್​ ಬಾಯ್​, ಸೆಕ್ಯುರಿಟಿ ಗಾರ್ಡ್​  ಆಗಿ ಕೆಲಸ  ಮಾಡಿರುವ ಬಗ್ಗೆ ಹೇಳಿದ್ದಾರೆ. ಇಷ್ಟೇ ಅಲ್ಲದೆ, ಮಳೆಯಲ್ಲಿ ನಿಂತು ಸೆಕ್ಯೂರಿಟಿ ಕೆಲಸ ಮಾಡುವಾಗ ಶೂ ಒಳಗೆ ನೀರು ಸೇರಿ ಕಾಲುಗಳಲ್ಲಿ ಗುಳ್ಳೆಗಳಾಗುತ್ತಿದ್ದವು. ಜನರು ನಮ್ಮನ್ನು ನಡೆಸಿಕೊಳ್ಳುವ ರೀತಿ ನಾವು ಮಾಡುವ ಕೆಲಸದ ಮೇಲೆ ನಿರ್ಧರಿತವಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ. 

ಒಂಬತ್ತು ವರ್ಷದ ನಂತ್ರ ಸಿಕ್ತು ಅವಕಾಶ

ಒಮ್ಮೆ ಸೂರ್ಯವಂಶಿಯವರ ಸ್ನೇಹಿತ ಜೂನಿಯರ್ ಆರ್ಟಿಸ್ಟ್ ಕೆಲಸ ಇದೆ  ನಿನಗೆ 500 ರೂಪಾಯಿ ಸಿಗುತ್ತೆ... ಆಸಕ್ತಿ ಇದೆಯೇ? ಎಂದು ಕೇಳಿದ್ದರಂತೆ. ಅದಾದ ಕೂಡಲೇ ಸಿನಿಮಾ ಸೆಟ್‌ಗೆ  ಹೋದ ಅವರು, ಕ್ಯಾಮೆರಾ ಮುಂದೆ ನಿಂತು ನಿಧಾನವಾಗಿ ನಟನೆ ಆರಂಭಿಸಿದರು.ಎರಡು ವರ್ಷಗಳ ಕಾಲ ಅವರು ಚಿತ್ರದ ಸೆಟ್ ಅನ್ನು ತಮ್ಮ ಶಾಲೆಯಂತೆ ಪರಿಗಣಿಸಿ, ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಒಂದಲ್ಲ ಒಂದು ದಿನ ಸಣ್ಣ ಪಾತ್ರಗಳು, ಸಣ್ಣ ಅವಕಾಶಗಳು  ಸಿಗುವ ಭರವಸೆಯಲ್ಲಿದ್ದ ಅವರಿಗೆ,  ಒಂಬತ್ತು ವರ್ಷದ ನಂತರ ಅವರ ಕನಸಿನ ಪಾತ್ರ ಸಿಕ್ಕಿತು. ಅದೇ ಪಂಚಾಯತ್ ಚಿತ್ರದಲ್ಲಿ ಕಾರ್ಯದರ್ಶಿಯ ಪಾತ್ರ. ಇದು ಅವರ ದಿಕ್ಕನ್ನೇ ಬದಲಿಸಿತು. ಇಂದು ಅವರು ಜಾಲಿ ಎಲ್‌ಎಲ್‌ಬಿ 3 ಮತ್ತು ಜನಾವರ್‌ನಂತಹ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.

ವಿನೋದ್​ ಸೂರ್ಯವಂಶಿ ನಟನೆಯ ಸಿನಿಮಾಗಳಿವು

​ವಿನೋದ್ ಸೂರ್ಯವಂಶಿ ಅವರು ಈಗಾಗಲೇ 'ಜಾನವರ್', 'ತಮ್ಮ', 'ಸತ್ಯಮೇವ ಜಯತೇ' ಮತ್ತು 'ಜಾಲಿ ಎಲ್‌ಎಲ್‌ಬಿ 3' ನಂತಹ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ, (ಏಜೆನ್ಸೀಸ್​).