Pakistani nationals arrested in Bagepalli!
ಬಾಗೇಪಲ್ಲಿ ತಾಲೂಕಿನ ದಾಸಗಾರೆಪಲ್ಲಿಯಲ್ಲಿ ವಾಸವಿದ್ದ ತಾಯಿ, ಮಗ
ಫರ್ಹಾನಾಜ್, ಆಕೆಯ ಪುತ್ರ ಮೊಹಮ್ಮದ್ ಫರ್ದೀನ್ ಖಾನ್ ಬಂಧಿಸಿದ ಪೊಳೀಸರು
ವೀಸಾ ಅವಧಿ ಮುಗಿದಿದ್ದರೂ ಭಾರತದಲೇ ವಾಸ
ಸುಳ್ಳು ಮಾಹಿತಿಮ ನೀಡಿ ಸರ್ಕಾರಿ ದಾಖಲೆ, ಸೌಲಭ್ಯ ಪಡೆದು ವಾಸ
ಬಾಗೇಪಲ್ಲಿ : ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಕ್ರಿಯೆ ನಡುವೆ ಬಾಗೇಪಲ್ಲಿ ತಾಲೂಕಿನ ದಾಸಗಾರೆಪಲ್ಲಿಯಲ್ಲಿ ಪಾಕಿಸ್ತಾನ ಪ್ರಜೆಗಳು ಆಧಾರ್, ಪಡಿತರ, ಮತದಾರ ಗುರುತಿನ ಚೀಟಿ ಸೇರಿ ಸರ್ಕಾರದಿಂದ ವಿವಿಧ ದಾಖಲೆಗಳನ್ನು ಮಾಡಿಸಿಕೊಂಡು ಅಕ್ರಮವಾಗಿ ನೆಲೆಸಿರುವುದು ಬೆಳಕಿಗೆ ಬಂದಿದೆ.
ತಹಸೀಲ್ದಾರ್ ಮನೀಷಾ ಎನ್.ಪತ್ರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾಕಿಸ್ತಾನ ಮೂಲದ ಫರ್ಹಾನಾಜ್ ಮತ್ತು ಆಕೆಯ ಪುತ್ರ ಮೊಹಮ್ಮದ್ ಫರ್ದೀನ್ ಖಾನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದರು. ಹಾಗೆಯೇ ಭಾರತೀಯ ಪೌರತ್ವ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಸರ್ಕಾರಿ ದಾಖಲೆಗಳನ್ನು ಪಡೆದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನ ಮೂಲದ ಪ್ರಜೆಗಳು ಅಕ್ರಮವಾಗಿ ಬಾಗೇಪಲ್ಲಿ ತಾಲೂಕಿನಲ್ಲಿ ವಾಸವಿರುವ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ಬರುತ್ತಿದ್ದಂತೆ ಪೊಲೀಸರು ತಕ್ಷಣ ಪರಿಶೀಲಿಸುವಂತೆ ತಹಸೀಲ್ದಾರ್ ಕಚೇರಿಗೆ ಸೂಚಿಸಿದ್ದಾರೆ. ಪೊಲೀಸ್ ಇಲಾಖೆ ಆದೇಶದಂತೆ ದಾಖಲೆಗಳನ್ನು ಪರಿಶೀಲಿಸಿದಾಗ ಪರ್ನಾಜ್ ಖಾನ್ ಹಾಗೂ ಮಹಮದ್ ಫರ್ದೀನ್ ಖಾನ್ ಸರ್ಕಾರಕ್ಕೆ ಸಲ್ಲಿಸಿರುವ ದಾಖಲೆಗಳು ನಕಲಿ ಎಂಬುದು ಪತ್ತೆಯಾಗಿದೆ.
ದಾಸಗಾರೆಪಲ್ಲಿಯ ಅಯೂಬ್ ಖಾನ್ ಎಂಬುವರನ್ನು ಪಾಕಿಸ್ತಾನ ಮೂಲದ ಫರ್ಹಾನಾಜ್ ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಈ ಪೈಕಿ ಮಹಿಳೆ ಹಾಗೂ ಆಕೆಯ ಪುತ್ರ ಮೊಹಮ್ಮದ್ ಫರ್ದೀನ್ ಖಾನ್ ಪಾಕಿಸ್ತಾನದ ಪೌರತ್ವ ಹೊಂದಿದ್ದಾರೆ ಎನ್ನುವುದು ತಿಳಿದುಬಂದಿದೆ. ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಪಾಕಿಸ್ತಾನ ಮೂಲದವರಾಗಿದ್ದರೂ ಭಾರತೀಯರು ಎಂಬುದಾಗಿ ಬಿಂಬಿಸಿಕೊಳ್ಳುವ ನಿಟ್ಟಿನಲ್ಲಿ ಸುಳ್ಳು ಮಾಹಿತಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪ ಕೇಳಿ ಬಂದಿದೆ. ಭಾರತೀಯ ಪೌರತ್ವ ಇಲ್ಲದಿದ್ದರೂ ರೇಷನ್ ಕಾರ್ಡ್, ವೋಟರ್ ಐಡಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ಹೊಂದಿರುವುದನ್ನು ಪತ್ತೆ ಹಚ್ಚಿಸಿರುವ ಅಧಿಕಾರಿಗಳು, ದಾಖಲೆಗಳ ಸೃಷ್ಟಿಯಲ್ಲಿ ಭಾಗಿಯಾದವರ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
1993ರಲ್ಲಿ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಮೂಲತ ದಾಸೇಗಾರಿಪಲ್ಲಿಯ ಮೊಹಮ್ಮದ್ ಅಯೂಬ್ ಖಾನ್ 2003ರಲ್ಲಿ ಪಾಕಿಸ್ತಾನಿ ಮೂಲದ ಫರ್ಹಾನಾಜ್ನನ್ನು ಮದುವೆಯಾಗಿದ್ದಾನೆ. ಇವರಿಗೆ 2004ರಲ್ಲಿ ಪಾಕಿಸ್ತಾನದಲ್ಲಿ ಮೊದಲ ಮಗ ಮೊಹಮ್ಮದ್ ಫರ್ದಿನ್ ಜನಿಸಿದ್ದನು. ನಂತರ ಉಳಿದ ಇಬ್ಬರು ಮಕ್ಕಳು ದುಬೈನಲ್ಲಿ ಜನಿಸಿದ್ದರು. ಬಳಿಕ ಇಡೀ ಕುಟುಂಬ ಭಾರತಕ್ಕೆ ಬಂದು ಉಳಿದುಕೊಂಡಿದ್ದು, ಪಾಕಿಸ್ತಾನ ಪೌರತ್ವ ಹೊಂದಿರುವ ಅಯೂಬ್ ಖಾನ್ ಹೆಂಡತಿ ಫರ್ಹಾನಾಜ್ ಹಾಗೂ ಮೊದಲನೇ ಮಗ ಮೊಹಮ್ಮದ್ ಫರ್ದೀನ್ ಇಬ್ಬರು 6 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕರ್ನಾಟಕ ಸರ್ಕಾರಕ್ಕೆ ನಕಲಿ ದಾಖಲೆ ಸಲ್ಲಿಸಿ ಸ್ಥಳಿಯ ವಿಳಾಸದ ವಾಸಸ್ಥಳ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿ ಇತರ ದಾಖಲೆಗಳನ್ನು ಪಡೆದುಕೊಂಡಿದ್ದರು.
ಈ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಬಾಗೇಪಲ್ಲಿ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ವಿಳಾಸ ಬದಲಾವಣೆ ಮಾಡಿಕೊಂಡು ಸ್ಥಳಿಯವಾಗಿ ವಾಸ ಮಾಡುವುದರ ಜತೆಗೆ ಸರ್ಕಾರದ ಎಲ್ಲ ಸೌಲಭ್ಯ ಪಡೆದುಕೊಂಡಿದ್ದಾರೆ. ಈ ಪೈಕಿ ಇಬ್ಬರಿಗೆ ಭಾರತೀಯ ಅಧಿಕೃತ ಪೌರತ್ವ ಇಲ್ಲ ಎನ್ನುವುದು ತಿಳಿದು ಬಂದಿದೆ. ಇನ್ನು ಆಪರೇಷನ್ ಸಿಂಧೂರ್ ನಂತರ ವೀಸಾ ನವೀಕರಣ ಮಾಡಿಕೊಂಡಿಲ್ಲ. ಇದಕ್ಕೆ ಅಕ್ರಮವಾಗಿ ನೆಲೆಸಿರುವುದು ಹಾಗೂ ಸುಳ್ಳು ಮಾಹಿತಿ ನೀಡಿ ಸರ್ಕಾರಿ ದಾಖಲೆಗಳನ್ನು ಪಡೆದಿರುವುದರ ಆರೋಪದ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
"
ಭಾರತ ಪೌರತ್ವ ಹೊಂದಿಲ್ಲದ ಪಾಕಿಸ್ತಾನ ಮೂಲದ ಫರ್ಹಾನಾಜ್ ಖಾನ್, ಮೊಹಮ್ಮದ್ ಫರ್ದೀನ್ ಖಾನ್ ಎಂಬುವವರು ಸರ್ಕಾರಿ ದಾಖಲೆಗಳನ್ನು ಮರೇಮಾಚಿ ನಕಲಿ ದಾಖಲೆ ಪಡೆದು ಬಾಗೇಪಲ್ಲಿಯಲ್ಲಿ ವಾಸವಾಗಿರುವುದು ತನಿಖೆ ಮಾಡಿದಾಗ ಬೆಳಕಿಗೆ ಬಂದಿದೆ. ತಾಯಿ ಮತ್ತು ಮಗ ಇಬ್ಬರನ್ನು ಬಾಗೇಪಲ್ಲಿ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದೇವೆ.
— ಮನೀಷಾ ಪತ್ರಿ, ತಹಸೀಲ್ದಾರ್ ಬಾಗೇಪಲ್ಲಿ