Padma Award 
ರಾಜ್ಯ

ಪದ್ಮ ಪ್ರಶಸ್ತಿ ಪ್ರದಾನ: ಆರ್‌. ಗಣೇಶ್, ಅಂಕೇಗೌಡ, ಸುಶೀಲಮ್ಮ ಸೇರಿದಂತೆ ರಾಜ್ಯದ ಸಾಧಕರಿಗೆ ರಾಷ್ಟ್ರಪತಿ ಗೌರವ! | Padma Award

ನವದೆಹಲಿ: ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ 'ಪದ್ಮ ಪ್ರಶಸ್ತಿ'ಗಳನ್ನು(Padma Award) ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕದ 8 ಮಂದಿ ಸಾಧಕರು ಒಳಗೊಂಡಂತೆ ದೇಶದ ಒಟ್ಟು 66 ಗಣ್ಯರಿಗೆ 2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಮೊದಲ ಹಂತದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರುನಾಡಿನ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಮಿನುಗಿದರು.
ಮೊದಲ ಹಂತದಲ್ಲಿ ಒಟ್ಟು 2 ಪದ್ಮವಿಭೂಷಣ, 6 ಪದ್ಮಭೂಷಣ ಹಾಗೂ 58 ಪದ್ಮಶ್ರೀ ಪ್ರಶಸ್ತಿಗಳನ್ನು ವಿತರಿಸಲಾಯಿತು. ಇದೇ ವೇಳೆ ಬಾಲಿವುಡ್‌ನ ದಿವಂಗತ ಹಿರಿಯ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಘೋಷಿಸಲಾಗಿದ್ದ 'ಪದ್ಮವಿಭೂಷಣ' ಪ್ರಶಸ್ತಿಯನ್ನು ಅವರ ಪತ್ನಿ, ಸಂಸದೆ ಹೇಮಾ ಮಾಲಿನಿ ಸ್ವೀಕರಿಸಿದರು. ಉಳಿದ ಸಾಧಕರಿಗೆ ಎರಡನೇ ಹಂತದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.

ಶತಾವಧಾನಿ ಆರ್. ಗಣೇಶ್‌ಗೆ 'ಪದ್ಮಭೂಷಣ'

ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಲೋಕದಲ್ಲಿ ಅಪಾರ ಸಾಧನೆ ಮಾಡಿರುವ ಬಹುಭಾಷಾ ಪಂಡಿತ, ಶತಾವಧಾನಿ ಆರ್. ಗಣೇಶ್ ಅವರಿಗೆ ಕಲಾ ವಿಭಾಗದಲ್ಲಿ ಪ್ರತಿಷ್ಠಿತ 'ಪದ್ಮಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ, ಸಂಸ್ಕೃತ, ತೆಲುಗು ಹಾಗೂ ಪ್ರಾಕೃತ ಭಾಷೆಗಳಲ್ಲಿ 1300ಕ್ಕೂ ಅಧಿಕ ಅವಧಾನಗಳನ್ನು ನಡೆಸಿ ಸೈ ಎನಿಸಿಕೊಂಡಿರುವ ಇವರ ಸಾಹಿತ್ಯಿಕ ಕೊಡುಗೆಯನ್ನು ಪರಿಗಣಿಸಿ ಈ ಉನ್ನತ ಗೌರವ ನೀಡಲಾಗಿದೆ.

ಮಂಡ್ಯದ 'ಪುಸ್ತಕ ಪ್ರೇಮಿ' ಅಂಕೇಗೌಡಗೆ ಪದ್ಮಶ್ರೀ ಗರಿ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಹೆಮ್ಮೆಯ ಸಾಧಕ ಅಂಕೇಗೌಡ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ಪ್ರದಾನ ಮಾಡಲಾಯಿತು. ತಮ್ಮ ಜೀವಿತಾವಧಿಯ ದುಡಿಮೆಯನ್ನೆಲ್ಲ ಧಾರೆ ಎರೆದು ಲಕ್ಷಾಂತರ ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ, ‘ಪುಸ್ತಕ ಮನೆ’ ಎಂಬ ಜ್ಞಾನದ ಮ್ಯೂಸಿಯಂ ನಿರ್ಮಿಸಿರುವ ಇವರ ಜ್ಞಾನ ದಾಸೋಹವನ್ನು ದೇಶವೇ ಕೊಂಡಾಡಿದೆ.

ಸಮಾಜ ಸೇವಕಿ ಡಾ. ಎಸ್.ಜಿ. ಸುಶೀಲಮ್ಮಗೆ ಗೌರವ

ಬೆಂಗಳೂರಿನ ಪ್ರಸಿದ್ಧ 'ಸುಮಂಗಲಿ ಸೇವಾ ಆಶ್ರಮ'ದ ಸಂಸ್ಥಾಪಕಿ, ಹಿರಿಯ ಸಮಾಜ ಸೇವಕಿ ಡಾ. ಎಸ್.ಜಿ. ಸುಶೀಲಮ್ಮ ಅವರಿಗೂ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೊಂದ ಮತ್ತು ಅಸಹಾಯ ಮಹಿಳೆಯರ ಸಬಲೀಕರಣ, ಅನಾಥ ಮಕ್ಕಳ ಸಂರಕ್ಷಣೆ ಹಾಗೂ ಬಡವರಿಗೆ ಉದ್ಯೋಗ ತರಬೇತಿ ನೀಡುವ ಮೂಲಕ ಸಮಾಜದಲ್ಲಿ ಹೊಸ ಬೆಳಕು ಮೂಡಿಸಿದ ಇವರ ಸೇವೆಗೆ ಈ ಪ್ರಶಸ್ತಿ ಸಂದಿದೆ.

ರಾಜ್ಯದ ಇತರ ಪ್ರಮುಖ ಸಾಧಕರು

ಕರ್ನಾಟಕದ ಮತ್ತಷ್ಟು ಪ್ರತಿಭೆಗಳು ವಿವಿಧ ಕ್ಷೇತ್ರಗಳಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಾಹಿತ್ಯ ಮತ್ತು ಶಿಕ್ಷಣ: ಶಶಿಶೇಖರ್ ವೇಂಪತಿ
ವಿಜ್ಞಾನ ಮತ್ತು ಎಂಜಿನಿಯರಿಂಗ್: ಶುಭಾ ವೆಂಕಟೇಶ್ ಐಯ್ಯಂಗಾರ್
ವೈದ್ಯಕೀಯ ಕ್ಷೇತ್ರ: ಡಾ. ಸುರೇಶ್ ಹನಗವಾಡಿ
ವಾಣಿಜ್ಯ ಮತ್ತು ಕೈಗಾರಿಕೆ: ಟಿಟಿ ಜಗನ್ನಾಥನ್ (ಮರಣೋತ್ತರ).