ಕಕ್ಕಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವದಲ್ಲಿ ದೇವರ ನೃತ್ಯ ಬಲಿ. 
ರಾಜ್ಯ

ಪಾಡಿಶ್ರೀ ಇಗುತ್ತಪ್ಪ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ

ನಾಪೋಕ್ಲು: ಇಲ್ಲಿಗೆ ಸಮೀಪದ ಕಕ್ಕಬೆಯ ಪಾಡಿ ಶ್ರೀ ಇಗುತ್ತಪ್ಪ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಶ್ರದ್ಧಾ ಭಕ್ತಿಯಿಂದ ಸೋಮವಾರ ಸಂಪನ್ನಗೊಂಡಿತು.
ನೀಲೇಶ್ವರ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೇ 13 ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಪೂಜಾ ವಿಧಿ ವಿಧಾನಗಳಲ್ಲಿ ಪ್ರಮುಖವಾಗಿ ಪುಣ್ಯಹ ಅಂಕುರಾರ್ಪಣೆ , ವಾಸ್ತು ರಾಕ್ಷೋಘ್ನ ಹೋಮ, ಕಲಶ ಪೂಜೆ, ಕಲಶಾಭಿಷೇಕ, ಪ್ರಾಯಶ್ಚಿತ ಹೋಮಗಳು, ಕಲಶಾಭಿಷೇಕ ಪ್ರಾಯಶ್ಚಿತ ಹೋಮಗಳು ಬಿಂಬಶುದ್ಧಿ, ಅಂಕುರ ಪೂಜೆ, ಶಾಂತಿ ಹೋಮಗಳು, ಅಧಿವಾಸ ಹೋಮಗಳು ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು.
ಸೋಮವಾರ ಬೆಳಗ್ಗೆ ರೋಹಿಣಿ ನಕ್ಷತ್ರ ಮಿಥುನ ಲಗ್ನದಲ್ಲಿ ಅಷ್ಟ ಬಂಧ ಲೇಪನ ಪರಿಕಲಶಾಭಿಷೇಕ ಬ್ರಹ್ಮಕಲಶಾಭಿಷೇಕ ಜರುಗಿ ಆನಂತರ ದೇವರ ನೃತ್ಯ ಬಲಿ ನಡೆಯಿತು.
ಈ ಸಂದರ್ಭ ದೇವಾಲಯದ ದೇವತಕ್ಕರು, ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಅವರು ಮಳೆ, ಬೆಳೆ ಹಾಗೂ ನಾಡಿನ ಸಮಸ್ತ ಜನರ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ, ಮಂತ್ರಾಕ್ಷತೆ ಹಾಗೂ ಅನ್ನ ಸಂತರ್ಪಣೆ ಜರುಗಿತು ಈ ಸಂದರ್ಭ ದೇವಾಲಯವನ್ನು ಹೂವಿನಿಂದ ವಿಶೇಷ ಅಲಂಕೃತಗೊಳಿಸಲಾಗಿತ್ತು.
ಉತ್ಸವದಲ್ಲಿ ದೇವಾಲಯದ ಭಕ್ತ ಜನ ಸಂಘದ ಉಪಾಧ್ಯಕ್ಷ ಕಲ್ಯಾಟತಂಡ ಅಪ್ಪಣ್ಣ, ಕಾರ್ಯದರ್ಶಿ ಬಟ್ಟೀರ ಚೊಂದಮ್ಮ ಮೇದಪ್ಪ, ಖಜಾಂಜಿ ಅಂಜಪರವಂಡ ಕುಶಾಲಪ್ಪ, ಮಾಜಿ ಹಾಗೂ ಹಾಲಿ ಆಡಳಿತ ಮಂಡಳಿ ಪದಾಧಿಕಾರಿ ಸದಸ್ಯರು ಮತ್ತು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ಹಾಗೂ ಹಾಲಿ, ಮಾಜಿ ಆಡಳಿತ ಮಂಡಳಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸೇವೆ ಹರಕೆ ಸಲ್ಲಿಸಿದರು.