ರಾಯಚೂರು ಜಿಲ್ಲಾ ಉತ್ಸವದಲ್ಲಿ ಶ್ವಾನ ಪ್ರದರ್ಶನ. 
ರಾಜ್ಯ

ರಾಯಚೂರು ಜಿಲ್ಲಾ ಉತ್ಸವದಲ್ಲಿ ಮಾಲೀಕರ ಆಜ್ಞೆ, ಶ್ವಾನಗಳ ಜಾಣ್ಮೆ

ಪ್ರಮುಖ ಮುಖ್ಯಾಂಶಗಳು

  • ನಾಯಿಗಳ ಲೋಕ ಅನಾವರಣ
  • ಪ್ರಾಣಿ ಪ್ರಿಯರ ಮನಗೆದ್ದ ವಿವಿಧ ತಳಿಗಳು
ರಾಯಚೂರು: ಒಂದೆಡೆ ರಾಜಗಾಂಭೀರ್ಯದಿಂದ ಬೀಗುವ ಮುಧೋಳ ಹೌಂಡ್ಸ್, ಮತ್ತೊಂದೆಡೆ ಶಿಸ್ತಿನ ಸಿಪಾಯಿಗಳಂತೆ ಕಸರತ್ತು ನಡೆಸುವ ಪೊಲೀಸ್ ಶ್ವಾನಗಳು, ಇವುಗಳ ನಡುವೆ ಮುದ್ದಾದ ಮರಿಗಳ ಜೊತೆ ಸೆಲ್ಫಿ ಸಂಭ್ರಮ..!
ಇದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಕಂಡುಬಂದ ದೃಶ್ಯ. ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನವು ಸಾರ್ವಜನಿಕರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿತು. ಪ್ರದರ್ಶನ ಮೈದಾನದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾದ ವಿಭಿನ್ನ ತಳಿಗಳ ನಾಯಿಗಳು ಬೊಗಳುವ ಮೂಲಕ ಪರಸ್ಪರ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಹವಣಿಸಿದವು.
ಮಾಲೀಕರು ಎಷ್ಟೇ ಸಮಾಧಾನಪಡಿಸಿದರೂ ಅವುಗಳ ದನಿ ಮಾತ್ರ ಜೋರಾಗುತ್ತಲೇ ಇತ್ತು. ಸ್ಥಳೀಯ ಶ್ವಾನಗಳು ಹೊರಗಿನಿಂದ ಬಂದಿದ್ದ ಗಣ್ಯ ತಳಿಗಳನ್ನು ಕಂಡು ಕ್ಷಣಕಾಲ ಗೊಂದಲಕ್ಕೀಡಾದವು. ತಮ್ಮದೇ ಸಂತತಿಯ ರಾಜಮರ್ಯಾದೆಯನ್ನು ಕಂಡು ದಿಗಿಲುಗೊಂಡವುಗಳಂತೆ ವರ್ತಿಸಿದ ನಾಯಿಗಳು, ಅತ್ತಿತ್ತ ಓಡಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದವು.

ವೈವಿಧ್ಯಮಯ ತಳಿಗಳ ಸಮಾಗಮ

ಮೇಳದಲ್ಲಿ ಒಟ್ಟು 160 ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡು ನೋಡುಗರ ಕಣ್ಮನ ಸೆಳೆದವು. ಅಚ್ಚರಿಯೆಂದರೆ ಇಲ್ಲಿ 50 ಕ್ಕೂ ಅಧಿಕ ಪ್ರಭೇದಗಳಿದ್ದವು. ಜರ್ಮನ್ ಶೆಪರ್ಡ್, ಬೆಲ್ಜಿಯನ್ ಮೆಲಿನೊವ, ಲ್ಯಾಬ್ರಡಾರ್ ರಿಟ್ರೀವರ್, ಡಾಬರ್‌ಮನ್, ರಾಟ್‌ವ್ಹೀಲರ್, ಕ್ಯಾರವಾನ್ ಹೌಂಡ್, ಜಾಕ್ ರಸೆಲ್ ಟೆರಿಯರ್, ಪಗ್, ಪಮೇರಿಯನ್, ಗೋಲ್ಡನ್ ರಿಟ್ರೀವರ್ ಹಾಗೂ ಆಕರ್ಷಕ ಶಿಡ್ಜ್ ತಳಿಗಳು ಪ್ರದರ್ಶನಕ್ಕೆ ಮೆರುಗು ನೀಡಿದವು.

ಖಾಕಿ ಪಡೆಯ ಶಿಸ್ತಿನ ಪ್ರದರ್ಶನ

ಪ್ರದರ್ಶನದ ಆರಂಭದಲ್ಲಿ ಪೊಲೀಸ್ ಶ್ವಾನ ದಳದ ಡಾಬರ್‌ಮನ್ ಹಾಗೂ ಲ್ಯಾಬ್ರಡಾರ್ ನಾಯಿಗಳು ನೀಡಿದ ಪ್ರಾತ್ಯಕ್ಷಿಕೆ ರೋಮಾಂಚನಕಾರಿಯಾಗಿತ್ತು. ವಾಸನೆ ಗ್ರಹಿಸಿ ಬಾಂಬ್ ಪತ್ತೆ ಹಚ್ಚುವ ಮತ್ತು ಅಪರಾಧಿಗಳನ್ನು ಹಿಡಿಯುವ ಸಾಹಸ ಕಂಡ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಮಾಲೀಕರ ಪ್ರತಿಯೊಂದು ಆದೇಶವನ್ನು ಚಾಚೂ ತಪ್ಪದೆ ಪಾಲಿಸುವ ಈ ಶ್ವಾನಗಳ ನಿಷ್ಠೆ ಮತ್ತು ಕೌಶಲ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮಕ್ಕಳ ಆಟ-ಸೆಲ್ಫಿ ಸಂಭ್ರಮ

ಮಧ್ಯಾಹ್ನದಿಂದ ಸಂಜೆಯವರೆಗೆ ನಡೆದ ಈ ಮೇಳದಲ್ಲಿ ಯುವಜನತೆ ಮತ್ತು ಮಕ್ಕಳ ಸಡಗರ ಜೋರಾಗಿತ್ತು. ಪುಟಾಣಿಗಳು ನಾಯಿಮರಿಗಳನ್ನು ಅಪ್ಪಿ ಮುದ್ದಾಡಿದರೆ, ಯುವಕ-ಯುವತಿಯರು ತಮಗೆ ಇಷ್ಟವಾದ ನಾಯಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಮಾಲೀಕರು ತಮ್ಮ ಶ್ವಾನಗಳಿಗೆ ನೀಡುತ್ತಿದ್ದ ತರಬೇತಿ ಮತ್ತು ಪ್ರೀತಿಯ ಸಂಭಾಷಣೆಯು ನೆರೆದಿದ್ದವರಲ್ಲಿ ಕುತೂಹಲ ಮೂಡಿಸಿತು.

ನೋಡಲು ಮುಧೋಳ, ಪಾಲನೆಯಲ್ಲಿ ದುಬಾರಿ

ಅಮೆರಿಕ ಮೂಲದ ಗ್ರಾಡನ್ ಡಾಗ್ ಇಡೀ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು. 32 ಇಂಚು ಎತ್ತರವಿದ್ದು ಮುಧೋಳ ನಾಯಿಯನ್ನು ಹೋಲುವ ಈ ಶ್ವಾನದ ಬೆಲೆ ಹಾಗೂ ಪಾಲನೆ ಮಾತ್ರ ಅಚ್ಚರಿ ತರಿಸುವಂತಿತ್ತು.
ಮಾಲೀಕ ವಿನೋದ್ ದಾವಂತಿ ಅವರು ಇದನ್ನು 60 ಸಾವಿರ ರೂ.ಗೆ ಖರೀದಿ ಮಾಡಿದ್ದು, ಇದರ ಮಾಸಿಕ ಖರ್ಚೇ ಸುಮಾರು 12-15 ಸಾವಿರ ರೂ.ವರೆಗಿದೆ. ಪ್ರತಿದಿನ ಒಂದು ಕೆಜಿ ಚಿಕನ್ ಹಾಗೂ ಒಂದು ಸೇರು ಅನ್ನದ ಜೊತೆ ಸ್ನ್ಯಾಕ್ಸೃ್ ತಿನ್ನುವ ಈ ಶ್ವಾನ ಪ್ರದರ್ಶನದಲ್ಲಿ ಗಾಂಭೀರ್ಯದಿಂದ ಮಿಂಚಿತು.