ಬೆಂಗಳೂರು: ರಾಜ್ಯ ಸರ್ಕಾರದ ಖಜಾನೆ ತುಂಬಿಸುವ ಪ್ರಮುಖ ಇಲಾಖೆಗಳಲ್ಲಿ ಒಂದಾದ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಕೊನೆಗೆ ಸ್ವಂತ ಕಟ್ಟಡದ ಭಾಗ್ಯ ದೊರಕುವ ಕಾಲಕೂಡಿ ಬಂದಿದೆ. ಇದಕ್ಕಾಗಿ ಪ್ರತ್ಯೇಕ ಅನುದಾನ ಬಿಡುಗಡೆಯಾಗಿದ್ದು, ಸ್ಥಳ ಗುರುತಿಸುವುದು ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 259 ಉಪ ನೋಂದಣಿ ಕಚೇರಿಗಳು, 35 ಜಿಲ್ಲಾ ನೋಂದಣಿ ಕಚೇರಿ ಮತ್ತು 1 ಐಜಿಆರ್ ಆಫೀಸ್ ಸೇರಿ 295 ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
259 ಉಪನೋಂದಣಿ ಕಚೇರಿಗಳ ಪೈಕಿ ಕೇವಲ 21 ಕಚೇರಿಗಳಿಗೆ ಮಾತ್ರ ಸ್ವಂತ ಕಟ್ಟಡಗಳು ಇದ್ದು, ಇದರಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಇರುವ 43 ಉಪ ನೋಂದಣಿ ಕಚೇರಿಗಳಲ್ಲಿ ಎರಡಕ್ಕೆ ಮಾತ್ರ ಸ್ವಂತ ಕಟ್ಟಡ ಹೊಂದಿವೆ. ಉಳಿದ ಕಡೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಉಳಿದಂತೆ 162 ಕಚೇರಿಗಳು ಸರ್ಕಾರಿ ಕಟ್ಟಡ ಮತ್ತು 76 ಬಾಡಿಗೆ ಕಟ್ಟಡಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳು ನಡೆಯುತ್ತಿವೆ. ಬೆಂಗಳೂರು ನಗರದಲ್ಲಿ 34 ಕಚೇರಿಗಳು ಬಾಡಿಗೆಗೆ ಪಡೆಯಲಾಗಿದೆ.
ಇದಕ್ಕಾಗಿ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಬಾಡಿಗೆ ಪಾವತಿ ಮಾಡಲಾಗುತ್ತಿದೆ.
ಇದಲ್ಲದೆ, ಸ್ಥಿರಾಸ್ತಿ ನೋಂದಣಿಗೆ ಬಂದು ಲಕ್ಷಾಂತರ ರೂಪಾಯಿ ಪಾವತಿ ಮಾಡುತ್ತಿದ್ದ ಜನರಿಗೆ ಸರ್ಕಾರಿ ಕಚೇರಿಗಳಲ್ಲಿ ಮೂಲಸೌಕರ್ಯದ ಕೊರತೆ ಕಾಡುತ್ತಿತ್ತು. ಜತೆಗೆ ಪ್ರತಿದಿನ ಕೋಟ್ಯಂತರ ರೂ. ರಾಜಸ್ವ ಸಂಗ್ರಹಿಸುವ ಕಚೇರಿಗಳಲ್ಲಿ ಯಾವುದೇ ಸೌಲಭ್ಯ ಇಲ್ಲದೆ ಇರುವುದು ಕಂಡುಬಂದಿತ್ತು.
ಇದನ್ನು ಮನಗೊಂಡ ಸರ್ಕಾರ 2025ರ ಏಪ್ರಿಲ್‌ನಲ್ಲಿ ಉಪ ನೋಂದಣಿ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ 76 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿ ಜವಾಬ್ದಾರಿಯನ್ನು ಗೃಹ ಮಂಡಳಿಗೆ ವಹಿಸಿದೆ.
ಜತೆಗೆ ಬೆಂಗಳೂರು ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಇರುವ ಉಪನೋಂದಣಿ ಕಚೇರಿಗಳಿಗೆ ಸ್ವಂತ ಕಟ್ಟಡಕ್ಕಾಗಿ 26 ಸ್ವತ್ತುಗಳನ್ನು ಗುರುತಿಸಲಾಗಿದೆ. ಈ ಪೈಕಿ 12 ಸ್ವತ್ತುಗಳು ಜಿಬಿಎ ಪ್ರಾಧಿಕಾರದಿಂದ ಮತ್ತು 8 ಸ್ವತ್ತುಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಡೆಯಿಂದ ಹಾಗೂ 6 ಸ್ವತ್ತುಗಳನ್ನು ಬಿಡಿಎಯಿಂದ ಪಡೆಯಲು ಕಂದಾಯ ಇಲಾಖೆ ಮುಂದಾಗಿದೆ.
ಗುರುತಿಸಿರುವ ಸ್ವತ್ತುಗಳ ಪೋಟೋ, ನಕ್ಷೆ, ಜಿಯೋ ಲೋಕೇಷನ್ ಮತ್ತು ಭೌಗೋಳಿಕ ಮಾಹಿತಿ ಸಂಗ್ರಹಿಸಲು ಸಂಬಂಧಮಟ್ಟ ಅಧಿಕಾರಿಗಳಿಗೆ ಕಂದಾಯ ಇಲಾಖೆ ಸಚಿವರು ಸೂಚಿಸಿದ್ದಾರೆ.
ರಾಜ್ಯದ ಇತರ ಕಡೆಯೂ ನಿರ್ಮಾಣ :
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕಚೇರಿಗಳ ಆಧುನೀಕರಣ ಮತ್ತು ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಕಾಮಗಾರಿಯನ್ನು ಗೃಹ ಮಂಡಳಿಗೆ ವಹಿಸಲಾಗಿದೆ. 1.33 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಐಟಿ ಸೆಲ್‌ಗೆ ಮೂಲ ಸೌಕರ್ಯ ಒದಗಿಸಲಾಗಿದೆ.
ಜೆ.ಪಿ.ನಗರ ಕಚೇರಿಗೆ 9 ಗುಂಟೆ ಜಾಗ :
ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯ ವಾಜರಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಸುಬರ್ದಿಯಲ್ಲಿದ್ದ 11 ಗುಂಟೆ ಜಾಗದಲ್ಲಿ 9 ಗುಂಟೆ ಜಮೀನನ್ನು ಜೆ.ಪಿ.ನಗರ ಉಪನೋಂದಣಿ ಕಚೇರಿ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಇತರ ಕಡೆಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸುತಿರುವ ಕಾರ್ಯ ನಡೆಯುತ್ತಿದೆ.
ಷರತ್ತಿನ ಮೇಲೆ ಸ್ವತ್ತು ವರ್ಗಾವಣೆ
-ಜಮೀನು ಕಾಯ್ದಿರಿಸಿರುವ ಉದ್ದೇಶಕ್ಕೆ ಮಾತ್ರ ಬಳಸಬೇಕು
-ಸ್ವತ್ತಿನ ಮಾಲೀಕತ್ವವು ಸರ್ಕಾರದ್ದೆ ಆಗಿರುತ್ತದೆ
-ಒತ್ತುವರಿ ಆಗದಂತೆ ತಂತಿಬೇಲಿ ಹಾಕಿ ಸಂರಕ್ಷಿಸುವ ಜವಾಬ್ದಾರಿ ಪ್ರಾಧಿಕಾರದು
-ಜಮೀನು ನ್ಯಾಯಾಲಯದ ಆದೇಶಗಳಿಗೆ ಒಳಪಟ್ಟು ಮಂಜೂರು
-ಖಾಸಗಿ ಸಂಸ್ಥೆ ಅಥವಾ ಇತರೆ ಇಲಾಖೆಗಳ ಬಳಕೆಗೆ ಹಸ್ತಾಂತರ, ಗುತ್ತಿಗೆ ಬಾಡಿಗೆಗೆ ಇಲ್ಲ