ದೊಡ್ಡಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಪೈಪ್​ಲೈನ್​ ಅಳವಡಿಕೆ ಕಾಮಗಾರಿ ಕಳಪೆಯಾಗಿದೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು. ವರ್ತಕರಾದ ಹನುಮಂತರಾಜು ಟಿ ಕೆ,ಶಿವಕುಮಾರ್​, ಅರುಣ್​, ಕೆಂಪೇಗೌಡ ಇದ್ದರು. 
ರಾಜ್ಯ

ಓವರ್​ಹೆಡ್​ ಟ್ಯಾಂಕ್​ ಪೈಪ್​ಲೈನ್​ ಕಾಮಗಾರಿ ಕಳಪೆ / DODABALLAPUR

ಬೆಂಗಳೂರು ಗ್ರಾಮಾಂತರ ಡೆಸ್ಕ್
ದೊಡ್ಡಬಳ್ಳಾಪುರ : ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಓವರ್​ಹೆಡ್​ ಟ್ಯಾಂಕ್​ ಪೈಪ್​ಲೈನ್​ ಅಳವಡಿಕೆ ಕಾಮಗಾರಿಯು ಕಳಪೆಯಾಗಿದೆ ಎಂದು ಆರೋಪಿಸಿ ಮಾರುಕಟ್ಟೆ ವರ್ತಕರು ಎಪಿಎಂಸಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿದಿನ ಸಾವಿರಾರು ಗ್ರಾಹಕರು, ವರ್ತಕರು ಸೇರಿ ಸಾರ್ವಜನಿಕರು ಬಂದು ಹೋಗುತ್ತಾರೆ, ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಲಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಗೃಹ, ಕುಡಿಯುವ ನೀರು ಸೇರಿ ಮೂಲ ಸೌಕರ್ಯ ನೀಡುವುದು ಎಪಿಎಂಸಿ ಕರ್ತವ್ಯ. ಆದರೆ, ಇಲ್ಲಿನ ಎಪಿಎಂಸಿ ಅಧಿಕಾರಿಗಳಿಗೆ ಕಳಪೆ ಕಾಮಗಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿಯೇ ಇಲ್ಲ ಎಂದು ವರ್ತಕ ಅಶ್ವತ್ಥ್​ರೆಡ್ಡಿ ಆಕ್ರೋಶ ಹೊರಹಾಕಿದರು.
ಮಾರುಕಟ್ಟೆಯಲ್ಲಿನ ಶುದ್ಧನಿರಿನ ಟಕ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಜನರ ಉಪಯೋಗಕ್ಕೆ ಬಂದಿಲ್ಲ. ಕಳಪೆ ಕಾಮಗಾರಿ ವಿರುದ್ಧ ಪ್ರಶ್ನೆ ಮಾಡಿದರೆ ಗುತ್ತಿಗೆದಾರ ವರ್ತಕರಿಗೆ ಬೆದರಿಕೆ ಹಾಕುತ್ತಾನೆ. ವರ್ತಕರಿಗೆ ಯಾವುದೇ ಗೌರವ ಕೊಡದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ, ಅಧಿಕಾರಿಗಳಿಗೆ ಹೇಳ್ತಿಯಾ ಹೇಳಿಕೋ ಹೋಗು ಎಂಬ ಉಡಾಫೆ ಉತ್ತರ ನೀಡುತ್ತಿದ್ದಾನೆ. ಪ್ರಶ್ನೆ ಮಾಡಿದ ವರ್ತಕರ ಮೇಲೆ ಹಲ್ಲೆಗೆ ಮುಂದಾಗಿ ದೌರ್ಜನ್ಯ ಮಾಡುತ್ತಿದ್ದಾರೆ, ಈ ಕಾಮಗಾರಿಯ ಕುರಿತು ಸಂಪೂರ್ಣ ಮಾಹಿತಿಯನ್ನು ವರ್ತಕರಿಗೆ ಒದಗಿಸಬೇಕು, ಇಲ್ಲವೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಅಗ್ರಹಿಸಿದರು.
ಗುಣಮಟ್ಟದ ಕಾಮಗಾರಿ ಮಾಡಿ : ಈ ಕಾಮಗಾರಿಯಲ್ಲಿ ಬಳಸಲಾಗುತ್ತಿರುವ ವಸ್ತುಗಳು ಕಳಪೆಯಾಗಿದ್ದು, ಪ್ರತಿನಿತ್ಯ ಮಾರುಕಟ್ಟೆಯಲ್ಲಿ 40 ಟನ್​ಗಳ ಭಾರ ಹೊಂದಿರುವ ವಾಹನಗಳು ಸಂಚರಿಸುತ್ತವೆ, ರಸ್ತೆಯ ಮೇಲ್ಭಾಗದಲ್ಲಿಯೇ ಪೈಪ್​ಲೈನ್​ ಅಳವಡಿಸಲಾಗಿದೆ, ಒಂದು ಅಡಿ ಮೇಲಕ್ಕೆ ಹಾಕಲಾಗಿದ್ದು, ವಾಹನಗಳ ಓಡಾಟದಿಂದ ಪೈಪ್​ಗಳು ಹಾಳಾಗುತ್ತವೆ, ಜನರ ತೆರಿಗೆ ದುಡ್ಡನ್ನು ವಿನಾ ಕಾರಣ ಪೋಲು ಮಾಡುತ್ತಿದ್ದಾರೆ. ಈ ಕುರಿತು ಎಪಿಎಂಸಿ ಮಾರುಕಟ್ಟೆಯ ಅಧಿಕಾರಿಗಳು ಗಮನ ಹರಿಸಬೇಕು, ಗುಣಮಟ್ಟದ ಕಾಮಗಾರಿ ಮಾಡುವಂತೆ ಕ್ರಮ ತೆಗೆದುಕೊಳ್ಳ ಬೇಕು ಎಂದು ವರ್ತಕ ಅಶ್ವತ್ಥ್​ರೆಡ್ಡಿ ಆಗ್ರಹಿಸಿದರು.