Outrage over the move of the state government and the Kai High Command 
ರಾಜ್ಯ

ರಾಜ್ಯ ಸರ್ಕಾರ, ಕೈ ಹೈಕಮಾಂಡ್​ ನಡೆಗೆ ಆಕ್ರೋಶ

ಆನೇಕಲ್​: 

ಕ್ಷೇತ್ರದ ಶಾಸಕ ಬಿ.ಶಿವಣ್ಣ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದರಿಂದಆಕ್ರೋಶಗೊಂಡ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಆನೇಕಲ್​ ಪಟ್ಟಣ ಮತ್ತು ಚಂದಾಪುರದಲ್ಲಿ ಟೈಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. 

ಚಂದಾಪುರದಲ್ಲಿ ಹೆದ್ದಾರಿ ತಡೆ 

ಚಂದಾಪುರ ವೃತ್ತದಲ್ಲಿ ಮಂಗಳವಾರ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾಂಗ್ರೆಸ್​ ಕಾರ್ಯಕರ್ತರು ರಸ್ತೆ ತಡೆ ಮಾಡಿ ಹೈಕಮಾಂಡ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟೈಯರ್​ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸೋಮವಾರ ರಾತ್ರಿ ಆನೇಕಲ್​ನಲ್ಲಿ ಬೆಂಬಲಿಗರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 
ಗ್ರಾಪಂ ಮಾಜಿ ಅಧ್ಯಕ್ಷ ಸಿಡಿಹೊಸಕೋಟೆ ಮುನಿಕೃಷ್ಣ ಮಾತನಾಡಿ, ಬಿ.ಶಿವಣ್ಣ ತಳಮಟ್ಟದ ನಾಯಕರಾಗಿದ್ದಾರೆ. ಎನ್​ಎಸ್​ಯುಐನಿಂದ ರಾಜಕೀಯ ಪ್ರಾರಂಭಿಸಿದ ಅವರು ಮೂರು ಬಾರಿ ಶಾಸಕರಾಗಿದ್ದಾರೆ. ಎಂಎಸ್ಸಿ, ಎಲ್​ಎಲ್​ಬಿ ಪದವೀಧರರಾಗಿರುವ ಅವರಿಗೆ ಸಚಿವ ಸ್ಥಾನ ನೀಡದಿರುವುದು ಕಾರ್ಯಕರ್ತರ ಉತ್ಸಾಹ ಕುಂದಿಸಿದೆ.ಹಾಗಾಗಿ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಟ್ಟು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. 
ಮುಖಂಡ ಅರೇಹಳ್ಳಿ ಮಧು ಮಾತನಾಡಿ, ಬಿಜೆಪಿ ಭದ್ರಕೋಟೆಯಲ್ಲಿ ಕಾಂಗ್ರೆಸ್​ ಬಾವುಟ ಹಾರಿಸಿದ ನಿಷ್ಠಾವಂತ ಕಾರ್ಯಕರ್ತರಿಗೆ ಹೈಕಮಾಂಡ್​ ಮೋಸ ಮಾಡಿದೆ. ಅರ್ಹತೆಯಿದ್ದರೂ ಸಚಿವ ಸ್ಥಾನ ತಪ್ಪಿಸಿರುವುದು ಖಂಡನಾರ್ಹ.  ಕಾಂಗ್ರೆಸ್​ ಕಾರ್ಯಕರ್ತರ ಪಕ್ಷ ಎಂಬುದನ್ನು ಹೈಕಮಾಂಡ್​ ಸಾಬೀತು ಮಾಡಬೇಕು ಎಂದರು.
ಮುಖಂಡರಾದ ಮುನಾವರ್​, ರಾಜೇಂದ್ರ ಪ್ರಸಾದ್​, ಬೆಸ್ತಮಾನಹಳ್ಳಿ ಯಲ್ಲಪ್ಪ, ಹೆಬ್ಬಗೋಡಿ ಮಂಜುಳಾ, ಬಾಬು, ಜಿ.ವಿ.ರೆಡ್ಡಿ, ಇಂಡ್ಲವಾಡಿ ಮಂಜುನಾಥ್​, ಪುಷ್ಪರಾಜು, ಪ್ರವಿಣ್​, ಮನೋಹರ್​, ಚಿರಂಜೀವಿ, ರಾಜು ಇದ್ದರು.

ಸಿಎಂ ನೆನಪಿಸಿಕೊಳ್ಳಲಿ 

ಚಂದಾಪುರ ಬೈರೇಶ್​ ಮಾತನಾಡಿ, ಮಾಜಿ ಸಂಸದ ಡಿ.ಕೆ.ಸುರೇಶ್​ ಅವರು ಈ ಭಾಗದಲ್ಲಿ ಸಂಸದರಾದಾಗ ಶಾಸಕ ಬಿ.ಶಿವಣ್ಣ ಅವರು ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನು ಮುಖ್ಯಮಂತ್ರಿಯವರು ನೆನಪಿಸಿಕೊಳ್ಳಬೇಕು, ಆನೇಕಲ್​ ತಾಲೂಕನ್ನು ನಿರಂತರವಾಗಿ ಕಡೆಗಣಿಸುವುದು ಕಾಂಗ್ರೆಸ್​ ಪಕ್ಷಕ್ಕೆ ತರವಲ್ಲ, ಮುಂದಿನ ದಿನಗಳಲ್ಲಿ ಆನೇಕಲ್​ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು, ಶಿವಣ್ಣಸಚಿವರಾದರೆ ಮಾತ್ರ ಅದು ಸಾಧ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಹಾಗೂ ರಾಹುಲ್​ ಗಾಂಧಿಯವರು ಎಚ್ಚೆತ್ತುಕೊಳ್ಳಬೇಕು ಎಂದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಯುವ ಮುಖಂಡ ಗೌರೀಶ್​ ಮಾತನಾಡಿ, ಶಿವಣ್ಣ ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್​ಗೆ ದುಡಿದವರು.ಆ ಮೂಲಕ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಿಜೆಪಿ ಭದ್ರಕೋಟೆ ಆಗಿದ್ದ ಆನೇಕಲ್​ ತಾಲೂಕಿನಲ್ಲಿ  ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರವನ್ನು ಕಾಂಗ್ರೆಸ್​ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಡಿಕೆ ಶಿವಕುಮಾರ್​ ಮುಖ್ಯಮಂತ್ರಿ ಆಗಬೇಕು ಎಂದು ಮೊದಲು ಧ್ವನಿಯೆತ್ತಿದ ದಲಿತ ಶಾಸಕ ಶಿವಣ್ಣ. ಆದರೆ, ಅಂತಹ ವ್ಯಕ್ತಿಗೆ ಇಂದು ನ್ಯಾಯ ಒದಗಿಸಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವೊಲಿಕೆ ವಿಫಲ 

ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವ ಯತ್ನ ಮಾಡಿದರಾದರೂ ಲಕಾರಿಯಾಗಿಲ್ಲ. ಪೊಲೀಸರು ತಡೆಯಲು ಮುಂದಾದರೂ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆಯಲಿಲ್ಲ. ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಹೊತ್ತು ರಸ್ತೆ ತಡೆಮಾಡಿದ್ದರಿಂದಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗಿತ್ತು. ಪ್ರತಿಭಟನೆಯಲ್ಲಿ ಮುನಿತಿಮ್ಮಾರೆಡ್ಡಿ, ರಾಮಸ್ವಾಮಿ, ಕುಮಾರ್​,ಮಂಜುಳಾ, ಶ್ರೀಧರ್​, ಬೈರೇಶ್​,ಅಭಿಷೇಕ್​,ಮಧುಸೂದನ್​, ಜಯರಾಂ ಸರ್ಜಾ,ಆನಂದ್​ ರೆಡ್ಡಿ, ಶಿವಶಂಕರ್​, ಗಣೇಶ್​, ಮೂರ್ತಿ, ಹರೀಶ್​, ಸತೀಶ್​, ಚೇತನ್​ ಮತ್ತಿತರರು ಇದ್ದರು.

ಬಿ.ಶಿವಣ್ಣ ಅವರಿಗೆ  ಸಿಎಂ ಡಿ.ಕೆ. ಶಿವಕುಮಾರ್​ ಸಚಿವ ಸ್ಥಾನ ನೀಡಬೇಕು, ಸಿದ್ದರಾಮಯ್ಯನವರು ಇದಕ್ಕೆ ಧ್ವನಿಯಾಗಬೇಕು. ಇಲ್ಲದಿದ್ದರೆ  ಮುಂದಿನ ದಿನಗಳಲ್ಲಿ ಆನೇಕಲ್​ ತಾಲೂಕಿನಲ್ಲಿ ದಲಿತರ ಶಕ್ತಿ ಏನು? ಕಾಂಗ್ರೆಸ್​ಗೆ ಎಷ್ಟರಮಟ್ಟಿಗೆ ನಷ್ಟ ಆಗಲಿದೆ ಎಂಬುದನ್ನುಊಹಿಸಲೂ ಅಸಾಧ್ಯ ಎಂದು ಎಚ್ಚರಿಸಿದರು.