ಬೆಟ್ಟದಪುರದ ಗ್ಯಾಸ್ ಏಜೆನ್ಸಿ ಕಚೇರಿ ಎದುರು ಗ್ರಾಹಕರು ಪ್ರತಿಭಟನೆ ನಡೆಸಿದರು.
- ಗೃಹಬಳಕೆಯ ಅಡುಗೆ ಅನಿಲ ವಿತರಣೆಯಲ್ಲಿ ವಿಳಂಬ
- ಒಟಿಪಿ ಪಡೆದು ಸಿಲಿಂಡರ್ ಪೂರೈಕೆ ಮಾಡುತ್ತಿಲ್ಲ
ಬೆಟ್ಟದಪುರ: ಗೃಹಬಳಕೆಯ ಅಡುಗೆ ಅನಿಲ ವಿತರಣೆಯಲ್ಲಿ ವಿಳಂಬವಾಗುತ್ತಿರುವುದರ ಜತೆಗೆ ಒಟಿಪಿ ಪಡೆದು ಸಿಲಿಂಡರ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಗ್ರಾಹಕರು ಬುಧವಾರ ಇಲ್ಲಿನ ಗ್ಯಾಸ್‌ಏಜೆನ್ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಿಲಿಂಡರ್ ಬುಕ್ಕಿಂಗ್ ಮಾಡಿದ ಬಳಿಕ ಏಜೆನ್ಸಿ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸಿ ಒಟಿಪಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಒಟಿಪಿ ನೀಡಿದ ನಂತರವೂ ಹಲವು ದಿನಗಳಾದರೂ ಸಿಲಿಂಡರ್ ಮನೆಗಳಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಹಕ ಮಂಜುನಾಥ್ ಮಾತನಾಡಿ, ಸಿಲಿಂಡರ್ ಬುಕ್ ಮಾಡಿದ ತಕ್ಷಣವೇ ಏಜೆನ್ಸಿಯಿಂದ ಕರೆ ಮಾಡಿ ಒಟಿಪಿ ಕೇಳುತ್ತಾರೆ. ಒಟಿಪಿ ನೀಡಿದ ಬಳಿಕ ಹತ್ತು ದಿನಗಳಾದರೂ ಸಿಲಿಂಡರ್ ಬಂದಿಲ್ಲ. ಸಮಸ್ಯೆ ಕುರಿತು ವಿಚಾರಿಸಲು ಬಂದರೆ ಕಚೇರಿ ಮುಚ್ಚಿರುತ್ತದೆ. ದೂರವಾಣಿ ಕರೆ ಮಾಡಿದರೆ ನಾಳೆ, ನಾಡಿದ್ದು ಬರುತ್ತದೆ ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏಜೆನ್ಸಿ ಕಚೇರಿಗೆ ಬೀಗ ಹಾಕಲಾಗಿದ್ದರಿಂದ ಸಿಲಿಂಡರ್‌ಗಾಗಿ ಕಾದು ಕುಳಿತಿದ್ದ 40ಕ್ಕೂ ಹೆಚ್ಚು ಗ್ರಾಹಕರಿಗೆ ಸಂಜೆ ಸುಮಾರು 4 ಗಂಟೆ ವೇಳೆಗೆ ಸಿಬ್ಬಂದಿ ಗ್ರಾಹಕರ ರಸೀದಿಗಳಿಗೆ ಅಧಿಕೃತ ಸೀಲ್ ಹಾಕಿ, ಶುಕ್ರವಾರ ಸಿಲಿಂಡರ್ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದನ್ನು ಒಪ್ಪಿಕೊಂಡ ಗ್ರಾಹಕರು ಮನೆಗೆ ಮರಳಿದರು.