ತಿ.ನರಸೀಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಕರೋಹಟ್ಟಿ ಕುಮಾರಸ್ವಾಮಿ, ಬೂದಹಳ್ಳಿ ಶಂಕರ್, ಮಹದೇವಸ್ವಾಮಿ, ಚಂದ್ರಶೇಖರ್, ಈ.ರಾಜು, ಶಾಂತಮೂರ್ತಿ, ರವಿಕುಮಾರ್ ಇತರರು ಇದ್ದರು.
- ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಖಂಡಿಸಿ
- ರಾಷ್ಟ್ರೀಯ ಹೆದ್ದಾರಿ 766
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಖಂಡಿಸಿ ಹಾಗೂ ನೀರು ಹರಿಸದಂತೆ ಆಗ್ರಹಿಸಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘಟನೆಯ ತಾಲೂಕು ಘಟಕದ ಪದಾಧಿಕಾರಿಗಳು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಹಳೇತಿರುಮಕೂಡಲು ಬಳಿಯಿರುವ ಮೈಸೂರು ಮುಖ್ಯ ರಸ್ತೆಯಲ್ಲಿ ಜಮಾವಣೆಗೊಂಡ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ದಿಕ್ಕಾರ ಘೋಷಣೆ ಕೂಗುತ್ತ ರಸ್ತೆ ಸಂಚಾರ ತಡೆ ಪ್ರತಿಭಟನೆ ಪ್ರಾರಂಭಿಸಿದರು.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಈ ವಿಚಾರದಲ್ಲಿ ಪ್ರಾಧಿಕಾರದ ಪಕ್ಷಪಾತ ಧೋರಣೆ ಹಾಗೂ ರಾಜ್ಯದ ರಾಜಕಾರಣಿಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಪ್ರಮುಖ ಕಾರಣ ಎಂದು ಮುಖಂಡರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ ಮಾತನಾಡಿ, ಕರ್ನಾಟಕವನ್ನು ಪ್ರತಿನಿಧಿಸುವ 28 ಲೋಕಸಭಾ ಸದಸ್ಯರು ಹಾಗೂ 224 ವಿಧಾನಸಭಾ ಸದಸ್ಯರು ರಾಜ್ಯದ ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಕಾವೇರಿ ಹಾಗೂ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ಪರವಾಗಿ ಧ್ವನಿ ಎತ್ತದೆ, ರಾಜಕಾರಣಿಗಳು ಸ್ವಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತಿದ್ದಾರೆ. ಇದರಿಂದ ಕಾವೇರಿ ನೀರಿನ ಹಂಚಿಕೆಯಲ್ಲಿ ರಾಜ್ಯದ ರೈತರಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ಬರಗಾಲದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ರೈತರ ಪರವಾಗಿ ದೃಢವಾಗಿ ನಿಲ್ಲಬೇಕು. ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯಿಂದ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಕಾವೇರಿ ನೀರಿನ ನಿರ್ವಹಣಾ ಪ್ರಾಧಿಕಾರ ಹಾಗೂ ನ್ಯಾಯಾಧಿಕರಣದ ಮುಂದೆ ಸಮರ್ಪಕವಾಗಿ ಮಂಡಿಸಿ ರಾಜ್ಯದ ಹಕ್ಕನ್ನು ರಕ್ಷಿಸಬೇಕು. ಯಾವುದೇ ಕಾರಣಕ್ಕೂ ಕರ್ನಾಟಕದ ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬೂದಹಳ್ಳಿ ಶಂಕರ್ ಮಾತನಾಡಿ, ರಾಜ್ಯದ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು. ಅಲ್ಲದೆ, ಪ್ರತಿ ಎಕರೆಗೆ 50,000 ರೂ.ಬರ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕೆಲಕಾಲ ಸಂಪೂರ್ಣ ಅಸ್ತವ್ಯಸ್ತಗೊಂಡು, ಎರಡೂ ದಿಕ್ಕುಗಳಲ್ಲಿ ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ನಂಜನಗೂಡು ರಸ್ತೆಯಲ್ಲಿರುವ ಕಾವೇರಿ ನೀರಾವರಿ ನಿಗಮದ ಕಬಿನಿ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಕೆಲ ಕಾಲ ಧರಣಿ ಕುಳಿತು ಬಳಿಕ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಜ್ಜಲೂರು ಚಂದ್ರಶೇಖರ್, ಜಿಲ್ಲಾ ಮುಖಂಡ ಈ.ರಾಜು, ಸಂಘಟನಾ ಕಾರ್ಯದರ್ಶಿ ಶಾಂತಮೂರ್ತಿ, ಗೌರವ ಅಧ್ಯಕ್ಷ ಹಲವಾರ ಮಹದೇವಸ್ವಾಮಿ, ಉಪಾಧ್ಯಕ್ಷ ತಲಕಾಡು ದಿನೇಶ್, ಮುಖಂಡರಾದ ತಲಕಾಡು ನಟರಾಜು, ಮಾಳಿಗಯ್ಯ, ಕೊತ್ತೇಗಾಲ ಮಹೇಶ್ ಕುಮಾರ್, ಎಚ್.ಎಂ.ರವಿಕುಮಾರ್, ರಮೇಶ್, ಕಳ್ಳಿಪುರ ನಾರಾಯಣ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.