ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಇತಿಹಾಸ, ವಾರ್ಡ್‌ಗಳು ಎದುರಿಸುತ್ತಿರುವ ಸಮಸ್ಯೆ, ರಾಜಕೀಯ ಪ್ರತಿನಿಧಿಗಳು ಹಾಗೂ ವಾರ್ಡ್ ಉಸ್ತುವಾರಿ ಅಧಿಕಾರಿಗಳ ಹೆಸರು ವಿವರ ಸೇರಿ ಇತರ ಮಾಹಿತಿಯನ್ನು ಸಾರ್ವಜನಿಕರಿಗೆ ಒಂದೇ ಸೂರಿನಡಿ ಒದಗಿಸುವ ಸಲುವಾಗಿ ‘ನಮ್ಮ ವಾರ್ಡ್’ (www.nammaward.in) ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ವೆಬ್‌ಸೈಟ್‌ನಲ್ಲಿ ವಾರ್ಡ್‌ಗಳ ಸಮಗ್ರ ಮಾಹಿತಿ ರಾಜಧಾನಿ ಜನರಿಗೆ ದೊರೆಯಲಿದೆ.
‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ’ದಲ್ಲಿ ನಮ್ಮ ವಾರ್ಡ್ ಉಪಕ್ರಮವನ್ನು ಪ್ರಯೋಗಿಕವಾಗಿ ಅನಾವರಣ ಮಾಡಲಾಯಿತು. ಮುಂದಿನ ಹಂತದಲ್ಲಿ ಬಳಕೆದಾರರ ಅನುಕೂಲವಾಗಿ ಮೊಬೈಲ್ ಅಪ್ಲಿಕೇಶನ್ ವಿನ್ಯಾಸಗೊಳಿಸಲಾಗುತ್ತಿದೆ. ನಮ್ಮ ವಾರ್ಡ್ ಉಪಕ್ರಮವು ವಾಣಿಜ್ಯೇತರ, ತಂತ್ರಜ್ಞಾನ ಆಧಾರಿತ ನಾಗರಿಕ ವೇದಿಕೆಯಾಗಿದೆ. ನಾಗರಿಕರ ಭಾಗವಹಿಸುವಿಕೆ, ಸ್ಥಳೀಯ ಆಡಳಿತ ಬಲಪಡಿಸುವುದು, ವಾರ್ಡ್ ಮಟ್ಟದ ಮಾಹಿತಿ ರಚಿಸುವ ಗುರಿ ಹೊಂದಿದೆ.
ಈ ಉಪಕ್ರಮವು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ವಾರ್ಡ್ ಮಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಸೇರಿ ಬೆಂಗಳೂರಿನ ಎಲ್ಲ 369 ವಾರ್ಡ್‌ಗಳಲ್ಲಿ ಆಗು-ಹೋಗುಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ದೊರೆಯಲಿದೆ.
ನಮ್ಮ ವಾರ್ಡ್ ಮಾರ್ಗದರ್ಶನ ಮತ್ತು ಹಿರಿಯ ವಕೀಲ ಪ್ರಶಾಂತ್ ಮಿರ್ಲೆ ಮಾತನಾಡಿ, ಸ್ಥಳೀಯ ಅಭಿವೃದ್ಧಿ, ಆಡಳಿತದ ಬಗ್ಗೆ ಮಾಹಿತಿ ಪಡೆಯಲು ನಾಗರಿಕರಿಗೆ ಅನುಕೂಲವಾಗಲಿದೆ. ಸ್ಥಳೀಯ ಮಾಹಿತಿ ಕುರಿತು ತಿಳಿದುಕೊಳ್ಳುವುದು, ಸುತ್ತಮುತ್ತಲಿನ ಪ್ರದೇಶಗಳ ಬಗ್ಗೆ ಅರ್ಥಮಾಡಿಕೊಳ್ಳಲು ಮತು ಅದರಲ್ಲಿ ತೊಡಗಿಸಿಕೊಳ್ಳಲು ನಾಗರಿಕರಿಗೆ ಅವಕಾಶ ನೀಡಲಾಗುತ್ತಿದೆ. ನಾಗರಿಕರು ಭಾಗವಹಿಸುವಿಕೆಯನ್ನು ಪ್ರಮುಖ ಉದ್ದೇಶ ಇಟ್ಟುಕೊಂಡು ವಾರ್ಡ್‌ನ ಕುರಿತು ಡಿಜಿಟಲ್ ಮಾಹಿತಿ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು.