D.K. Shivakumar | ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ನನ್ನ ಮತ್ತು ಸಿಎಂ ಸಿದ್ದರಾಮಯ್ಯ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ, ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದು. ರಾಜ್ಯದ ಜನ ನಮ್ಮ ಮೇಲೆ ತುಂಬಾ ನಿರೀಕ್ಷೆ ಹೊಂದಿದ್ದಾರೆ, ಅದಕ್ಕೆ ತಕ್ಕಂತೆ ಕೆಲಸ ಮಾಡಿ ಮುಂಬರುವ ಚುನಾವಣೆ ಗೆಲ್ಲವುದೇ ನಮ್ಮ ಮುಂದಿನ ಗುರಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ನನಗೆ ಯಾವತ್ತೂ ಗುಂಪುಗಾರಿಕೆ ಮಾಡಿ ಗೊತ್ತಿಲ್ಲ, ನಾನು ದೆಹಲಿಗೆ ಹೋದರೆ ಒಬ್ಬನೇ ಹೋಗುತ್ತೇನೆ. ಮನಸ್ಸು ಮಾಡಿದ್ದರೆ 8 ರಿಂದ 10 ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದಿತ್ತು, ಅದು ದೊಡ್ಡ ವಿಚಾರವಲ್ಲ. ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುವಾಗ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ, 140 ಶಾಸಕರೂ ನಮ್ಮ ನಾಯಕರೇ. ಯಾರಿಗೂ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ನಾನು ಈ ಹಿಂದೆ ಕುಮಾರಸ್ವಾಮಿ ಜತೆಯಲ್ಲೂ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇದನ್ನು ಅವರು ಒಪ್ಪದೇ ಇರಬಹುದು, ನನ್ನ ನಿಷ್ಠೆ, ಆತ್ಮಸಾಕ್ಷಿ ಏನೆಂದು ಆ ದೇವರಿಗೆ ಗೊತ್ತಿದೆ. ಈ ಹಿಂದೆ ಹೆಚ್ಡಿಕೆ ನೇತೃತ್ವದ ಮೈತ್ರಿ ಸರ್ಕಾರ ಉಳಿಸಲು ಕೊನೆ ದಿನದವರೆಗೂ ಎಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಅವರ ತಂದೆ ದೇವೆಗೌಡರಿಗು ಗೊತ್ತಿದೆ. ಈಗ ಅವರು ತಮ್ಮ ಆಸೆಗೆ ಏನಾದರೂ ಮಾತಾಡಿಕೊಳ್ಳಲಿ, ಬೇಸರ ಮಾಡಿಕೊಳ್ಳಲ್ಲ. ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವನು ಎಂದು ಹೇಳಿದರು. ಕೆ ಸಿ ವೇಣುಗೋಪಾಲ್ ಜೊತೆಗಿನ ಚರ್ಚೆಯ ಕುರಿತಾದ ಪ್ರಶ್ನೆಗೆ ನಾನು ಎಲ್ಲರ ಜೊತೆ ಚರ್ಚೆ ಮಾಡಿದ್ದು, ಏನು ಮಾತುಕತೆ ನಡೆಸಿದ್ದೇವೆ ಎನ್ನುವುದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬದುಕಿದ್ದೇವೆ ಎಂದು ತೋರಿಸಲು ಬಿಜೆಪಿ ಪ್ರಯತ್ನ..
ಡಿ ಕೆ ಶಿವಕುಮಾರ್ ಸೂಪರ್ ಸಿಎಂ ಆಗುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಟೀಕೆಗೆ ಉತ್ತರಿಸಿದ ಉಪಮುಖ್ಯಮಂತ್ರಿಗಳು, ಬಿಜೆಪಿ ವಿರೋಧ ಪಕ್ಷವಾಗಿ ಏನಾದರೂ ಮಾತನಾಡಬೇಕಲ್ಲ, ಬದುಕಿದ್ದೇವೆ ಎಂದು ತೋರಿಸಲು ಮಾತನಾಡುತ್ತಾರೆ. ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಆಗುತ್ತದೆಯೇ ಎಂದು ತಿರುಗೇಟು ನೀಡಿದರು.
ಸರ್ವಪಕ್ಷ ಸಭೆ ಬಗ್ಗೆ ಸಿಎಂ ಜೊತೆ ಚರ್ಚೆ
ಕೇಂದ್ರ ಸಚಿವರು, ಸಂಸದರ ಭೇಟಿ ಹೊರತಾಗಿ ಪಕ್ಷ ಹಾಗೂ ರಾಜಕೀಯ ಉದ್ದೇಶದಿಂದ ದೆಹಲಿ ಪ್ರಯಾಣ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಾನು ಮತ್ತು ಸಿಎಂ ಈಗ ಚರ್ಚೆ ಮಾಡಿದ್ದು, ಮುಂದೆಯೂ ಮಾತನಾಡುತ್ತೇವೆ. ನೀರಾವರಿ, ಮೆಕ್ಕೆಜೋಳ ಹಾಗೂ ಕಬ್ಬು ಬೆಳೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವ ಬಗ್ಗೆ ಸಂಸದರ ಜೊತೆ ಚರ್ಚೆ ಮಾಡಬೇಕು. ಸರ್ವಪಕ್ಷ ಸಭೆ ಕರೆಯಬೇಕಿದ್ದು, ಈ ಸಭೆಯಲ್ಲಿ ಎಲ್ಲಾ ಸಂಸದರು ಭಾಗವಹಿಸಬೇಕು. ಹೀಗಾಗಿ ಈ ಸಭೆಯನ್ನು ದೆಹಲಿಯಲ್ಲಿ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಿಎಂ ಏನು ಹೇಳುತ್ತಾರೆ ಕೇಳುತ್ತೇನೆ. ನಾನೊಬ್ಬನೇ ಹೋಗಿ ಎಲ್ಲರ ಸಭೆ ಮಾಡುವುದು ಸರಿಯಲ್ಲ. ಈ ಸಭೆಯಲ್ಲಿ ರಾಜ್ಯದ ಇತರ ಸಚಿವರೂ ಇರಬೇಕು ಎಂದರು.
ಅಪ್ಪ, ಮಗನ ಭೇಟಿಗೆ ಅರ್ಜಿ ಹಾಕಬೇಕೆ...?
ದೆಹಲಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆ ಭೇಟಿಯ ಬಗ್ಗೆ ಕೂಡ ಮಾತನಾಡಿದ್ದು, ಅಪ್ಪ ಮಗನ ಭೇಟಿಗೂ ನೀವು ಅರ್ಥ ಕಲ್ಪಿಸುತ್ತೀರಾ? ಅಪ್ಪ, ಮಕ್ಕಳ ಭೇಟಿಗೂ ಅರ್ಜಿ ಹಾಕಿಕೊಳ್ಳಬೇಕಾ ಎಂದು ಪ್ರಶ್ನಿಸಿದರು. ಪ್ರಿಯಾಂಕ್ ಖರ್ಗೆ ಅವರು ಎಐ ತಂತ್ರಜ್ಞಾನದ ಅತ್ಯುತ್ತಮ ಸಾಧನ ಪರಿಚಯಿಸಿದ್ದಾರೆ. ಇದರ ಉದ್ಘಾಟನೆಗೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದೆವು, ಅವರು ಬರಲು ಆಗಿರಲಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರು ಅದರ ಬಗ್ಗೆ ಮಾಹಿತಿ ಪಡೆಯಲು ಕರೆದಿದ್ದರು. ಹೀಗಾಗಿ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಅವರನ್ನು ಕರೆಸಿ ಅವರಿಂದ ಮಾಹಿತಿ ಪಡೆದಿದ್ದಾರೆ. ಇಲ್ಲೂ ರಾಜಕೀಯ ಮಾತನಾಡಿದ್ದಾರೆ ಎಂದು ಹೇಳಲು ಸಾಧ್ಯವೇ? ಅಪ್ಪ ಮಕ್ಕಳು, ಅಣ್ಣ ತಮ್ಮ ಸೇರಿದಾಗ ರಾಜಕೀಯವೇ? ಬೇರೆಯವರು ಸೇರಿದಾಗ ನಿಮಗೆ ಲೆಕ್ಕಕ್ಕೆ ಇರುವುದಿಲ್ಲ. ನಮ್ಮದು ಮಾತ್ರ ಲೆಕ್ಕ ಹಾಕುತ್ತೀರಿ" ಎಂದು ಹೇಳಿದರು.
ಮನಶಾಂತಿಗೆ ದೇವಾಲಯ ಭೇಟಿ, ಪೂಜೆ..
ನಾವು ಬದುಕಿನಲ್ಲಿ ನಮ್ಮದೇ ಆದ ಆಚರಣೆಗೆ ತೊಡಗಿಸಿಕೊಂಡಿರುತ್ತೇವೆ, ಮನಶಾಂತಿಗಾಗಿ ನಮ್ಮ ಕೆಲಸ ಮಾಡುತ್ತೇವೆ. ದೇವಾಲಯ, ಮಸೀದಿ, ಚರ್ಚ್, ಜೈನ ಬಸದಿಗೆ ಹೋಗಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇದನ್ನು ಟೆಂಪಲ್ ರನ್ ಎನ್ನುವ ಅಗತ್ಯವೇನು.? ಎಂದು ಪ್ರಶ್ನಿಸಿದ ಉಪಮುಖ್ಯಮಂತ್ರಿಗಳು, ನಮ್ಮ ಹಿರಿಯರ ಮಾರ್ಗದರ್ಶನದಂತೆ ನಿತ್ಯ ಬೆಳಗ್ಗೆ ಪೂಜೆ ಮಾಡದೇ ಮನೆಯಿಂದ ಆಚೆ ಬರುವುದಿಲ್ಲ. ಸರ್ಕಾರ ದೇವಾಲಯ ಮುಚ್ಚಲು ಸಾಧ್ಯವೇ? ಗ್ರಾಮೀಣ ಭಾಗದ ದೇವಾಲಯ ಅಭಿವೃದ್ಧಿಗೆ ಬಂಗಾರಪ್ಪನವರ ಕಾಲದಲ್ಲಿ ಆರಾಧನಾ ಯೋಜನೆ ಜಾರಿಗೆ ತಂದಿದ್ದಾಗಿ ತಿಳಿಸಿದರು.