ಹೊಸಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎಸ್ಸಿಪಿ, ಟಿಎಸ್ಪಿ ಹಾಗೂ ಮುಖ್ಯಮಂತ್ರಿಯವರ ವಿಶೇಷ ಅನುದಾನದ 1.6 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು. ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್, ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಉದ್ಯಮಿ ಎಂ.ಮಂದೀಪ್ಗೌಡ, ಎಸ್ಎಫ್ಸಿಎಸ್ ಅಧ್ಯಕ್ಷ ಹೊಸಹಳ್ಳಿ ನಾರಾಯಣಗೌಡ ಇತರರು ಇದ್ದರು.
ನಂದಗುಡಿ : ಮುಂದಿನ 2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಎಲ್ಲ ಶಾಸಕರು ಚರ್ಚೆ ನಡೆಸಿದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಈ.ಹೊಸಹಳ್ಳಿ, ಇಟ್ಟಸಂದ್ರ, ಹಳೇಊರು, ನಂದಗುಡಿ, ಎಸ್.ವಡ್ಡಹಳ್ಳಿ, ಎನ್. ಹೊಸಹಳ್ಳಿ ಗ್ರಾಮಗಳಲ್ಲಿ ಎಸ್ಸಿಪಿ, ಟಿಎಸ್ಪಿ ಹಾಗೂ ಮುಖ್ಯಮಂತ್ರಿಯವರ ವಿಶೇಷ ಅನುದಾನದ 1.6 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿಯ ಪರ್ವ ಇನ್ನೂ ಮುಂದುವರೆದುಕೊಂಡು ಹೋಗಬೇಕು. ಕಾಂಗ್ರೆಸ್ ಅಧಿಕಾರವಧಿಯಲ್ಲಿ ವೈಯಕ್ತಿಕವಾಗಿ ಜನರು ಅಭಿವೃದ್ಧಿಯಾಗುತ್ತಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಸೃಜನೆ ಮಾಡಿ ಅದನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಭಿವೃದ್ಧಿ ಮಾಡುತ್ತಿದ್ದು,2028ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳು ನೆರವಾಗಲಿವೆ ಎಂದರು.
ಆ ನಿಟ್ಟಿನಲ್ಲಿ ನಾವೆಲ್ಲ ಶಾಸಕರು ಮಾಗಡಿ ಶಾಸಕ ಬಾಲಕೃಷ್ಣ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭ ಕೋರಲು ಶಾಸಕರೆಲ್ಲರೂ ಒಂದೆಡೆ ಸೇರಿ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸುವ ಸಲುವಾಗಿ ಚರ್ಚೆ ನಡೆಸಿದ್ದೇವೆ ಎಂದ ಅವರು, ರಾಜಕಾರಣಿಗಳು ಒಂದೆಡೆ ಸೇರಿದಾಗ ತತ್ವ ಸಿದ್ಧಾಂತಗಳನ್ನು ಮಾತನಾಡಲಾಗುತ್ತದೆಯೇ, ರಾಜ್ಯ ರಾಜಕೀಯದ ಬಗ್ಗೆ ಮಾತಾಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಎಚ್.ಎನ್.ಧಮೇರ್ಶ್, ಎಚ್.ಕೆ.ನಾರಾಯಣಗೌಡ, ಚಂದ್ರಪ್ಪ, ಎಂ.ನಾಗೇಶ್, ನಡುವಿನಪುರ ಶ್ರೀನಿವಾಸ್, ಭೂನ್ಯಾಯ ಮಂಡಳಿ ಸದಸ್ಯ ವೀರರಾಜು, ಈ.ಹೊಸಹಳ್ಳಿ ಜಯರಾಮಯ್ಯ, ಮಂಜುನಾಥಗೌಡ, ಈಸ್ತೂರು ಮುರಳೀಧರ್, ಇಟ್ಟಸಂದ್ರ ಎಂ.ರಮೇಶ್, ರಾಮಾಂಜಿನಪ್ಪ, ರೂಪಚನ್ನಕೇಶವ, ಬಿಂದುದೇವೇಗೌಡ, ಕೆ.ರಮೇಶ್, ಶಂಕರ್ನಾರಾಯಣ್, ಒಬಳಹಳ್ಳಿ ರಾಜಪ್ಪ, ಕಮಲಶಿವು, ವಡ್ಡಹಳ್ಳಿ ವೆಂಕಟೇಗೌಡ, ಎನ್.ಎನ್.ಮಂಜುನಾಥ್, ಪಾಷಾಖಾನ್, ಅಯೂಬ್ಬೇಗ್, ಪಿಡಿಒ ಪುಷ್ಪಲತಾ, ಗುತ್ತಿಗೆದಾರ ರಾಜೀವ್ ಹಾಗೂ ಗ್ರಾಮಸ್ಥರು ಇದ್ದರು.