ಮುಧೋಳ ತಾಲೂಕಿನ ಉತ್ತೂರ ಗ್ರಾಮದಲ್ಲಿ ಗ್ರಾಮದೇವತೆ ಭಂಡಾರ ಜಾತ್ರೆ ನಿಮಿತ್ತ ಸೈನಿಕ ವಿವಿಧೋದ್ಧೇಶಗಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಜಾತ್ರಾ ಕಮಿಟಿ ಹಮ್ಮಿಕೊಂಡಿದ್ದ ರೈತಗೋಷ್ಠಿಯಲ್ಲಿ ಶಶಿಕಾಂತ ಗುರೂಜಿ ಅವರನ್ನು ಸನ್ಮಾನಿಸಲಾಯಿತು. ಧರೆಪ್ಪ ಗಾಣಗಿ, ಮಂಜುನಾಥ ಘಾಟಗೆ, ಅಜೀತಗೌಡ ಪಾಟೀಲ ಇದ್ದರು. 
ರಾಜ್ಯ

ಸಂಘಟನೆಯಿಂದ ವ್ಯವಸ್ಥೆ ಬದಲಾವಣೆ ಸಾಧ್ಯ

ಬಸವರಾಜ ಭೂಷಣ್ಣವರ

ಪ್ರಮುಖ ಮುಖ್ಯಾಂಶಗಳು

  • ಶಶಿಕಾಂತ ಗುರೂಜಿ ಹೇಳಿಕೆ
  • ರೈತಗೋಷ್ಠಿ ಆಯೋಜನೆ
ಮುಧೋಳ: ರೈತ ಕೇವಲ ಅನ್ನದಾತನಲ್ಲ, ಈ ಜಗತ್ತಿನ ನಿಜವಾದ ಮಾಲೀಕ. ರೈತರು ಸಂಘಟಿತರಾದರೆ ಮಾತ್ರ ಸರ್ಕಾರದ ವ್ಯವಸ್ಥೆ ಎಚ್ಚರಿಸಲು ಮತ್ತು ಬದಲಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ಹೇಳಿದರು.
ತಾಲೂಕಿನ ಉತ್ತೂರ ಗ್ರಾಮದಲ್ಲಿ ಗ್ರಾಮದೇವತೆ ಭಂಡಾರ ಜಾತ್ರೆ, ಬಸವೇಶ್ವರ ಮಹಾರಥೋತ್ಸವ ಹಾಗೂ ಮಾರುತೇಶ್ವರ ಓಕುಳಿ ನಿಮಿತ್ತ ಬುಧವಾರ ಸೈನಿಕ ವಿವಿಧೋದ್ಧೇಶಗಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಜಾತ್ರಾ ಕಮಿಟಿ ಹಮ್ಮಿಕೊಂಡಿದ್ದ ರೈತಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೈತ ನಾಯಕ ರಮೇಶ ಗಡದಣ್ಣವರ ಅವರ ಹೋರಾಟದ ಗುಣಗಳನ್ನು ಸ್ಮರಿಸಿದ ಅವರು ರಮೇಶ ಗಡದಣ್ಣವರ ಹಾಗೂ ನಂಜುಂಡಸ್ವಾಮಿ ಅಂತಹ ನಾಯಕರ ಶಕ್ತಿಯಿಂದಲೇ ಇಂದು ರೈತ ಸಂಘಟನೆ ಗಟ್ಟಿಯಾಗಿ ನಿಂತಿದೆ. ಗಡದಣ್ಣವರ ಹೆಸರು ಅಜರಾಮರವಾಗಿದೆ. ಅವರು ಕೇವಲ ಒಂದು ಜಾತಿ, ಊರಿಗಾಗಿ ಬದುಕದೆ ಇಡೀ ಸಮಾಜಕ್ಕಾಗಿ ಬದುಕಿದವರು ಎಂದು ಶ್ಲಾಸಿದರು.
ಸಮಾಜದಲ್ಲಿ ಸೈನಿಕ ಮತ್ತು ರೈತರ ಪಾತ್ರ ಅಪಾರ. ಕೃಷಿ ಕ್ಷೇತ್ರದಲ್ಲಿನ ಬದಲಾವಣೆಗಳ ಕುರಿತು ಕಳವಳ ವ್ಯಕ್ತಪಡಿಸಿ ರೈತರು ಸ್ವಾವಲಂಬಿಯಾಗಿ ಬದುಕಬೇಕು. ಇಂದಿನ ಯುವಜನತೆ ಮೊಬೈಲ್ ಮತ್ತು ಟಿವಿ ಬದಿಗಿಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು ತಿಳಿಸಿದರು.
ಶಾಂತಯ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸೈನಿಕ ವಿವಿಧೋದ್ದೇಶಗಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಧರೆಪ್ಪ ಗಾಣಗಿ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಘಾಟಗೆ, ಅಜೀತಗೌಡ ಪಾಟೀಲ, ರಾಮಪ್ಪ ದೇಸಾಯಿ, ಮನೋಜಪ್ಪ ಘಾಟಗೆ, ಮಂಜುನಾಥ ಸೂರ್ಯವಂಶಿ ಹಾಗೂ ಆನಂದ ಬಂಡಿವಡ್ಡರ, ವೆಂಕಟೇಶ ಬಂಡಿವಡ್ಡರ, ರೈತ ಮುಖಂಡರು, ಯುವಕರು ಇತರರಿದ್ದರು. ಗೋಪಾಲ ಮಳಲಿ ಸ್ವಾಗತಿಸಿದರು. ಮಹಾಲಿಂಗ ತೇಲಿ ನಿರೂಪಿಸಿ, ವಂದಿಸಿದರು.