ಕೃಷಿ ತಂದ ಲಾಭ 
ರಾಜ್ಯ

ಸಾವಯವ ಬೇಸಾಯ, ಲಕ್ಷಾಂತರ ರೂ. ಆದಾಯ

| ವಿರೂಪಾಕ್ಷಯ್ಯ ಗುದ್ನಯ್ಯನವರಮಠ, ಹುಬ್ಬಳ್ಳಿ

ಸಾವಯವ ಮತ್ತು ಸಮಗ್ರ ಕೃಷಿ ಪರಿಕಲ್ಪನೆ ಹೆಚ್ಚು ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ರಾಸಾಯನಿಕಮುಕ್ತ ಕೃಷಿಯೆಡೆಗೆ ಹೊರಳುತ್ತಿರುವವರು ಬೇಸಾಯವನ್ನು ಲಾಭದಾಯಕವಾಗಿಸಿಕೊಳ್ಳುತ್ತಿದ್ದಾರೆ. ಇದೇ ಹಾದಿಯಲ್ಲಿ ಸಾಗುತ್ತಿರುವ ಬಿಎ ಓದಿರುವ ಮಹಿಳಾ ಕೃಷಿಕರೊಬ್ಬರು ಸಮಗ್ರ ಕೃಷಿ ಪದ್ಧತಿಯಲ್ಲಿ ಸಾವಯವ ಬೇಸಾಯ ಕ್ರಮ ಅಳವಡಿಸಿಕೊಂಡು ಯಶ ಕಂಡಿದ್ದಾರೆ. ಈ ಮೂಲಕ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ.

ಧಾರವಾಡ ತಾಲೂಕಿನ ಗರಗ ಹೋಬಳಿ ವ್ಯಾಪ್ತಿಯ ಕೋಟೂರ ಗ್ರಾಮದ ಕಲಾವತಿ ಚವನಗೌಡ್ರ ಅವರು 5 ಎಕರೆ ಜಮೀನಿನ ಪೈಕಿ 2 ಎಕರೆಯಲ್ಲಿ ಬಾಳೆ, 2 ಎಕರೆಯಲ್ಲಿ ಕರಿಬೇವು, ನಿಂಬೆ, ಪೇರಲ, ಪಪ್ಪಾಯ, 1 ಎಕರೆಯಲ್ಲಿ ಏಲಕ್ಕಿ ಬಾಳೆ, ನುಗ್ಗೆ, ಚೆಂಡು ಹೂವು ಬೆಳೆದಿದ್ದಾರೆ. ಮಹಾರಾಷ್ಟ್ರದಿಂದ 400 ಪಪ್ಪಾಯ ಸಸಿಗಳನ್ನು ತಂದು 2024ರ ಜೂನ್​ನಲ್ಲಿ ನಾಟಿ ಮಾಡಿದ್ದರು. 8 ತಿಂಗಳಿಗೆ ಫಸಲು ಕೈಸೇರಿದೆ. ಕೆಜಿಗೆ 12 ರಿಂದ 22 ರೂ.ವರೆಗೆ ಮಾರಾಟವಾಗಿದೆ. ಇದರಿಂದ 2.63 ಲಕ್ಷ ರೂ. ಆದಾಯ ಬಂದಿದೆ.

ಧಾರವಾಡ ತಾಲೂಕಿನ ಕುಂಬಾಪುರದಲ್ಲಿರುವ ಬಾಗಲಕೋಟೆ ತೋಟಗಾರಿಕೆ ವಿವಿ ಶಾಖಾ ಕಚೇರಿಯಿಂದ 350 ನುಗ್ಗೆ ಸಸಿಗಳನ್ನು ತಂದು 2024ರ ಮೇನಲ್ಲಿ ನಾಟಿ ಮಾಡಿದ್ದಾರೆ. 2025ರ ಮಾರ್ಚ್​ನಲ್ಲಿ ಫಸಲು ಕೈಸೇರಿದೆ. ಇದರಿಂದ ಒಟ್ಟು 1.36 ಲಕ್ಷ ರೂ. ಆದಾಯ ಬಂದಿದೆ. ಕರಿಬೇವು ಮಾರಾಟದಿಂದ 37 ಸಾವಿರ ರೂ. ಲಾಭ ಸಿಕ್ಕಿದೆ. ಜಿ-9 ತಳಿ, ಏಲಕ್ಕಿ ಬಾಳೆ: ಮಹಾರಾಷ್ಟ್ರದ ಜಲಗಾಂವನಿಂದ ಜಿ-9 ತಳಿಯ 2,350 ಬಾಳೆ ಗಿಡವನ್ನು 2024ರ ಡಿಸೆಂಬರ್​ನಲ್ಲಿ ನಾಟಿ ಮಾಡಿದ್ದಾರೆ. 

ಪ್ರತಿ ಗೊನೆ 40 ರಿಂದ 60 ಕೆಜಿ ತೂಗುತ್ತದೆ. ಕೆಜಿಗೆ ಸರಾಸರಿ 12 ರೂ. ಸಿಕ್ಕಿದರೆ 14 ಲಕ್ಷ ರೂ. ಆದಾಯ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಕಲಾವತಿ. ಸಾವಿರ ಏಲಕ್ಕಿ ಬಾಳೆಯೂ ಇದ್ದು, ಪ್ರತಿ ಗಿಡದಲ್ಲಿ 18ರಿಂದ 20 ಕೆಜಿ ಗೊನೆಗಳು ಬಂದಿವೆ. ಅಂದಾಜು 5 ರಿಂದ 6 ಲಕ್ಷ ರೂ. ಆದಾಯ ಬರಬಹುದು.

ಡಿಜೆ ತೆಂಗು: ಡಿಜೆ ತಳಿಯ 200 ತೆಂಗು ನೆಟ್ಟಿದ್ದಾರೆ. ಮೂರು ವರ್ಷದ ನಂತರ ಗಿಡಕ್ಕೆ 150 ಕಾಯಿ (ಎಳನೀರು) ಸಿಗುವ ಅಂದಾಜಿದೆ. 30 ರೂ.ಗೆ ಒಂದರಂತೆ ಮಾರಾಟ ಮಾಡಿದರೂ 9 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರ ಜತೆಗೆ 300 ಅಡಕೆ, 300 ಸಾಗವಾನಿ ನಾಟಿ ಮಾಡಲಾಗಿದೆ.

"

ಮೊದಲಿನಿಂದಲೂ ಹೈನುಗಾರಿಕೆ, ಪಶು ಸಾಕಣೆ, ಕೃಷಿಯಲ್ಲಿ ಆಸಕ್ತಿ ಇತ್ತು. ಪತಿ ಅವರು ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದರು. ಇದರಿಂದ ಬಗೆಬಗೆಯ ಹಣ್ಣು, ಹೂವುಗಳನ್ನು ಬೆಳೆದಿದ್ದೇವೆ. ಬೆಳೆಗೆ ಎರೆಹುಳು, ಹಸು, ಮೇಕೆ ಗೊಬ್ಬರ ಬಳಸುತ್ತೇವೆ. 8 ದಿನಕ್ಕೊಮ್ಮೆ ಬೆಳೆಗಳಿಗೆ ಡ್ರಿಪ್ ಮೂಲಕ ಜೀವಾಮೃತ ಪೂರೈಸಲಾಗುತ್ತಿದೆ.

ವೈಜ್ಞಾನಿಕ ಪದ್ಧತಿ ಪಾಲನೆ

ಬಾಳೆ ಗಿಡಗಳಿಗೆ ಬಂಚ್ ಫೀಡಿಂಗ್ ಪದ್ಧತಿ ಅಳವಡಿಸಲಾಗಿದೆ. ಬಂಚ್ ಕವರ್ (ಗೊನೆ ಹೊದಿಕೆ) ಹಾಕಲಾಗಿದೆ. ಇದರಿಂದ ಒಂದು ಗೊನೆಗೆ 5ರಿಂದ 6 ಕೆಜಿ ತೂಕ ಹೆಚ್ಚಾಗಿದೆೆ. ಬಾಳೆ ಕಾಯಿಗಳಿಗೆ ಕೀಟ ಬಾಧೆ ಮತ್ತು ಕಲೆ (ಸ್ಕ್ರ್ಯಾಚ್) ಬೀಳುವುದನ್ನು ತಡೆಗಟ್ಟಬಹುದಾಗಿದೆ. ಜತೆಗೆ ಉತ್ತಮ ಮಟ್ಟದ ಫಸಲು ಸಿಗಲಿದೆ.

"

ಎರೆಹುಳು ಘಟಕ ನಿರ್ವಣಕ್ಕೆ ಇಲಾಖೆಯಿಂದ 50 ಸಾವಿರ ಹಾಗೂ ಹನಿ ನೀರಾವರಿಗೆ ಸಹಾಯಧನ ನೀಡಲಾಗಿದೆ. ಆಸಕ್ತ ರೈತರು ಸರ್ಕಾರದ ಯೋಜನೆಗಳ ಲಾಭ ಪಡೆದು ಆರ್ಥಿಕವಾಗಿ ಸದೃಢರಾಗಬೇಕು.

ಬನಾನಾ ಬೆಲ್ಟ್

ಬಾಳೆ ಗೊನೆ ತೂಕ ಹೆಚ್ಚಾಗಿ ನೆಲಕ್ಕೆ ಬೀಳುವುದನ್ನು ತಪ್ಪಿಸಲು ಬನಾನಾ ಬೆಲ್ಟ್ ಎಂಬ ಹೊಸ ವಿಧಾನ ಅನುಸರಿಸಲಾಗಿದೆ. ಒಂದು ಗಿಡದ ತುದಿಯಿಂದ ಇನ್ನೊಂದು ಗಿಡದ ಬುಡಕ್ಕೆ ಬೆಲ್ಟ್ ಕಟ್ಟಲಾಗಿದೆ ಅಧಿಕಾರಿಗಳ ಸಲಹೆ ಮೇರೆಗೆ ಆರು ಬಾರಿ ‘ಬನಾನಾ ಸ್ಪೆಷಲ್’ ಸಿಂಪಡಿಸಲಾಗಿದೆ.

ಹೊಲಿಗೆ ತರಬೇತಿ

ಕಲಾವತಿ ಅವರು ಹೊಲಿಗೆ, ಕಸೂತಿ ಕಲೆ ತರಬೇತಿ ಪಡೆದಿದ್ದು, ಬಿಡುವಿನ ವೇಳೆ ಮಹಿಳೆಯರಿಗೆ ತರಬೇತಿ ನೀಡುತ್ತಾರೆ. ಬ್ಲೌಸ್​ಗಳಿಗೆ ಕಂಪ್ಯೂಟರ್​ನಲ್ಲಿ ವಿವಿಧ ಡಿಸೈನ್ ಮಾಡಿ ಕೊಡುತ್ತಾರೆ. ಡಿಸೈನ್​ಗೆ 500 ರೂ.ಯಿಂದ 1500 ರೂ.ವರೆಗೆ ದರವಿದೆ.

ಟೆನ್ನಿಸ್ ಬಾಲ್ ತಳಿಯ ಚೆಂಡು ಹೂವು

ಹತ್ತು ಸಾವಿರ ಚೆಂಡು ಹೂವಿನ ಸಸಿ ಬೆಳೆದಿದ್ದು, ಹೂವಿನಿಂದ 93 ಸಾವಿರ ರೂ. ಆದಾಯ ಬಂದಿದೆ. ಬದುವಿನಲ್ಲಿ 40 ಜಾತಿಯ ಔಷಧೀಯ ಸಸಿಗಳನ್ನು ನೆಡಲಾಗಿದೆ. ತೋಟದ ಮನೆಯಲ್ಲಿ 15 ಮೇಕೆ, 4 ಹಸು ಸಾಕಲಾಗಿದೆ. ಸಗಣಿಯಿಂದ ಜೀವಾಮೃತ ತಯಾರಿಸಿ ಬೆಳೆಗಳಿಗೆ ನೀಡಲಾಗುತ್ತದೆ.