Order issued to close the storm-water drain even before clearing encroachments!
ಭೂ ದಾಖಲೆ ನಕ್ಷೆಯಲ್ಲಿದ್ದ ರಾಜಕಾಲುವೆ ಒತ್ತುವರಿ ತೆರವಿಗೂ ಮುನ್ನವೇ ಹಿಡುವಳಿ ಜಮೀನಿನಲ್ಲಿನ ಕಾಲುವೆ ಮುಚ್ಚಲು ಆದೇಶ ಮಾಡಿರುವ ತಹಸೀಲ್ದಾರ್ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಬಾಗೇಪಲ್ಲಿಯ 9ನೇ ವಾರ್ಡ್ನಲ್ಲಿ ಸ್ವಾಧಿನದಲ್ಲಿರುವ ಜಮೀನು ಗಡಿ ರೇಖೆ ವಿಚಾರದಲ್ಲಿ ಜಗಳ ನಡೆದಿದ್ದು, ಸರ್ವೇ ನಡೆದ ಸಮಯದಲ್ಲಿ ರಾಜಕಾಲುವೆ ಮತ್ತೊಂದು ಸರ್ವೇ ನಂಬರ್ನ ನಕ್ಷೆಯಲ್ಲಿ ಹಾದು ಹೋಗಿರುವ ಅಂಶ ಬೆಳಕಿಗೆ ಬಂದಿದೆ. ನಮ್ಮ ಜಮೀನಿನಲ್ಲಿದ್ದ ಕಾಲುವೆ ಮುಚ್ಚಿದ್ದೇವೆ.
— ವೈ.ಎಸ್.ಲೋಕೇಶ್ ಕುಮಾರ್ ಅರ್ಜಿದಾರ, ಬಾಗೇಪಲ್ಲಿ
ಪಟ್ಟಣದ ಸರ್ವೇ ನಂ 512ರ ಮಾಲೀಕ ಹಾಗೂ ಸರ್ವೇ ನಂ 515ರ ಮಾಲೀಕರ ನಡುವೆ ಜಮೀನಿನ ಅಳತೆ ಹಾಗೂ ಗಡಿ ರೇಖೆ ಗುರುತಿಸುವ ವಿಚಾರದಲ್ಲಿ ಜಗಳ ಪ್ರಾರಂಭಗೊಂಡು ಪರಿಸ್ಥಿತಿ ಬಿಗಡಾಯಿಸಿತ್ತು.
ದಶಕಗಳಿಂದ ಸಾರ್ವಜನಿಕರ ಬಳಕೆಯಲ್ಲಿರುವ ರಾಜಕಾಲುವೆಯನ್ನು ಭೂ ದಾಖಲೆ ನಕ್ಷೆ ಪ್ರಕಾರ ಅಳತೆ ಮಾಡಿ ಹುಡುಕಿ ಕೊಡುವಂತೆ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು ಸಮಸ್ಯೆಗೆ ಪರಿಹಾರ ಸಿಗದ ಕಾರಣ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ಜಮೀನನ್ನು ಅಳತೆ ಮಾಡಿರುವ ಭೂಮಾಪನಾ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ರಾಜಕಾಲುವೆ ಸರ್ವೇ ನಂ. 512 ರಲ್ಲಿ ಇಲ್ಲವೆಂದೂ, ಸರ್ವೇ ನಂ. 515 ರಲ್ಲಿ ಕಾಲುವೆ ಇದೆ ಎಂದೂ ಅರ್ಜಿದಾರರಿಗೆ ದಾಖಲೆ ಸಮೇತ ವರದಿ ಸಲ್ಲಿಸಿದ್ದರು. ತಹಸೀಲ್ದಾರ್ ಬುಧವಾರ ವಿವಾದಿತ ಕಾಲುವೆ ಒತ್ತುವರಿ ಸ್ಥಳಕ್ಕೆ ಆಗಮಿಸಿ ಒತ್ತುವರಿ ಪ್ರದೇಶ ತೆರವುಗೊಳಿಸಲು ಹೋಗದೆ ಏಕಾಏಕಿ ಸರ್ವೇ ನಂ.512 ರಲ್ಲಿರುವ ರಾಜಕಾಲುವೆ ಮುಚ್ಚಿಕೊಳ್ಳಿ ಎಂದು ಆದೇಶಿಸಿದರು. ತಹಸೀಲ್ದಾರ್ ಆದೇಶದ ಮೇರೆಗೆ ಸಾರ್ವಜನಿಕರ ವಿರೋಧದ ನಡುವೆಯೂ ಭೂ ಮಾಲೀಕರು ಜೆಸಿಬಿಯಿಂದ ಹಾಲಿ ರಾಜಕಾಲುವೆ ಮುಚ್ಚಿದರು. ಇದರಿಂದಾಗಿ ಈಗ ಚರಂಡಿ ನೀರು ಹರಿಯದಂತೆ ತಡೆಯುಂಟಾಗಿದೆ.
ಬಾಗೇಪಲ್ಲಿಯ ಸರ್ವೇ ನಂ.512 ರ ಭೂ ಮಾಲೀಕರು ರಾಜಕಾಲುವೆ ಗುರುತಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದು, ಸರ್ವೇ ಮಾಡಿದ ಸಮಯದಲ್ಲಿ ಸರ್ವೇ ನಂ.515 ರಲ್ಲಿ ರಾಜಕಾಲುವೆ ಇರುವುದು ಗೊತ್ತಾಗಿದೆ.ಈ ಹಿನ್ನೆಲೆಯಲ್ಲಿ ಕಾಲುವೆ ಪ್ರದೇಶ ಸರ್ವೇ ನಡೆಸಿ ಒಂದು ವಾರದೊಳಗೆ ಒತ್ತುವರಿ ತೆರವುಗೊಳಿಸಲಾಗುತ್ತದೆ.
— ಮನೀಷಾ ಪತ್ರಿ, ತಹಸೀಲ್ದಾರ್ ಬಾಗೇಪಲ್ಲಿ
ಜಮೀನು ಮಾಲೀಕರ ಜಗಳದಿಂದ ಹಾಲಿ ರಾಜಕಾಲುವೆ ಮುಚ್ಚಲಾಗಿದ್ದು, ಬಿಜಿಎಸ್ ಶಾಲೆ ರಸ್ತೆಯಲ್ಲಿನ ನೂರಾರು ಮನೆಗಳ ಚರಂಡಿ ನೀರು ಮುಂದೆ ಹರಿಯಲು ಸಾಧ್ಯವಾಗದೆ ನಿಂತಲ್ಲೆ ನಿಂತು ದುರ್ವಾಸನೆ ಬೀರುವ ಪರಿಸ್ಥಿತಿ ನಿಮಾರ್ಣವಾಗಿದೆ. ಸರ್ಕಾರಿ ದಾಖಲೆ ನಕ್ಷೆಯಲ್ಲಿರುವ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್ಗೆ ಸ್ಥಳಿಯರು ಮನವಿ ಮಾಡಿದರೆ, ವಾರದೊಳಗೆ ಸಮಸ್ಯೆ ಬಗೆಹರಿಸಿಕೊಡುವುದಾಗಿ ಉತ್ತರಿಸಿದ್ದಾರೆ.