ಆನೇಕಲ್ ತಾಲೂಕು ವ್ಯಾಪ್ತಿಯ ಕೆಲವು ಗ್ರಾಮ ಪಂಚಾಯಿತಿಗಳನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಲು ಮುಂದಾಗಿರುವ ಹಿನ್ನೆಲೆ ಸೋಮವಾರ ಚಂದಾಪುರದಲ್ಲಿ ವಿಚಾರಗೋಷ್ಠಿ ನಡೆಸಲಾಯಿತು. ತಾಪಂ ಮಾಜಿ ಸದಸ್ಯ ಆನಂದ್, ಪತ್ರಕರ್ತರ ಸಂಘದ ಅಧ್ಯಕ್ಷ ಅಮರೇಶ್, ವಿಚಾರವಾದಿ ಬರಹಗಾರ ಸಿ.ಆರ್. ವಿಜಯ್ ಕುಮಾರ್,ರೆಡ್ಡಿ, ಪ್ರಸನ್ನ ಕುಮಾರ್, ವಕೀಲ ಮೂರ್ತಿ ಕುಮಾರ್, ಗೌರಿ ಶಂಕರ್, ಗಿರಿಜಾ, ಸುಭದ್ರ, ಪ್ರಮೀಳಾ, ನೇತ್ರಾ ಉಪಸ್ಥಿತರಿದ್ದರು.
ಆನೇಕಲ್ : ತಾಲೂಕು ವ್ಯಾಪ್ತಿಯ ಕೆಲವು ಗ್ರಾಮ ಪಂಚಾಯಿತಿಗಳನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಚಂದಾಪುರದಲ್ಲಿ ವಿವಿಧ ಜನಾಂಗದ ಮುಖಂಡರು, ಪಕ್ಷಗಳ ನಾಯಕರು, ಸಾಹಿತಿಗಳು, ಪತ್ರಕರ್ತರು ವಿಚಾರಗೋಷ್ಠಿಯಲ್ಲಿ ವಿಚಾರ ಮಂಡಿಸಿದರು. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸತ ಡಾ.ವೈ.ಚಿನ್ನಪ್ಪ ಚಿಕ್ಕಹಾಗಡೆ ನೇತೃತ್ವ ವಹಿಸಿದ್ದರು.
ತಾಲೂಕಿನಲ್ಲಿ ಸಾಕಷ್ಟು ರೈತರಿದ್ದು, ಭೂಮಿ ಉಳಿಸಿಕೊಂಡು ಮುಂದಿನ ಪೀಳಿಗೆಗೆ ನೀಡಬೇಕಾದ ಜವಾಬ್ದಾರಿ ಇದೆ. ಗ್ರೇಟರ್ ಬೆಂಗಳೂರು ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಆರ್.ಟಿ ಅಶೋಕ ರೆಡ್ಡಿ ಆತಂಕ ವ್ಯಕ್ತಪಡಿಸಿದರು.
ನಿವೃತ್ತ ಯೋಧ ವೇಣು ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ಆಗಬೇಕು, ಗ್ರಾಮ ಸ್ವರಾಜ್ಯ ಆಗಬೇಕು ಎನ್ನುವ ಗಾಂಧಿ ಅವರ ಕನಸು ಈಡೇರಬೇಕಾದರೆ ಗ್ರೇಟರ್ ಬೆಂಗಳೂರು ಆಗಬಾರದು ಎನ್ನುವ ವಿಚಾರ ಮುಂದಿಟ್ಟುಕೊಂಡು ಹೋರಾಡಬೇಕು ಎಂದರು.
ಹಿರಿಯ ಸಾಹಿತಿ ಡಾ. ತಾ.ನಂ.ಕುಮಾರಸ್ವಾಮಿ ಮಾತನಾಡಿ, ಇಡೀ ಜಗತ್ತಿನಲ್ಲಿ ಸಂವಿಧಾನದಲ್ಲಿ ಅಡಗಿರುವ ವಿಚಾರ ಏನೆಂದು ತಿಳಿದುಕೊಳ್ಳದೆ ಹೋದರೆ ಪ್ರಜಾಪ್ರಭುತ್ವ ಅಳಿಯುತ್ತದೆ ಎನ್ನುವ ಆತಂಕ ಕಾಡುತ್ತಿದೆ, ಈ ವಿಚಾರವಾಗಿ ಬೀದಿಗಿಳಿದು ಹೋರಾಟ ಮಾಡಬೇಕಿದೆ. ಜಿಬಿಎ ನಮಗೆ ಏಕೆ ಬೇಕು? ಶಾಸಕರು,ಮಂತ್ರಿಗಳು ರಾಜ್ಯಪಾಲರು ಈ ಬಗ್ಗೆ ಗಮನ ಹರಿಸಬೇಕು ಎಂದರು. ಕರುಬ ಜನಾಂಗದ ಮಖಂಡ ಆನೇಕಲ್ ದೊಡ್ಡಯ್ಯ ವಿಚಾರ ಮಂಡಿಸಿದರು.
ಸಾಮಾನ್ಯರು ಗೆದ್ದು ಬರಲು ಅಸಾಧ್ಯ : ಆನೇಕಲ್ ತಾಲೂಕಿನ ಅಳಿವು&ಉಳಿವಿನ ಪ್ರಶ್ನೆ ಎದುರಾಗಿದೆ. 27 ಗ್ರಾಪಂ, ನಾಲ್ಕು ಪುರಸಭೆ, ಒಂದು ನಗರಸಭೆ ಇಲ್ಲಿವೆ, ಆನೇಕಲ್ ತಾಲೂಕನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತಂದರೆ ಸ್ಥಳಿಯ ಪ್ರತಿನಿಧಿಗಳು ಅಧಿಕಾರ ಕಳೆದುಕೊಳ್ಳಲಿದ್ದಾರೆ. ತಾಲೂಕಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಈ ಬಗ್ಗೆ ಚಕಾರ ಎತ್ತುತ್ತಿಲ್ಲ, ಆನೇಕಲ್ ತಾಲೂಕು ಮೀಸಲು ಕ್ಷೇತ್ರ ಆಗಿದ್ದು, ಸಾಮಾನ್ಯರು ಗೆದ್ದು ಬರಲು ಸಾಧ್ಯವಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ಮುಖಂಡ ಕಿರಣ್ ಪ್ರಭಾಕರ ರೆಡ್ಡಿ ಹೇಳಿದರು.
ಜಿಬಿಎಗೆ ಸೇರಿದರೆ ತೊಂದರೆ ಏನು?
1. ಗ್ರಾಮ ಪಂಚಾಯಿತಿಗಳ ಅಸ್ತಿತ್ವಕ್ಕೆ ಕುತ್ತು, ಸಾಮಾನ್ಯ ಜನರ ಹಕ್ಕು ಕಸಿಯಲು ಹುನ್ನಾರ.
2. ಒಂದೊಮ್ಮೆ ಪಂಚಾಯಿತಿಗಳನ್ನು ನಾಶಪಡಿಸಿ ನಗರಸಭೆ ಮತ್ತು ಪುರಸಭೆಗಳನ್ನಾಗಿ ಮಾಡಿದರೆ ಗ್ರಾಮಸ್ವರಾಜ್ಯ ಕನಸು ದೂರ
4. ಗ್ರಾಮೀಣ ಭಾಗದ ಸಹಕಾರಿ ಸಂಘಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ.
5. ಮಹಿಳಾ ಸಹಕಾರಿ ಸಂಘಗಳು ನಾಶ ಆಗುತ್ತವೆ.*-ಸಹಕಾರಿ ಸಂಘದ ಹಾಲಿನ ಡೇರಿಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ
6. ತಾಲೂಕಿನ ಜಮೀನು ಕಳೆದುಕೊಳ್ಳುವ ಆತಂಕ
7. ರಾಗಿಯ ಕಣಜ ಎಂದು ಖ್ಯಾತಿಯಾಗಿದ್ದ ಆನೇಕಲ್ ಕಾಂಕ್ರೀಟ್ ಕಾಡಾಗಲಿದೆ, ಅಳಿದುಳಿದ ಭೂಮಿಗೂ ಸಂಚಕಾರ ಬರುತ್ತದೆ.
8. ಹೆಚ್ಚಿನ ಕಾರ್ಖಾನೆಗಳು ಬರುವುದರಿಂದ ವಲಸಿಗರು ಹೆಚ್ಚಾಗಿ ಸ್ಥಳಿಯರಿಗೆ ಸಮಸ್ಯೆ ಆಗುತ್ತದೆ.
9. ಮೂಲ ನಿವಾಸಿಗಳು ಪರಕಿಯರ ಪಾಲಾಗುತ್ತಾರೆ. *ತೆರಿಗೆಗಳು ಹೆಚ್ಚಾಗಿ ಜನ ತೊಂದರೆಗೆ ಸಿಲುಕುತ್ತಾರೆ.
ಹತ್ತು ವರ್ಷದಿಂದ ಜಿಲ್ಲಾ ಪಂಚಾಯಿತಿ ಚುನಾವಣೆ ಮಾಡಿಲ್ಲ, ಇದರಿಂದ ಅನುದಾನವಿಲ್ಲದೆ ಕೆಲಸಗಳಾಗಿಲ್ಲ.ಆನೇಕಲ್ ಕೃಷಿ ಪ್ರದೇಶ ಆಗಿದ್ದು ಜಿಬಿಎ ವ್ಯಾಪ್ತಿಗೆ ಸೇರಿಸಿದರೆ ಮುಂದಿನ ದಿನಗಳಲ್ಲಿ ನಗರೀಕರಣ ಆಗಿ,ಇಲ್ಲಿನ ಪ್ರದೇಶಗಳ ವ್ಯವಸ್ಥೆ ಕೆಟ್ಟು ಹೋಗಲಿದೆ.
ಭೂಮಿಗೆ ಚಿನ್ನದ ಬೆಲೆ ಬಂದು ಜಾನುವಾರುಗಳಿಗೂ ಕಷ್ಟ ಎದುರಾಗಲಿದೆ, ರಾಗಿಯ ಕಣಜ ಶೇ.90 ಕೈಗಾರಿಕೆ ಹಾಗೂ ಬಡಾವಣೆಗಳಿಂದ ತುಂಬಿದೆ. ಉಳಿದ ಭೂಮಿಯನ್ನಾದರೂ ಉಳಿಸಿಕೊಳ್ಳಬೇಕಿದೆ.
ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಅಧ್ಯಕ್ಷರಾದವರು ಹೊರಗಿನಿಂದ ಬಂದಿದ್ದಾರೆ. ಜಿಬಿಎ ವ್ಯಾಪ್ತಿಗೆ ಸೇರಿದರೆ ಗ್ರಾಮೀಣ ಜನ ಸಣ್ಣಪುಟ್ಟ ಕೆಲಸಕ್ಕಾಗಿ ಬೆಂಗಳೂರು ಜಿಬಿಎ ಕಚೇರಿಗೆ ಹೋಗಬೇಕಾದ ಪರಿಸ್ಥಿತಿಗೆ ಎದುರಾಗುತ್ತದೆ, ಅಂಬಾನಿ ಹಾಗೂ ಅದಾನಿ ಕೈಯಲ್ಲಿ ದೇಶ ಕೊಟ್ಟ ಹಾಗೆ ಸ್ಥಳಿಯವಾಗಿಯೂ ಪರರ ಹಾವಳಿ ಹೆಚ್ಚಾಗಲಿದೆ.
ತಾಲೂಕಿನ ಅರ್ಧದಷ್ಟು ಭೂಮಿಯನ್ನು ಕೈಗಾರಿಕೆಗಳಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ನಮ್ಮನ್ನು ಉಳಿಸಿ ಎಂದು ಹೋರಾಟ ಮಾಡಬೇಕಾಗುತ್ತದೆ, ಜಿಬಿಎ ಆದರೆ ಯಾರ ಬಳಿ ಕಷ್ಟ ಹೇಳಿಕೊಳ್ಳಬೇಕು?