ಇಂಡಿ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಾಣಕ್ಕಾಗಿ ಮಠದ ಜಮೀನು ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಶ್ರೀಮಠದ ಆಡಳಿತ ಮಂಡಳಿ, ಅಭಿನವ ಮುರುಘೇಂದ್ರ ಶಿವಾಚಾರ್ಯರ ನೇತತ್ವದಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಜಯ ಪಾಟೀಲ, ಶ್ರೀಶೈಲ ಕುಂಬಾರ, ದಾದಾಗೌಡ ಬಿರಾದಾರ ಮತ್ತಿತರರಿದ್ದರು.
- ಶ್ರೀಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ಮನವಿ
- ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ
ಇಂಡಿ: ತಾಲೂಕಿನ ತೆಗ್ಗಿಹಳ್ಳಿ ಗ್ರಾಮದಲ್ಲಿ ವಸತಿ ಶಾಲೆ ನಿರ್ಮಾಣಕ್ಕಾಗಿ ಮಠದ ಜಮೀನು ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ಶ್ರೀಮಠದ ಆಡಳಿತ ಮಂಡಳಿ ಶ್ರೀಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರ ನೇತತ್ವದಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್ ಪಿ. ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿದ ಅಧಿಕೃತ ಮನವಿ ಪತ್ರದಲ್ಲಿ ಮಠದ ಹಿಂದಿನ ಉತ್ತರಾಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಜಮೀನು ಬಿಟ್ಟು ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ತೆಗ್ಗಿಹಳ್ಳಿ ಗ್ರಾಮದ ಸರ್ವೇ ನಂಬರ್ 89/1ರಲ್ಲಿರುವ ಶ್ರೀ ಶಿವಾನಂದ ಸ್ವಾಮಿಗಳ ದೇವಸ್ಥಾನದ ಮಠಕ್ಕೆ ಸೇರಿದ 5 ಎಕರೆ ಜಮೀನನ್ನು ಈ ಹಿಂದೆ ವಸತಿ ಶಾಲೆ ಸ್ಥಾಪನೆಗಾಗಿ ದಾನಪತ್ರದ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೆಸರಿಗೆ ಮಾಡಿಕೊಡಲಾಗಿತ್ತು. ಆದರೆ, ಹಿಂದಿನ ಮಠದ ಮುಖ್ಯಸ್ಥ ವಿಜಯ ಮಹಾಂತೇಶ ಪ್ರಭಯ್ಯ ಕೆರಿಮಠ ಅವರು ಗ್ರಾಮಸ್ಥರ ಹಾಗೂ ಮಠದ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೇ, ಯಾವುದೇ ಕರಾರು ದಾಖಲೆಗಳಿಲ್ಲದೆ ಆ ಜಮೀನನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಗ್ರಾಮಸ್ಥರ ಬೇಡಿಕೆ, ಪರ್ಯಾಯ ಜಾಗ: ಸರ್ಕಾರದ ಶೈಕ್ಷಣಿಕ ಯೋಜನೆಗಳಿಗೆ ಅಥವಾ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಮಾಡುವುದು ತಮ್ಮ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿರುವ ಗ್ರಾಮಸ್ಥರು, ಮಠದ ಒಪ್ಪಿಗೆಯಿಲ್ಲದೆ ನೀಡಿರುವ ಸರ್ವೇ ನಂಬರ್ 89/1ರ ಜಮೀನಿನಲ್ಲಿ ಯಾವುದೇ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಒತ್ತಾಯಿಸಿದರು.
ಅದಕ್ಕೆ ಪರ್ಯಾಯವಾಗಿ, ತೆಗ್ಗಿಹಳ್ಳಿ ಗ್ರಾಮದಲ್ಲೇ ಸರ್ಕಾರಕ್ಕೆ ಸೇರಿದ ಜಮೀನು (ಸರ್ವೇ ನಂಬರ್ 77) ಲಭ್ಯವಿದ್ದು, ವಸತಿ ಶಾಲೆಯನ್ನು ಅಲ್ಲಿಯೇ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದರು.
ಗ್ರಾಮಸ್ಥರು ಮಹತ್ವದ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಒಪ್ಪಿಸಿ, ಮನವಿ ಪತ್ರದೊಂದಿಗೆ 1994 ರಿಂದ 2004ರ ವರೆಗಿನ ಇ.ಸಿ ಪ್ರತಿಗಳು, ಎಂ.ಆರ್. ನಂಬರ್ 1480ರ ದಾಖಲೆಗಳು. ಕರ್ನಾಟಕ ಸರ್ಕಾರದ ವಿಶೇಷ ಭೂ-ಸ್ವಾಧೀನ ಅಧಿಕಾರಿಗಳ ಕಾಯ್ದೆ ನಿರ್ವಹಿಸಿದ ದಾಖಲೆಗಳು, ಗ್ರಾಮಸ್ಥರು ಸಹಿ ಮಾಡಿದ ಮನವಿ ಪತ್ರದ ನಕಲನ್ನು ಲಗತ್ತಿಸಲಾಗಿದೆ.
ಗ್ರಾಮಸ್ಥರ ಮತ್ತು ಮಠದ ಆಡಳಿತ ಮಂಡಳಿಯ ಒಪ್ಪಿಗೆಯಿಲ್ಲದೆ ಆ ಜಾಗದಲ್ಲಿ ಕಾಮಗಾರಿ ಮುಂದುವರಿಸಿದರೆ ಉಂಟಾಗುವ ಕಾನೂನು ತೊಡಕುಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಗ್ರಾಮಸ್ಥರಾದ ಸಂಜಯ ಪಾಟೀಲ, ಶ್ರೀಶೈಲ ಕುಂಬಾರ, ದಾದಾಗೌಡ ಬಿರಾದಾರ, ಸಂದೀಪ ಬಿರಾದಾರ, ಕೆ.ಆರ್. ಹಿರೇ ಪೂಜಾರಿ, ಶೇಖರ ಹೊಸಮನಿ, ಸಿ.ಎಸ್. ಬೇವಿನಕಟ್ಟಿ, ಶೇಖರ್ ಕಡಣಿ, ಬಾಬು ಹಿರೇಪೂಜಾರಿ, ರವಿ ಜಮಾದಾರ, ಸೈಯದ್ ಮಂದೇವಾಲಿ, ರಾಮಶೇಕ್ ತಳವಾರ ಮತ್ತಿತರರಿದ್ದರು.