ಚಿರತೆ ದಾಳಿಗೆ ಭಕ್ತರೊಬ್ಬರೂ ಬಲಿಯಾಗಿರುವುದನ್ನು ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ತಾಳುಬೆಟ್ಟದ ಪೊನ್ನಾಚಿ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಯಿತು. ಕರಿಯಪ್ಪ, ಶಶಿ, ಮಹೇಶ್ ಇತರರು ಇದ್ದರು.  
ರಾಜ್ಯ

ಭಕ್ತರ ಪಾದಯಾತ್ರೆ ಸ್ಥಗಿತಕ್ಕೆ ವಿರೋಧ

ವಸಂತಕುಮಾರ್ ಬಿ
ಹನೂರು: ಚಿರತೆ ದಾಳಿಗೆ ಭಕ್ತರೊಬ್ಬರು ಬಲಿಯಾಗಿರುವುದನ್ನು ಖಂಡಿಸಿ ಬುಧವಾರ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪದಾಧಿಕಾರಿಗಳು ತಾಲೂಕಿನ ತಾಳುಬೆಟ್ಟದ ಪೊನ್ನಾಚಿ ಕ್ರಾಸ್ ಬಳಿ ದಿಢೀರ್ ಪ್ರತಿಭಟನೆ ನಡೆಸಿದರು.

ಹೊನ್ನೂರು ಪ್ರಕಾಶ್ ಮಾತನಾಡಿ, ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿಸುವ ಉದ್ದೇಶದಿಂದ ಚಿರತೆ, ಹುಲಿ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳನ್ನು ಈ ಪ್ರದೇಶಕ್ಕೆ ತಂದು ಬಿಡಲಾಗುತ್ತಿದೆ. ಇದರಿಂದಾಗಿಯೇ ಭಕ್ತರೊಬ್ಬರೂ ಮೃತಪಟ್ಟಿದ್ದಾರೆ. ಆದ್ದರಿಂದ ಇಂತಹ ಘಟನೆ ಮರುಕಳುಹಿಸಬಾರದು. ಯಾವುದೇ ಕಾರಣಕ್ಕೂ ಭಕ್ತರ ಪಾದಯಾತ್ರೆಯನ್ನು ಸ್ಥಗಿತಗೊಳಿಸುವ ಕೆಲಸವಾಗಬಾರದು. ಒಂದು ವೇಳೆ ಇದಕ್ಕೆ ಮುಂದಾದರೆ ತೀವ್ರ ಫ್ರತಿಭಟನೆ ನಡೆಸಲಾಗುತ್ತದೆ. ದಾಳಿ ನಡೆಸಿರುವ ಚಿರತೆಯನ್ನು ಸೆರೆ ಹಿಡಿದು ಬೇರೆಡೆಗೆ ಬಿಡುವಂತೆ ಒತ್ತಾಯಿಸಿದರು.

ಮ.ಬೆಟ್ಟ ಭಾಗದ ತಪ್ಪಲಿನ ಕಾಡಂಚಿನ ಗ್ರಾಮಗಳಿಗೆ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ಕಾಮಗಾರಿಯನ್ನು ಕೈಗೊಳ್ಳಲು ಅರಣ್ಯ ಇಲಾಖೆ ತಡೆಯೊಡ್ಡಿರುವುದು ಸರಿಯಲ್ಲ. ಇದರಿಂದ ಜನರು ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ಆದ್ದರಿಂದ ವಿದ್ಯುತ್ ಸೌಕರ್ಯಕ್ಕೆ ಒದಗಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಡಿಸಿಎಫ್ ಭಾಸ್ಕರ್ ಅವರು ಪ್ರತಿಕ್ರಿಯಿಸಿ, ಚಿರತೆ ಸೆರೆಗೆ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ಇಂತಹ ಘಟನೆ ಮರುಕಳುಹಿಸದಂತೆ ಮುಂಜಾಗ್ರತಾ ಕ್ರಮವಹಿಸಲಾಗುವುದು. ವಿದ್ಯುತ್ ಸೌಕರ್ಯ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಚಂಗಡಿ ಕರಿಯಪ್ಪ, ಶಶಿ, ಮಹೇಶ್, ನಿಜಗುಣಸ್ವಾಮಿ, ಮಾದೇವ, ಪ್ರಸಾದ್ ಇದ್ದರು.