ಬನ್ನೂರಿನ ಬಸವೇಶ್ವರ ವೃತ್ತದ ಬಳಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ತಮಿಳುನಡಿಗೆ ನೀರು ಹರಿಸುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಅರುಣ್‌ಕುಮಾರ್, ದೇವರಾಜು, ವೈ.ಎಸ್. ರಾಮುಸ್ವಾಮಿ ಇತರರು ಇದ್ದರು.  
ರಾಜ್ಯ

ತಮಿಳುನಾಡಿಗೆ ನೀರು ಹರಿಸಲು ವಿರೋಧ

ಬನ್ನೂರು:

ಕಾವೇರಿ ನೀರು ನಿಯಂತ್ರಣ ಸಮಿತಿ ದಿನಕ್ಕೆ 3500 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶಿಸಿರುವುದು ಸರಿಯಲ್ಲ. ಕೂಡಲೇ ಈ ಆದೇಶ ಹಿಂಪಡೆದು ರಾಜ್ಯದ ರೈತರ ಹಿತ ಕಾಯಬೇಕು ಎಂದು ಕಬ್ಬು ಬೆಳೆಗಾರ ಸಂಘದ ಹೋಬಳಿ ಅಧ್ಯಕ್ಷ ಅರುಣ್‌ಕುಮಾರ್ ಆಗ್ರಹಿಸಿದರು.


ಪಟ್ಟಣದ ಸಂತೇಮಾಳದ ಬಸವೇಶ್ವರ ವೃತ್ತದಲ್ಲಿ ತಮಿಳನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.


ರಾಜ್ಯದ ನಾಲ್ಕು ಜಲಾಶಯಗಳಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೆ ಕುಡಿಯಲು ತೊಂದರೆಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಜಲಾಶಯದಲ್ಲಿರುವ ನೀರನ್ನು ಕೆರೆ, ಕಟ್ಟೆಗಳಿಗೆ ತುಂಬಿಸಿ ಅಂತರ್ಜಲ ವೃದ್ಧಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಕಾವೇರಿ ಕೊಳ್ಳದ ರೈತರಿಗೆ ಬಹಳಷ್ಟು ಅನ್ಯಾಯವಾಗುವ ರೀತಿ ಕಾವೇರಿ ನಿಯಂತ್ರಣ ಸಮಿತಿ ನಡೆದುಕೊಳ್ಳುತ್ತಿದೆ. ರಾಜ್ಯದಿಂದ ಆಯ್ಕೆಯಾದ ಯಾವ ಸಂಸದರು ಸಹ ಕೇಂದ್ರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸುವ ಕೆಲಸ ಮಾಡದಿರುವುದು ನಮ್ಮ ದುರಾದೃಷ್ಟವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.


ಕಬ್ಬು ಬಳೆಗಾರ ಸಂಘದ ರಾಜ್ಯ ಉಪಾಧ್ಯಕ್ಷ ಅತ್ತಹಳ್ಳಿ ದೇವರಾಜು ಮಾತನಾಡಿ, ಎಲ್ಲರಿಗೂ ನೀರು ಬೇಕು. ಕೇವಲ ರೈತರಿಗೆ ಮಾತ್ರ ನೀರು ಎನ್ನುವ ಕಲ್ಪನೆ ಬಿಡಿ. ರೈತರು ಒಮ್ಮೆ ಬೆಳೆ ಬೆಳೆಯುವುದನ್ನು ನಿಲ್ಲಿಸಿದರೆ ಸರ್ಕಾರಗಳು ಅಲುಗಾಡಬೇಕಾಗುತ್ತದೆ. ಕೂಡಲೆ ಸರ್ಕಾರ ಇತ್ತ ಗಮನಹರಿಸಿ ರಾಜ್ಯ ರೈತರ ಪರಿಸ್ಥಿತಿ, ಬರದ ಪರಿಸ್ಥಿತಿಗೆ ಅನುಗಣವಾಡಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಮೈಸೂರಿಗೆ ಬರುವ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಇದೇ ವೇಳೆ ಕಾವೇರಿ ನೀರು ನಿಯಂತ್ರಣ ಸಮಿತಿ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ತಕ್ತಪಡಿಸಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯಿಂದಾಗಿ ಮೈಸೂರು -ಮಳ್ಳವಳ್ಳಿ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ನಿಲ್ಲುವಂತಾಯಿತು.


ಪ್ರತಿಭಟನೆಯಲ್ಲಿ ಒಕ್ಕಲಿಗ ಸಂಘದ ತಾಲ್ಲೂಕು ಅಧ್ಯಕ್ಷ ವೈ.ಎಸ್.ರಾಮುಸ್ವಾಮಿ, ಸಿ.ಲಿಂಗಣ್ಣ, ಮಧು, ನವೀನ, ಚೇತನ, ರಾಮ, ಶೇಖರ, ರಘು, ಸುನೀಲ್, ಪ್ರಮೋದ, ರಂಗಸ್ವಾಮಿ, ಮಹದೇವ, ಸ್ವಾಮಿ, ಭೋಜರಾಜು, ಗಿರಿರಾಜ್, ಸ್ವಾಮಮಿ, ನಿಜಲಿಂಗು, ಬೆಟ್ಟಪ್ಪ, ನಾಗೇಂದ್ರ, ಬೀಡನಹಳ್ಳಿ ದೇವರಾಜು, ತುರಗನೂರು ಮಾದೇಗೌಡ, ಬನ್ನೂರು ಶ್ರೀನಿವಾಸ, ನಟೇಶ, ಮಹೇಶ, ಚಾಮನಹಳ್ಳಿ ಶಬರೀಶ ಇತರರು ಇದ್ದರು.