ಕೆರೂರದಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ಹೆಸ್ಕಾಂ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು. ರೈತ ಮುಖಂಡ ಯಲ್ಲಪ್ಪ ಹೆಗಡೆ, ಗೋವಿಂದಪ್ಪ ಬೆಳಗಂಟಿ, ಭೀಮಶಿ ಮಾಲಗಿ, ಸುರೇಶ ಪೂಜೇರಿ ಇತರರಿದ್ದರು.
- ಕೆರೂರಲ್ಲಿ ರೈತರ ಪ್ರತಿಭಟನೆ
- ಸರ್ಕಾರಕ್ಕೆ ಎಚ್ಚರಿಕೆ
ಕೆರೂರ: ರಾಜ್ಯ ಸರ್ಕಾರ ವಿದ್ಯುತ್ ವಿತರಣಾ ಸಂಸ್ಥೆಗಳ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ರೈತರು ಹೆಸ್ಕಾಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಹೆದ್ದಾರಿಯಲ್ಲಿ ಕುಳಿತು ಸಂಚಾರಕ್ಕೂ ಅಡಚಣೆ ಉಂಟು ಮಾಡಿದರು.
ರೈತ ಮುಖಂಡ ಯಲ್ಲಪ್ಪ ಹೆಗಡೆ ಮಾತನಾಡಿ, ವಿದ್ಯುತ್ ಖಾಸಗೀಕರಣದಿಂದ ರೈತರು ಹಾಗೂ ಸಾಮಾನ್ಯ ಜನತೆಗೆ ಭಾರೀ ತೊಂದರೆ ಉಂಟಾಗಲಿದೆ ಎಂದು ಹೇಳಿದರು. ಉಚಿತ ವಿದ್ಯುತ್, ಗಹಜ್ಯೋತಿ ಸೇರಿ ಪ್ರಮುಖ ಜನಪರ ಯೋಜನೆಗಳು ನಿಲ್ಲುವ ಸಾಧ್ಯತೆ ಇದ್ದು, ಇದರಿಂದ ಬಡ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಎಚ್ಚರಿಸಿದರು.
ಇನ್ನು ಸರ್ಕಾರದ ನೀತಿಯನ್ನು ಟೀಕಿಸಿದ ಅವರು, ಖಾಸಗೀಕರಣದ ಮೂಲಕ ದೊಡ್ಡ ಕಂಪನಿಗಳಿಗೆ ಲಾಭ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ರೈತ ಸಂಘದ ಅಧ್ಯಕ್ಷ ಗೋವಿಂದಪ್ಪ ಬೆಳಗಂಟಿ ಮಾತನಾಡಿ, ಈಗಾಗಲೇ ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಖಾಸಗೀಕರಣ ಆರ್ಥಿಕ ಹೊರೆ ಹೆಚ್ಚಿಸಲಿದೆ ಎಂದು ಹೇಳಿದರು.
ಸರ್ಕಾರ ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ವಿದ್ಯುತ್ ಖಾಸಗೀಕರಣವನ್ನು ಹಿಂತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭೀಮಷಿ ಮಾಲಗಿ, ಸುರೇಶ ಪೂಜೇರಿ, ರಾಮಚಂದ್ರ ಮೈಲಾರಿ, ಹುಸೇನಸಾಬ ಮಾಲದಾರ, ಭರಮಪ್ಪ ಉದಗಟ್ಟಿ, ಬಸವರಾಜ ಬನ್ನಿದಿನ್ನಿ ಸೇರಿ ಹಲವರು ಭಾಗವಹಿಸಿದ್ದರು.