ಹಳೇಬೀಡು ಹೊಯ್ಸಳೇಶ್ವರ ದೇಗುಲದ ಉತ್ತರದ ದ್ವಾರದಲ್ಲಿರುವ ಹೊಯ್ಸಳ ವೃತ್ತ ಹಾಗೂ ಅದಕ್ಕೆ ಸನಿಹದಲ್ಲಿರುವ ಪ್ರವೇಶದ ಗೇಟ್.
- ಹೊಯ್ಸಳರ ಕಾಲದಲ್ಲಿ ದೇಗುಲ ಪ್ರವೇಶಕ್ಕೆ ರಾಜಮಾರ್ಗವಾಗಿದ್ದ
- ದಕ್ಷಿಣ ದಿಕ್ಕಿನ ಆಗಮನ ವ್ಯವಸ್ಥೆ
ಹಳೇಬೀಡು: ಹೊಯ್ಸಳರ ಕಾಲದಲ್ಲಿ ದೇಗುಲ ಪ್ರವೇಶಕ್ಕೆ ರಾಜಮಾರ್ಗವಾಗಿದ್ದ ಹಾಗೂ ಪ್ರಸ್ತುತ ಸಾರ್ವಜನಿಕ ಪ್ರವೇಶ ದ್ವಾರವೂ ಆಗಿರುವ ದಕ್ಷಿಣ ದಿಕ್ಕಿನ ಆಗಮನ ವ್ಯವಸ್ಥೆಯನ್ನು ಉತ್ತರದ ಗೇಟ್‌ಗೆ ಬದಲಾಯಿಸಲು ಹೊರಟಿರುವ ಕೇಂದ್ರ ಪುರಾತತ್ವ ವಿಭಾಗದ ನಿರ್ಧಾರಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಹೊಯ್ಸಳರ ಕಾಲದಲ್ಲಿ ದಕ್ಷಿಣ ದಿಕ್ಕಿನ ಪ್ರವೇಶ ದ್ವಾರವು ರಾಜಮಾರ್ಗವಾಗಿತ್ತು. ಆ ಪರಂಪರೆ ಮುಂದುವರಿಯಬೇಕು ಎಂಬ ಆಶಯದಿಂದ ನಾಲ್ಕು ವರ್ಷಗಳ ಹಿಂದೆ ಉತ್ತರ ದ್ವಾರದ ಪ್ರವೇಶವನ್ನು ಮುಚ್ಚಿ ದಕ್ಷಿಣ ದಿಕ್ಕಿನಿಂದಲೇ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ರಾಜಮಾರ್ಗದ ವ್ಯವಸ್ಥೆಗೆ ಪೂರಕವಾಗಿ ಆರಂಭದಲ್ಲೇ ಬೃಹತ್ ಗಣಪತಿ ಹಾಗೂ ಹೊಯ್ಸಳ ಲಾಂಛನಗಳನ್ನು ನಿರ್ಮಿಸಲಾಗಿದೆ. ರಾಜರು ಹೊಯ್ಸಳೇಶ್ವರ ದರ್ಶನಕ್ಕೆ ಬರುವ ಮುನ್ನ ಗಣಪತಿ ಹಾಗೂ ಲಾಂಛನಗಳಿಗೆ ನಮಸ್ಕರಿಸಿ ಆಗಮಿಸುತ್ತಿದ್ದರು ಎಂಬುದು ಈಗ ಇತಿಹಾಸ. ಈ ದ್ವಾರದ ಹೊರಭಾಗದಲ್ಲಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಇರುವುದು ಮತ್ತೊಂದು ಧನಾತ್ಮಕ ಅಂಶವಾಗಿದೆ. ನಾಲ್ಕು ವರ್ಷದ ಕೆಳಗೆ ಮಾಡಿದ ಬದಲಾವಣೆಗೆ ಸಾರ್ವಜನಿಕರರು, ಸ್ಥಳೀಯರು ಹೊಂದಿಕೊಂಡಿದ್ದಾರೆ. ವ್ಯಾಪಾರ ಹಾಗೂ ವಾಣಿಜ್ಯ ವ್ಯವಹಾರಗಳು ಇದಕ್ಕೆ ತಕ್ಕಂತೆ ರೂಪುಗೊಂಡಿವೆ. ಈಗ ದಿಢೀರನೆ ಪ್ರವೇಶ ದ್ವಾರದ ಬದಲಾವಣೆಯ ಚಿಂತನೆ ಅವೈಜ್ಞಾನಿಕವಾಗಿದ್ದು, ಪರಂಪರೆಯನ್ನು ಮುಂದುವರಿಸುವ ಬದಲು ನಿರ್ಲಕ್ಷಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ವಿಶ್ವಪರಂಪರೆ ತಾಣಗಳ ಪಟ್ಟಿಗೆ ಶಾಶ್ವತವಾಗಿ ಸೇರಲ್ಪಡುತ್ತದೆ ಎಂದು ತಿಳಿದ ಬಳಿಕ ಕೇಂದ್ರ ಪುರಾತತ್ವ ವಿಭಾಗವು ಬದಲಾವಣೆ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ಉತ್ತರದ ದ್ವಾರವನ್ನು ಮುಚ್ಚಿ ಆಕರ್ಷಣೀಯವಾಗಿರುವ ದಕ್ಷಿಣ ದ್ವಾರವನ್ನು ತೆರೆದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ವಿವಿಧ ಸೂಚನಾ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಿ ಸಂವಹನ ಕೇಂದ್ರವನ್ನೂ ಸ್ಥಾಪಿಸಿದೆ. ದ್ವಾರದ ಹೊರಭಾಗದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು, ರಸ್ತೆಯು ಅಗಲವಾಗಿರುವುದರಿಂದ ಸುಗಮ ಸಂಚಾರಕ್ಕೆ ಅನುಕೂಲಕರವಾಗಿದೆ. ಆದರೆ, ಉತ್ತರ ದಿಕ್ಕಿನ ಪ್ರವೇಶ ಗೇಟ್ ಮುಖ್ಯ ರಸ್ತೆಗೇ ಹೊಂದಿಕೊಂಡಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳಿಗೆ ಕಾರಣವಾಗಿರುವ ಉದಾಹರಣೆಗಳಿವೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈಗಿರುವ ವ್ಯವಸ್ಥೆಯೇ ಸರಿಯಾದುದು ಎನ್ನುತ್ತಾರೆ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ಎಸ್.ಸುರೇಶ್.
ಕಿರಿದಾಗಿರುವ ವೃತ್ತ: ಹಾಸನ, ಹಗರೆ, ಬೇಲೂರು, ಬಾಣಾವರ ಪಟ್ಟಣದ ಕಡೆಯಿಂದ ಬರುವ ಎಲ್ಲ ವಾಹನಗಳೂ ಉತ್ತರದ ಗೇಟ್ ಬಳಿ ಇರುವ ಹೊಯ್ಸಳ ವೃತ್ತವನ್ನು ಬಳಸಿಯೇ ಸಾಗುತ್ತವೆ. ಈ ವೃತ್ತವೂ ಅತ್ಯಂತ ಚಿಕ್ಕದಾಗಿದ್ದು, ದೊಡ್ಡ ವಾಹನಗಳು ಬಳಸಿ ಸಾಗಲು ಹರಸಾಹಸಪಡಬೇಕಿದೆ. ಸರ್ಕಾರಿ ಹಾಗೂ ಬಸ್ ನಿಲ್ದಾಣವೂ ಉತ್ತರ ದ್ವಾರದ ಬಳಿಯೇ ಇದ್ದು, ಕೆಲವೊಮ್ಮೆ ಇದು ಆಟೋ ನಿಲ್ದಾಣವೂ ಆಗುತ್ತದೆ.
ಇದಲ್ಲದೆ, ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಹೋಗುವ ವಾಹನಗಳು ಹೊಯ್ಸಳ ವೃತ್ತದ ಮೂಲಕವೇ ಸಾಗಬೇಕಾಗುತ್ತದೆ. ವಾಹನಗಳು ಈ ವೃತ್ತದಲ್ಲೇ ಕ್ರಮಬದ್ಧವಾಗಿ ಚಲಿಸುವುದಿಲ್ಲ. ಕೆಲವರು ವೃತ್ತವನ್ನು ಬಳಸಿ ಸಾಗಿದರೆ, ಕೆಲ ವಾಹನಗಳು ಮುಂಚೆಯೇ ತಿರುವು ಪಡೆಯುತ್ತವೆ. ಬಹು ಚಕ್ರಗಳ ದೊಡ್ಡ ವಾಹನಗಳಂತೂ ದೇಗುಲ ಪ್ರವೇಶ ದ್ವಾರಕ್ಕೆ ಗುದ್ದುವಂತೆಯೇ ಸಾಗುತ್ತವೆ. ಇದರ ನಡುವೆ ಕಿರಿದಾಗಿರುವ ದೇಗುಲದ ಪ್ರವೇಶ ದ್ವಾರವು ಪ್ರವಾಸಿಗರಿಗೆ ಗೋಚರವಾಗುವುದೇ ಕಷ್ಟವಾಗಿದ್ದು, ಸುರಕ್ಷತೆ ಬಗ್ಗೆಯೂ ಕಳವಳ ಮೂಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಸ್ತುತ ಸುರಕ್ಷತೆ ಹಾಗೂ ನಿರ್ವಹಣೆ ದೃಷ್ಟಿಯಿಂದ ಉತ್ತಮವಾಗಿರುವ ದಕ್ಷಿಣ ದ್ವಾರದ ಪ್ರವೇಶವನ್ನೇ ಮುಂದುವರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಉತ್ತರದ ಪ್ರವೇಶದಲ್ಲಿ ವಾಹನ ನಿಲ್ಲಿಸಲು ಸ್ಥಳವೇ ಇಲ್ಲ: ದಕ್ಷಿಣ ದಿಕ್ಕಿಗೆ ಸಾರ್ವಜನಿಕರ ಪ್ರವೇಶವನ್ನು ಬದಲಾಯಿಸುವುದಕ್ಕೂ ಮುನ್ನ ಅಲ್ಲಿ ಅನೈತಿಕ ಕೃತ್ಯಗಳ ಎಗ್ಗಿಲ್ಲದೆ ನಡೆಯುತ್ತಿದ್ದವು. ಕುಡಿತ, ಮೋಜು, ಮಸ್ತಿಗೆ ಅರ್ಧ ರಾತ್ರಿವರೆಗೂ ನಡೆಯುತ್ತಿತ್ತು. ಸರಿಯಾದ ದೀಪದ ವ್ಯವಸ್ಥೆಯೂ ಇರಲಿಲ್ಲ. ಸಂಚಾರ ರಸ್ತೆಯೂ ಕಿರಿದಾಗಿತ್ತು. ಆದರೆ, ನಾಲ್ಕು ವರ್ಷದ ಹಿಂದ ಮುಖ್ಯ ಪ್ರವೇಶವನ್ನು ದಕ್ಷಿಣಕ್ಕೆ ಬದಲಾಯಿಸುವ ನಿರ್ಧಾರ ತೆಗೆದುಕೊಂಡ ಬಳಿಕ ಒಂದೊಂದೇ ಅಭಿವೃದ್ಧಿ ಕಾರ್ಯಗಳು ನಡೆದವು. ರಸ್ತೆ ವಿಸ್ತರಣೆ, ಬೀದಿ ದೀಪ ಅಳವಡಿಕೆ, ವಿಶಾಲವಾಗದ ಮೈದಾನಕ್ಕೆ ಹೈಮಾಸ್ಟ್ ದೀಪ ಅಳವಡಿಸುವ ಮೂಲಕ ವಾಹನ ನಿಲುಗಡೆಗೆ ಅನುಕೂಲ ಕಲ್ಪಿಸಲಾಯಿತು. ಆದರೆ, ಉತ್ತರ ದ್ವಾರದ ಬಳಿ ಇಂತಹ ಯಾವುದೇ ಸೌಲಭ್ಯ ಇಲ್ಲವಾಗಿದ್ದು, ಪ್ರವಾಸಿಗರು ಸಾರ್ವಜನಿಕ ರಸ್ತೆಯಲ್ಲೇ ವಾಹನ ನಿಲುಗಡೆ ಮಾಡಬೇಕು. ಇದು, ಕೆಲವೊಮ್ಮೆ ಸ್ಥಳೀಯರು ಹಾಗೂ ಪ್ರವಾಸಿಗರ ನಡುವೆ ಸಂಘರ್ಷಕ್ಕೂ ಕಾರಣವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಉದಾಹರಣೆಯೂ ಇದೆ. ಇನ್ನು ಶಾಲಾ ಮಕ್ಕಳ ಪ್ರವಾಸದ ಸಂದರ್ಭದಲ್ಲಿ ನೂರಾರು ಬಸ್ ಆಗಮಿಸುವುದರಿಂದ ಪಾಕಿರ್ಂಗ್ ಸ್ಥಳವಿಲ್ಲದೆ ಗೊಂದಲ ಉಂಟಾಗುತ್ತದೆ. ಇವೆಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಪ್ರವೇಶ ದ್ವಾರ ಬದಲಾವಣೆ ಮಾಡುವುದು ಉಚಿತವಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ನಾಲ್ಕು ವರ್ಷದ ಹಿಂದೆ ಪುರಾತತ್ವ ವಿಭಾಗವು ದಕ್ಷಿಣ ದಿಕ್ಕಿಗೆ ಸಾರ್ವಜನಿಕ ಪ್ರವೇಶವನ್ನು ಬದಲಾಯಿಸಿದಾಗ ಅದಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಯಿತು. ಹಾಳು ಬಿದ್ದಿದ್ದ ಶೌಚಗೃಹವನ್ನು ನವೀಕರಿಸಿ ಸಾರ್ವಜನಿಕ ಬಳಕೆಗೆ ತೆರೆದಿಟ್ಟಿದ್ದೇವೆ. ಹೈಮಾಸ್ಟ್ ಲೈಟ್ ಸರಿಪಡಿಸಿ, ಪಾಕಿರ್ಂಗ್ ಜಾಗಕ್ಕೆ ಸುರಕ್ಷತೆ ಕಲ್ಪಿಸಲಾಗಿದೆ. ಪ್ರವಾಸಿಗರ ವಾಹನವಲ್ಲದೆ ಇನ್ನಿತರ ಸಾರ್ವಜನಿಕರ ವಾಹನಗಳ ಸಂಚಾರ ಇಲ್ಲಿ ಇರುವುದಿಲ್ಲ. ಹಾಗಾಗಿ, ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸಬೇಕು.
ಎಚ್.ಆರ್.ಮಧು ಮಾಜಿ ಅಧ್ಯಕ್ಷ, ಹಳೇಬೀಡು ಗ್ರಾಮ ಪಂಚಾಯಿತಿ
ದ್ವಾರ ಬದಲಾವಣೆ ಬಗ್ಗೆ ಮೇಲಧಿಕಾರಿಗಳು ಮೌಖಿಕವಾಗಿ ಮಾತನಾಡಿದ್ದರಷ್ಟೆ. ಉತ್ತರ ದಿಕ್ಕಿನ ಗೇಟನ್ನು ಗಣ್ಯಾತಿಗಣ್ಯರ ಪ್ರವೇಶಕ್ಕೆ ಸೀಮಿತಗೊಳಿಸಿ, ದಕ್ಷಿಣ ದ್ವಾರವನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗಿತ್ತು. ಅಲ್ಲಿನ ಕಳೆ ಗಿಡಗಳನ್ನು ತೆಗೆಸಿ ಸ್ವಚ್ಛಗೊಳಿಸಲಾಗಿದೆ. ಪ್ರವೇಶ ದ್ವಾರ ಬದಲಾವಣೆ ಸಂಬಂಧಿಸಿದಂತೆ ಆದೇಶ ಬಂದರೆ ಅದರಂತೆ ಕ್ರಮ ವಹಿಸಬೇಕಾಗುತ್ತದೆ.
ಸುನೀಲ್ ಸ್ಮಾರಕ ಸಂರಕ್ಷಣಾಧಿಕಾರಿ, ಕೇಂದ್ರ ಪುರಾತತ್ವ ವಿಭಾಗ
ಈಗಿರುವ ದಕ್ಷಿಣ ದ್ವಾರವೇ ಹೊಯ್ಸಳರ ಕಾಲದಲ್ಲಿ ರಾಜದ್ವಾರ ಹಾಗೂ ಸಾರ್ವಜನಿಕ ಪ್ರವೇಶ ದ್ವಾರವೂ ಆಗಿತ್ತೆಂದು ಇಲ್ಲಿನ ಇತಿಹಾಸ ಹಾಗೂ ಶಾಸನಗಳಿಂದ ತಿಳಿಯುತ್ತದೆ. ವಿಷ್ಣುವರ್ಧನ ರಾಜನ ನಂತರ ಬಂದಂತಹ ಎಲ್ಲ ಅರಸರೂ ಇದೇ ದ್ವಾರದಲ್ಲಿ ಆಗಮಿಸುತ್ತಿದ್ದರಲ್ಲದೆ, ಮೊದಲಿಗೆ ಗಣಪತಿ ಅನಂತರ ಹೊಯ್ಸಳ ಲಾಂಛನಕ್ಕೆ ನಮಿಸಿ ಮುಂದುವರಿಯುತ್ತಿದ್ದರು ಎಂದು ಅನೇಕ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಯಥಾಸ್ಥಿತಿ ಕಾಪಾಡುವುದೇ ಸರಿಯಾದ ನಿರ್ಧಾರ.
ಶಶಿಧರ್ ಇತಿಹಾಸ ತಜ್ಞ, ಬೆಂಗಳೂರು