ದೊಡ್ಡಬಳ್ಳಾಪುರದ ಬೆಸ್ಕಾಂ ಕಚೇರಿ ಆವರಣದಲ್ಲಿ ಬೆಸ್ಕಾಂ ಖಾಸಗೀಕರಣ ವಿರೋಧಿಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಬೆಸ್ಕಾಂ ಎಇ ಚಂದ್ರಶೇಖರ್, ಎಇಇ ಮಂಜುನಾಥ್ (ಗ್ರಾಮೀಣ), ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಯ ಕುಮಾರ್ (ನಗರ ಉಪ ವಿಭಾಗ ), ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಆನಂದ್, ಸಂಘಟನಾ ಕಾರ್ಯದರ್ಶಿ ಲೋಕೇಶ್ ನಾಯಕ್, ಕೇಂದ್ರ ಕಾರ್ಯ ಸಮಿತಿ ಸದಸ್ಯ ಮುತ್ತುರಾಜ್ ಹಾಗೂ ಇತರರು ಇದ್ದರು.
ದೊಡ್ಡಬಳ್ಳಾಪುರ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ)ವನ್ನು ಖಾಸಗೀಕರಣದ ಹೆಸರಿನಲ್ಲಿ ಕಂಪನಿಯೊಂದು ಆಕ್ರಮಿಸಲು ಮುಂದಾಗಿರುವುದನ್ನು ಖಂಡಿಸಿ ಬೆಸ್ಕಾಂ ಸಿಬ್ಬಂದಿ, ವಿದ್ಯುತ್ ಗುತ್ತಿಗೆದಾರ ಸಂಘದಿಂದ ಸೋಮವಾರ ನಗರ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್ ಮಾತನಾಡಿ, ಬೆಸ್ಕಾಂ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ವಿದ್ಯುತ್ ಸರಬರಾಜು ಮಾಡುತ್ತಿದೆ. ಆದರೆ ಈಗ ಏಕಾಏಕಿ ಖಾಸಗಿಯವರು ವಿದ್ಯುತ್ ಸರಬರಾಜು ಕಂಪನಿಯನ್ನು ಕಸಿದುಕೊಂಡು ಸಂಪೂರ್ಣ ಬಿಜಿನೆಸ್ ಮಾಡಲು ಹೊರಟಿದ್ದಾರೆ. ಸಾರ್ವಜನಿಕ ಸೇವೆಯಾಗಿದ್ದ ಕಂಪನಿ ಖಾಸಗಿಯವರ ಪಾಲಾದರೆ ಸಂಪೂರ್ಣ ವ್ಯವಹಾರಿಕವಾಗಿ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗುವುದು ಖಚಿತ. ಬೆಸ್ಕಾಂ ಸಿಬ್ಬಂದಿಯಾದ ನಾವು ಇಷ್ಟು ವರ್ಷ ಸಾರ್ವಜನಿಕ ಸೇವೆಯಲ್ಲಿ ಲಾಭ&ನಷ್ಟ ಲೆಕ್ಕಿಸದೆ ನಿರಂತರ ಸೇವೆ ಒದಗಿಸುತ್ತಿದ್ದೇವೆ. ಆದರೆ ಈ ವಲಯಕ್ಕೂ ಈಗ ಖಾಸಗಿ ಕಂಪನಿಗಳು ಲಗ್ಗೆ ಇಟ್ಟಿವೆ. ಒಂದು ವೇಳೆ ಬೆಸ್ಕಾಂ ಖಾಸಗಿ ಕಂಪನಿಗಳ ಪಾಲಾದರೆ ಕೇವಲ ಹಣ ಗಳಿಸುವ ಉದ್ದೇಶದಿಂದ ಬರುವ ಕಂಪನಿಗಳು ಲಾಭಕ್ಕಾಗಿ ಸಾರ್ವಜನಿಕರನ್ನು ಇಲ್ಲಸಲ್ಲದ ನೆಪಹೇಳಿ ತೊಂದರೆಗೆ ಸಿಲುಕಿಸುತ್ತವೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಶಂಕೆ ವ್ಯಕ್ತಪಡಿಸಿದರು.
ಕರುನಾಡು ರಾಷ್ಟ್ರೀಯ ಸೇನೆ ಅಧ್ಯಕ್ಷ, ವಿದ್ಯುತ್ ಗುತ್ತಿಗೆದಾರ ಬಿ.ಶಿವಶಂಕರ್ ಮಾತನಾಡಿ, ರಾಜಕೀಯ ನಾಯಕರು ವಿಮಾನ, ರಸ್ತೆ, ಆಸ್ಪತ್ರೆ, ಶಾಲೆಗಳು ಹೀಗೆ ಎಲ್ಲ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಿ ಲೂಟಿ ಮಾಡಿದರು. ಇದೀಗ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಬೆಸ್ಕಾಂ ಅನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ. ಜನ ಮನ್ನಣೆ ಪಡೆಡಿರುವ ಬೆಸ್ಕಾಂ ಅನ್ನು ಖಾಸಗಿ ಕಂಪನಿಯೊಂದರು ಸ್ವಾಧಿನ ಪಡೆಯಲು ಮುಂದಾಗಿದೆ. ಸಾರ್ವಜನಿಕ ಸೇವೆ ಒದಗಿಸುವ ಕಂಪನಿಗಳು ಖಾಸಗಿಯವರ ಸ್ವತ್ತಾದರೆ ಸದಾ ಲಾಭದ ಬಗ್ಗೆ ಚಿಂತಿಸುತ್ತವೆ ವಿನಾ ಸೇವೆ ಒದಗಿಸುವ ಮಾತೇಲ್ಲಿ?. ಆದ್ದರಿಂದ ಯಾವುದೇ ಕಾರಣಕ್ಕೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ, ಖಾಸಗೀಕರಣವಾಗಲು ಬಿಡುವುದಿಲ್ಲ ಎಂದು ಹೇಳಿದರು.