ಹೊಸಕೋಟೆ ದೊಡ್ಡಗಟ್ಟಿಗನಬ್ಬೆ ರಸ್ತೆಯ ಮೋರ್ ಕಾಲೇಜು ರಸ್ತೆಯಲ್ಲಿ ಕಣ್ಣೂರಳ್ಳಿ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಿ ವಾಹನ ಸವಾರರಿಗೆ ಮೈಕ್ ಮೂಲಕ ಡಿವೈಎಸ್ಪಿ ಮಲ್ಲೇಶ್ ಜಾಗೃತಿ ಮೂಡಿಸಿದರು.
ಹೊಸಕೋಟೆ : ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರಸಿಕ್ಕು ಹೆಚ್ಚಾಗುತ್ತಿದ್ದು, ಪ್ರಾಯೋಗಿಕವಾಗಿ ನಗರದ ಕೆಲ ರಸ್ತೆಗಳನ್ನು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸಂಚಾರ ದಟ್ಟಣೆ ನಿಯಂತ್ರಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೊಸಕೋಟೆ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ತಿಳಿಸಿದರು.
ಕೆಇಬಿ ವೃತ್ತದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ರಸ್ತೆ (ದೊಡ್ಡಗಟ್ಟಿಗನಬ್ಬೆ ರಸ್ತೆ) ವಾಹನ ದಟ್ಟಣೆಯಿಂದ ಕೂಡಿದೆ. ಇದಕ್ಕೆ ಕಾರಣ ಕಾಲೇಜು ರಸ್ತೆಯ ಗಂಗಮ್ಮಗುಡಿ ರಸ್ತೆ, ಕಣ್ಣೂರಳ್ಳಿ ರಸ್ತೆ ಹಾಗೂ ಪ್ರವಾಸಿ ಮಂದಿರ ರಸ್ತೆಯಿಂದ ಕಣ್ಣುರಳ್ಳಿ ರಸ್ತೆಗೆ ಸಂಪರ್ಕಿಸುವ ರಸ್ತೆಗಳಾಗಿವೆ, ಈ ರಸ್ತೆಗಳಲ್ಲಿ ದ್ವಿಮುಖ ಸಂಚಾರದಿಂದಲೇ ಕಾಲೇಜು ರಸ್ತೆಯಲ್ಲಿ ಹೆಚ್ಚು ದಟ್ಟಣೆ ಆಗುತ್ತಿದೆ. ಆದ್ದರಿಂದ ನಗರದಲ್ಲಿ ಸಂಚಾರಸಿಕ್ಕು ಹೆಚ್ಚಿರುವ ಕಡೆ ಏಕಮುಖ ಸಂಚಾರ ಜಾರಿಗೊಳಿಸಲಾಗಿದೆ ಎಂದು ಡಿವೈಎಸ್ಪಿ ತಿಳಿಸಿದರು.
ಕೆಲವು ದಿನ ಪ್ರಾಯೋಗಿಕವಾಗಿ ಏಕಮುಖ ಸಂಚಾರ ಜಾರಿ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ. ರಸ್ತೆಯಲ್ಲಿ ತೊಡಕು ಕಂಡು ಬಂದಲ್ಲಿ ಅದನ್ನು ಬಗೆಹರಿಸಿ ಗೆಜೆಟ್ ನೋಟಿಫಿಕೇಶನ್ ಜಾರಿ ಮಾಡಲಾಗುವುದು ಎಂದರು. ಏಕಮುಖ ಸಂಚಾರದಿಂದಷ್ಟೇ ವಾಹನ ದಟ್ಟಣೆ ನಿವಾರಣೆ ಆಗುವುದಿಲ್ಲ. ಜತೆಗೆ ುಟ್ಪಾತ್ ಅಂಗಡಿಗಳನ್ನು ಸಂಪೂರ್ಣ ತೆರವುಗೊಳಿಸಲಾಗುವುದು. ನಗರದಲ್ಲಿ ಕೆಲವರು ಅಂಗಡಿ ಮುಂದೆ ಪುಟ್ಪಾತ್ ಅಂಗಡಿಗಳು ಹೆಚ್ಚುವರಿಯಾಗಿ ಇಟ್ಟುಕೊಂಡಿರುವುದು ಹಾಗೂ ಪುಟ್ಪಾತ್ ಪಕ್ಕದ ವಾಹನ ಪಾರ್ಕಿಂಗ್ಗಳನ್ನು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದ್ದು, ತೆರವು ಮಾಡಲಾಗುತ್ತಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಇದರ ಬಗ್ಗೆ ಸೂಚನೆ ಸಲಹೆಗಳನ್ನು ಮುಕ್ತವಾಗಿ ನೀಡಬಹುದು ಎಂದರು.
ಏಕಮುಖ ಸಂಚಾರ ರಸ್ತೆಗಳು : * ಕಾಲೇಜು ರಸ್ತೆಯಿಂದ ಗಂಗಮ್ಮನ ಗುಡಿ ರಸ್ತೆಯಲ್ಲಿ ಹಾದು ಓಂ ಸರ್ಕಲ್ ಮೂಲಕ ಕಣ್ಣುರಹಳ್ಳಿ ರಸ್ತೆಗೆ ಸಂಪರ್ಕ.
* ಕಣ್ಣೂರಹಳ್ಳಿಯಿಂದ ಕಾಲೇಜು ರಸ್ತೆಗೆ ಸಂಪರ್ಕಿಸಲು ವಿವೇಕಾನಂದ ಶಾಲೆ ರಸ್ತೆ.
* ಪ್ರವಾಸಿ ಮಂದಿರದ ಕೋರ್ಟ್ ಹಿಂಭಾಗದ ರಸ್ತೆ ಮೋರ್ ವೃತ್ತಕ್ಕೆ ಸಂಪರ್ಕಿಸುವುದು ಏಕಮುಖ ಸಂಚಾರ.
* ಪ್ರವಾಸಿ ಮಂದಿರ ರಸ್ತೆಯಿಂದ ಕೆಇಬಿ ವೃತ್ತ.
* ಪೊಲೀಸ್ ಠಾಣೆಯಿಂದ ಕೆಇಬಿ ವೃತ್ತ.
* ಕೆ.ಆರ್.ರಸ್ತೆಯಿಂದ ತಮ್ಮೇಗೌಡ ಬಡಾವಣೆಯ ಮೊದಲ ಮುಖ್ಯ ರಸ್ತೆ (ಚಿಕ್ಕೇಗೌಡ ಕಲ್ಯಾಣ ಮಂಟಪ ರಸ್ತೆ) ಯಿಂದ ಸೂಲಿಬೆಲೆ ರಸ್ತೆ.