ಬೆಂಗಳೂರು: ಗ್ರಾಮೀಣ, ಅರೆ-ನಗರ ಪ್ರದೇಶಗಳಲ್ಲಿ ಸಾಲದ ಜತೆ ಬ್ಯಾಂಕಿಂಗ್ ಸೇವೆ ನೀಡುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಸೊಸೈಟಿ) ತೆರೆಯುವ ಜತೆಗೆ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಪ್ರತ್ಯೇಕವಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ) ಆರಂಭಕ್ಕೆ ಸರ್ಕಾರ ಮುಂದಾಗಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿ ವಿಜಯವಾಣಿ ಸಂವಾದದಲ್ಲಿ ಪಾಲ್ಗೊಂಡು ಈ ಕುರಿತು ಮಾಹಿತಿ ಹಂಚಿಕೊಂಡರು. ಒಂದೊಮ್ಮೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6ಕ್ಕಿಂತ ಹೆಚ್ಚು ಹಳ್ಳಿಗಳಿದ್ದರೆ ಮತ್ತು ಪಂಚಾಯಿತಿಯ ವ್ಯಾಪ್ತಿ 7 ಕಿ.ಮೀ. ಮೀರಿದ್ದರೆ ಅಂತಹ ಕಡೆಗಳಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಮತ್ತೊಂದು ಶಾಖೆಗೆ ಅವಕಾಶ ಕಲ್ಪಿಸುವುದರ ಬಗ್ಗೆಯೂ ನಿರ್ಧಾರ ಮಾಡಿರುವುದಾಗಿ ಸಚಿವರು ಹೇಳಿದರು.
ಕೃಷಿ, ಹೈನುಗಾರಿಕೆ, ತೋಟಗಾರಿಕೆ ಮತ್ತು ಕೃಷಿ ಅವಲಂಬಿತ ಕೈಗಾರಿಕೆಗಳಿಗೆ ಸಾಲ ನೀಡಲು ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಸೊಸೈಟಿ) ತೆರೆಯಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ ಜಿಲ್ಲಾ ಕೇಂದ್ರಗಳಲ್ಲೂ ಪ್ರತ್ಯೇಕ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ವಿಜಯವಾಣಿ ಸಂವಾದದಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ ಹೊಸ ಯೋಜನೆಗಳ ಮಾಹಿತಿ ಬಿಚ್ಚಿಟ್ಟರು. ತಳಮಟ್ಟದಿಂದಲೂ ಸಹಕಾರ ಬ್ಯಾಂಕ್ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ 6ಕ್ಕಿಂತ ಹೆಚ್ಚು ಹಳ್ಳಿಗಳು ಮತ್ತು ಗ್ರಾಪಂಗೆ 7 ಕಿ.ಮೀ ದೂರ ಇದ್ದರೆ ಅಂತಹ ಕಡೆಗಳಲ್ಲಿ ಮತ್ತೊಂದು ಶಾಖೆಗೆ ಅವಕಾಶ ಕಲ್ಪಿಸುವುದರ ಬಗ್ಗೆಯೂ ನಿರ್ಧರಿಸಿರುವುದಾಗಿ ಹೇಳಿದರು.
ಡಿಸಿಸಿ ಬ್ಯಾಂಕ್ಗಳಲ್ಲಿ 7 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದ್ದು, ಪ್ರಯತ್ನಿಸಿದರೆ 10 ಸಾವಿರ ಕೋಟಿ ರೂ. ಆಗಲಿದೆ. ಅದಕ್ಕೂ ಮೊದಲು ಸಾರ್ವಜನಿಕರಲ್ಲಿ ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಹೊಸ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಕೃಷಿ ಕ್ಷೇತ್ರದಲ್ಲಿ ಸಾಲ ವಸೂಲಾತಿ (ಡೆತ್ ಕೇಸ್ ಹೊರತುಪಡಿಸಿ) ಶೇ.100 ಇದೆ. ಮರಣ ಹೊಂದಿದವರ ವಾರಸುದಾರರು ಸಾಲ ಮರು ಪಾವತಿಸಿ ಹೊಸ ಸಾಲ ಪಡೆಯುತ್ತಿದ್ದಾರೆಂದರು. ಕೃಷಿ ಕ್ಷೇತ್ರದಲ್ಲಿ ಶೇ.100 ವಸೂಲಾತಿಗೆ, ಅವಧಿ ಪೂರ್ವ ಮರುಪಾವತಿ ಮಾಡಿದರೆ ಶೂನ್ಯ ಬಡ್ಡಿ ಸಿಗಲಿದೆ ಎಂಬ ನಿರ್ದೇಶನವೇ ಕಾರಣವಾಗಿದೆ. ಅವಧಿ ಮುಗಿದ ಮೇಲೆ ಬಂದರೆ ಶೇ.12 ಬಡ್ಡಿ ಪಾವತಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮರುಪಾವತಿ ಮಾಡಿ ಹೊಸ ಸಾಲ ಪಡೆಯುತ್ತಿದ್ದಾರೆ ಎಂದರು.
ಗದಗ, ಹಾವೇರಿ, ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಬ್ಯಾಂಕ್: ಡಿಸಿಸಿ ಬ್ಯಾಂಕ್ಗಳ ಸಂಬಂಧ ವಿಭಾಗವಾರು ಸಭೆ ಕರೆಯಲಾಗಿದೆ. ಇತ್ತೀಚೆಗೆ ಬೆಳಗಾವಿ ವಿಭಾಗದ ಸಭೆ ಮುಕ್ತಾಯವಾಗಿದೆ. ಬೆಳಗಾವಿ ವಿಭಾಗದಲ್ಲಿ ಧಾರವಾಡ ಹೊರತುಪಡಿಸಿದರೆ ಉಳಿದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಉತ್ತಮವಾಗಿ ನಡೆಯುತ್ತಿವೆ. ಧಾರವಾಡ ಬ್ಯಾಂಕ್ ನಷ್ಟದಲ್ಲಿದ್ದು, ಸುಧಾರಣೆ ಸಾಧ್ಯವಾಗಿಲ್ಲ. ಆದ್ದರಿಂದ ಎರಡೆರಡು ಜಿಲ್ಲೆ ಒಟ್ಟಾಗಿರುವ ಬ್ಯಾಂಕ್ಗಳನ್ನು ಪ್ರತ್ಯೇಕಿಸಲಾಗುವುದು. ಗದಗ ಮತ್ತು ಹಾವೇರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆಗೆ ನಿರ್ಧರಿಸಲಾಗಿದೆ. ಕೋಲಾರದಿಂದ ಪ್ರತ್ಯೇಕಿಸಿ ಚಿಕ್ಕಬಳ್ಳಾಪುರ, ಮೈಸೂರಿನಿಂದ ಪ್ರತ್ಯೇಕಿಸಿ ಚಾಮರಾಜನಗರ ಡಿಸಿಸಿ ಬ್ಯಾಂಕ್ ಮಾಡಲಾಗುವುದು. ಹೊಸದಾಗಿ ಕೊಪ್ಪಳಕ್ಕೆ ಪ್ರತ್ಯೇಕ ಬ್ಯಾಂಕ್ ತೆರೆಯಲಾಗುತ್ತಿದೆ ಎಂದರು.
ಯಶಸ್ವಿನಿಗೆ ಹೊಸ ಚೈತನ್ಯ
ಯಶಸ್ವಿನಿ ಕಾರ್ಡ್ಗೆ ಹೆಚ್ಚಿನ ಸೌಲಭ್ಯ ಅಳವಡಿಸಲು ನಿರ್ಧರಿಸಲಾಗಿದೆ. ಆಯುಷ್ಮಾನ್ ಕಾರ್ಡ್ನಲ್ಲಿ ಯಾವ ಸೌಲಭ್ಯ ಸಿಗುವುದಿಲ್ಲವೋ ಆ ಚಿಕಿತ್ಸೆಯನ್ನು ನೀಡುವುದು. ಡಯಾಲಿಸಿಸ್ಗೆ ಖಾಸಗಿ ಆಸ್ಪತ್ರೆಗಳ ಜತೆಗೂ ಒಪ್ಪಂದ ಮಾಡಿಕೊಂಡು ಬೆಲೆ ನಿಗದಿ ಮಾಡಿ ಅಗತ್ಯ ಇರುವ ಅನುದಾನದ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸುವುದಾಗಿ ಸವದಿ ತಿಳಿಸಿದ್ದಾರೆ.
ಎಸ್ಪಿ ದರ್ಜೆ ಅಧಿಕಾರಿ ಕಾವಲು
ಕಬ್ಬು ತೂಕ ಮಾಡುವಾಗ ಯಂತ್ರದಲ್ಲಿ ರೈತರಿಗೆ ಮೋಸ ಮಾಡುವ ಬೃಹತ್ ಜಾಲವೇ ಇದೆ. ವೇಬ್ರಿಡ್ಜ್ ಯಂತ್ರಗಳನ್ನು ಪೂರೈಸುವ ಗುತ್ತಿಗೆದಾರನಿಂದ ತೂಕ ಮಾಡುವ ಮಾಲೀಕ ಮತ್ತು ಸಕ್ಕರೆ ಕಾರ್ಖಾನೆ ಜತೆಗೆ ಒಬ್ಬನೇ ಏಜೆಂಟ್ ದಂಧೆ ನಡೆಸುತ್ತಾನೆ. ವೇಬ್ರಿಡ್ಜ್ ಯಂತ್ರದಲ್ಲಿ ಡಿಜಿಟಲ್ ಮೀಟರ್ಗೆ ಸಣ್ಣದೊಂದು ಮಿಷನ್ ಅಳವಡಿಸಿ ಮೋಸ ಮಾಡುತ್ತಾರೆ. ಒಮ್ಮೆ ತೂಕ ಮಾಡಿಸಿಕೊಂಡು ಹೋದ ಕಬ್ಬಿನ ಲಾರಿಯ ನಂಬರ್ ಕಾರ್ಖಾನೆಗೆ ರವಾನೆ ಆಗಲಿದೆ. ಅಲ್ಲಿಯೂ ಅಷ್ಟೇ ತೂಕ ಬರುವಂತೆ ಫಿಕ್ಸ್ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಇಡೀ ರಾಜ್ಯಕ್ಕೆ ಎಸ್ಪಿ ದರ್ಜೆ ಅಧಿಕಾರಿಯನ್ನು ನೇಮಿಸಲು ನಿರ್ಧರಿಸಲಾಗಿದೆ ಎಂದು ಲಕ್ಷ್ಮಣ ವಿವರಿಸಿದರು.
ಸಕ್ಕರೆ ಕಾರ್ಖಾನೆಯಿಂದ ಅಲ್ಪ ನಷ್ಟ
ರಾಜ್ಯದಲ್ಲಿ 81 ಖಾಸಗಿ ಮತ್ತು ಸಹಕಾರ ಕ್ಷೇತ್ರದ ಸಕ್ಕರೆ ಕಾರ್ಖಾನೆಗಳು ನಡೆಯುತ್ತಿವೆ. ಇದರಲ್ಲಿ 4-5 ಕಾರ್ಖಾನೆಯಿಂದ 400 ರಿಂದ 500 ಕೋಟಿ ರೂ. ಸಾಲ ಬಾಕಿ ಉಳಿದಿದೆ. ಎನ್ಸಿಆರ್ಟಿ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇಂದಲ್ಲಾ ನಾಳೆ ಹಣ ವಸೂಲಿ ಆಗಲಿದೆ ಎಂದರು.
ನೇಮಕಾತಿಯಲ್ಲಿ ಪಾರದರ್ಶಕತೆ
ಯಾವ ಸಹಕಾರ ಸಂಘ ಬ್ಯಾಂಕಿಗೆ ಎಷ್ಟು ಹುದ್ದೆಗಳ ನೇಮಕಾತಿ ಬೇಕು ಎಂಬ ಮಾಹಿತಿ ಕೊಟ್ಟು ಅಧಿಸೂಚನೆ ಹೊರಡಿಸಬೇಕು. ಪ್ರಶ್ನೆ ಪತ್ರಿಕೆ ಸಿದ್ಧತೆ, ಪರೀಕ್ಷಾ ಕೇಂದ್ರ ನಿಗದಿ ಸೇರಿ ಎಲ್ಲವನ್ನೂ ಸಹಕಾರ ಇಲಾಖೆ ನಿರ್ವಹಿಸಲಿದೆ. ಪರೀಕ್ಷೆ ನಡೆದ 1 ತಾಸಿನಲ್ಲಿ ಸರಿಯಾದ ಉತ್ತರ ಮತ್ತು ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿಸಲಾಗುತ್ತದೆ. ಅಭ್ಯರ್ಥಿಗಳೇ ನೇರವಾಗಿ ಒಎಂಆರ್ ಶೀಟ್ ತೆರೆದು ಕೀ ಉತ್ತರ ನೋಡಿಕೊಳ್ಳಬೇಕು. ಇದಾದ ಮೇಲೆ 1/5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆದು ನೇಮಕಾತಿ ಪೂರ್ಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಸವದಿ ವಿವರಿಸಿದರು.
ಠೇವಣಿದಾರರಿಗೆ ವಿಮಾ ಸೌಲಭ್ಯಕ್ಕೆ ನಿರ್ಧಾರ
ಠೇವಣಿ ಮೇಲಿನ ಬಡ್ಡಿ ಶೇ.10ಕ್ಕಿಂತ ಹೆಚ್ಚು ನೀಡಬಾರದು. ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಶೇ.8 ಬಡ್ಡಿ ನೀಡುತ್ತಿದ್ದಾರೆ. ಸಹಕಾರದಲ್ಲಿ ಅವರಿಗಿಂತ ಹೆಚ್ಚು ಕೊಡುತ್ತಾರೆ ಎಂದು ಜನ ಬರುತ್ತಾರೆ. ಶೇ.10ಕ್ಕಿಂತ ಹೆಚ್ಚು ಕೊಡಬಾರದು. ಒಂದು ವರ್ಷಕ್ಕೆ ಇಟ್ಟರೆ ಶೇ.8, ಎರಡು ವರ್ಷಕ್ಕೆ ಶೇ. 9, ಐದು ವರ್ಷಕ್ಕೆ ಶೇ.10 ಬಡ್ಡಿ ನೀಡಲಾಗುತ್ತದೆ. ಇದಕ್ಕೆ ಅಗತ್ಯ ಕಾನೂನು ತರಲಾಗಿದೆ. ಕೆಲವರು ಇದನ್ನು ಪ್ರಶ್ನಿಸಿ ಕೋರ್ಟ್ಗೆ ಹೋಗಿದ್ದಾರೆ. ಅದಕ್ಕೂ ಮೊದಲು ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ. ಠೇವಣಿದಾರರಿಗೆ ಸುರತೆ ನೀಡುವ ಸಲುವಾಗಿ ವಿಮಾ ಸೌಲಭ್ಯ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಆಕಸ್ಮಿಕವಾಗಿ ಹಗರಣ ನಡೆದು ಸಾಲ ಮರುಪಾವತಿ ಆಗದಿದ್ದರೆ ಠೇವಣಿದಾರರಿಗೆ ಸುರತೆ ತರಲಾಗುತ್ತಿದೆ. ಅದಕ್ಕಾಗಿ ವಿಶೇಷ ಕಾಯ್ದೆ ತರಲು ಸಿದ್ಧತೆ ನಡೆದಿದೆ. ವಿಮಾ ಕಡ್ಡಾಯ ಮಾಡಲಾಗಿದೆ ಎಂದರು.
ಆಡಿಟ್ ಜತೆಗೆ ಉದ್ಯೋಗ ಸೃಷ್ಟಿ
ಸಹಕಾರ ಸಂಘಗಳ ಬ್ಯಾಂಕ್ಗಳಲ್ಲಿ ಪ್ರತಿ ವರ್ಷ ಲೆಕ್ಕಪರಿಶೋಧಕರು ಮತ್ತು 3 ವರ್ಷಕ್ಕೊಮ್ಮೆ ಸರ್ಕಾರಿ ಅಧಿಕಾರಿಗಳು ಆಡಿಟ್ ಮಾಡಬೇಕೆಂಬ ಕಾನೂನು ಇದೆ. ಸಿಎಗಳು ಸಂಘಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಕ್ರಮಗಳನ್ನು ಮುಚ್ಚಿ ಹಾಕುತ್ತಾರೆ. ಸರ್ಕಾರಿ ಅಧಿಕಾರಿಗಳ ಕೊರತೆ ಇದೆ. ಡಿಪ್ಲೊಮಾ, ಬಿಕಾಂ, ಬಿಬಿಎ, ಎಂಬಿಎ ಪದವೀಧರರಿಗೆ 6 ತಿಂಗಳು ಡಿಪ್ಲೊಮಾ ಕೋರ್ಸ್ ತರಬೇತಿ ಕೊಟ್ಟು ಅವರ ಕಡೆಯಿಂದ ಆಡಿಟ್ ಮಾಡಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು. ಪ್ರಸ್ತುತ 8 ತರಬೇತಿ ಶಾಖೆಗಳಿದ್ದು, ಎಪಿಎಲ್ ಕಾರ್ಡ್ ಇದ್ದವರಿಗೆ 10 ಸಾವಿರ ರೂ. ಶುಲ್ಕ, ಬಿಪಿಎಲ್, ಎಸ್ಸಿ/ಎಸ್ಟಿಯವರಿಗೆ ಉಚಿತ ತರಬೇತಿ ಕೊಟ್ಟು ಆಡಿಟ್ಗೆ ಸಜ್ಜುಗೊಳಿಸಿ ಪರವಾನಗಿ ನೀಡಲಾಗುತ್ತದೆ. ಅವರು ಇದ್ದಲ್ಲಿಯೇ ಅಕ್ಕಪಕ್ಕದ ಸಂಘಗಳ ಆಡಿಟ್ ಕೆಲಸ ಮಾಡಬಹುದು. 1 ಕೋಟಿ ರೂ. ಆಡಿಟ್ ಮಾಡಿದರೆ 10 ಸಾವಿರ ರೂ., 2 ಕೋಟಿಗೆ 20 ಸಾವಿರ ರೂ. ಅಂತೆ ಹಣ ನೀಡಲಾಗುತ್ತದೆ. ಆಡಿಟ್ ಮುಗಿದ ಮೇಲೆ ಆಡಳಿತ ಮಂಡಳಿ, ಅಧಿಕಾರಿಗಳ ಸಭೆ ಕರೆದು ಲೋಪಗಳನ್ನು ತಿಳಿಸಿ ತಿದ್ದಿಕೊಳ್ಳಬೇಕು. ಇಲ್ಲವಾದರೆ ಸರ್ಕಾರಕ್ಕೆ ದೂರು ಕೊಡಬೇಕು. ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.