ಗದಗ 
ರಾಜ್ಯ

ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸಲು ಒಂದು ದೇಶ ಒಂದು ಚುನಾವಣೆ ಅವಶ್ಯಕ: MLC ಕೆಎಸ್‌ ನವೀನ್‌

ಗದಗ: ದೇಶದಲ್ಲಿ ಪ್ರತಿವರ್ಷ ಸುಮಾರು ಮೂರು ರಾಜ್ಯಗಳ ವಿಧಾನಸಭೆ ಚುಣಾವಣೆಗಳು ನಡೆಯುತ್ತವೆ. ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ. ಜನರ ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸಲು ಒಂದು ದೇಶ ಒಂದು ಚುನಾವಣೆ ಅವಶ್ಯಕವಾಗಿದೆ ಎಂದು ಒಂದು ದೇಶ ಒಂದು ಚುನಾವಣೆ ರಾಜ್ಯ ಸಂಚಾಲಕ ಕೆಎಸ್‌ ನವೀನ್‌ ಹೇಳಿದರು.
ನಗರದಲ್ಲಿನ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಸಹಯೋಗದಲ್ಲಿ ಪತ್ರಿಕೋದ್ಯಮ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಒಂದು ದೇಶ ಒಂದು ಚುನಾವಣೆ ವಿಚಾರ ಸಂಕೀರ್ಣವನ್ನು ಉ‍ದ್ಘಾಟಿಸಿ ಮಾತನಾಡಿದರು.
ಒಂದು ದೇಶ ಒಂದು ಚುನಾವಣೆ ಪದವಿ ವಿದ್ಯಾರ್ಥಿಗಳ ಮಧ್ಯೆ ಚರ್ಚೆಯಾಗುತ್ತಿರುವುದು ಸೂಕ್ತದಾಯಕವಾಗಿದೆ. ಏಕೆಂದರೆ, ಭವಿಷ್ಯದಲ್ಲಿ ದೇಶವನ್ನು ಕಟ್ಟುವ ತರುಣರು ಒಂದು ದೇಶ ಒಂದು ಚುನಾವಣೆ ಬಗ್ಗೆ ತಿಳಿದುಕೊಳ್ಳಲೇಬೇಕು. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಮತದಾನದ ಮೂಲಕವೇ ಬದಲಾವಣೆ ತರಲಾಗುತ್ತಿದೆ. ಹೀಗಾಗಿ, ದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಒಂದೇ ಸಮಯದಲ್ಲಿ ಚುನಾವಣೆ ನಡೆದರೆ, ಏಕಕಾಲಕ್ಕೆ ಬದಲಾವಣೆ ತರಬಹುದು ಎಂದು ಚಿತ್ರದುರ್ಗ-ದಾವಣಗೆರೆ ವಿಧಾನ ಪರಿಷತ್‌ ಸದಸ್ಯ ಕೆಎಸ್‌ ನವೀನ್‌ ಹೇಳಿದರು.
1952, 1957, 1962 ಮತ್ತು 196ರಲ್ಲಿ ರಾಜ್ಯ ಮತ್ತು ಲೋಕಸಭೆ ಚುನಾವಣೆಗಳು ಏಕಕಾಲಕ್ಕೆ ನಡೆದವು. ಆದರೆ, 1967 ನಂತರ ಬೇರೆ ಬೇರೆ ಸಮಯದಲ್ಲಿ ಚುನಾವಣೆಗಳು ನಡೆದವು. ಇದೀಗ ಮತ್ತೆ ಒಂದೇ ಬಾರಿಗೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವುದು ಅವಶ್ಯಕವಾಗಿದೆ. ಇದರಿಂದ ಆರ್ಥಿಕ ಹೊರೆಯನ್ನು ತಗ್ಗಿಸಬಹುದು. ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ದೇಶ 17 ವರ್ಷ ನೀತಿ ಸಂಹಿತೆಯಲ್ಲೇ ಕಳೆದಿದೆ. ಮತ್ತು ಚುನಾವಣೆಗಳಲ್ಲಿ ಸುಮಾರು 4 ಲಕ್ಷ ಕೋಟಿಯಷ್ಟು ಹಣ ಖರ್ಚಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ. ಪಿಜಿ ಪಾಟೀಲ್‌ ಮಾತನಾಡಿ, ದೇಶದ ಓರ್ವ ಪ್ರಜೆ ಮತವು ಮತ್ತು ರಾಷ್ಟ್ರಪತಿಯ ಮತಕ್ಕೆ ಸಮವಾಗಿದೆ. ಪ್ರತಿಯೊಬ್ಬರು ಮತದಾನ ಮಾಡಿ ಉತ್ತಮ ನಾಯಕರನ್ನು ಆಯ್ಕೆ ಮಾಡಿ. ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಾಗಿ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತಿಯ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಕಿರಣಕುಮಾರ್‌ ವಿವೇಕವಂಶಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಪ್ರೋ. ವಿವೇಕ ಬಿರಾದರ ವಂದಿಸಿದರು. ಪ್ರೋ. ಕಲ್ಯಾಣಿ. ಹುನಕುಂದ ಸ್ವಾಗತಿಸಿದರು. ಕುಮಾರಿ. ಯಶೋಧಾ ಪ್ರಾರ್ಥಿಸಿದರು. ಮತ್ತು ಪ್ರೋಫೆಸರಗಳಾದ ಸಂಗೀತಾ ವಣಗೇರಿ ಮತ್ತು ರಾಜೇಶ್ವರಿ. ಪಾಟೀಲ ನಿರೂಪಿಸಿದರು.