ಸಚಿವ ಡಾ.ಶರಣಪ್ರಕಾಶ ಪಾಟೀಲ್​  
ರಾಜ್ಯ

ವಿಭಾಗಕ್ಕೊಂದು ಜಯದೇವ ಆಸ್ಪತ್ರೆ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿಕೆ
  • ವಿಜಯಪುರ, ವಿಜಯನಗರಕ್ಕೆ ಹೊಸ ಮೆಡಿಕಲ್​ ಕಾಲೇಜು
ಕಲಬುರಗಿ: ರಾಜ್ಯದ ಪ್ರತಿ ವಿಭಾಗಕ್ಕೆ ಒಂದು ಜಯದೇವ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ನಗರದಲ್ಲಿ ಶನಿವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ, ಬೆಂಗಳೂರಿನಲ್ಲಿ ಜಯದೇವ ಆಸ್ಪತ್ರೆ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಳಗಾವಿ ವಿಭಾಗಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ 400 ಹಾಸಿಗೆ ಆಸ್ಪತ್ರೆ ನಿರ್ಮಾಣ ಕೆಲಸ ಮುಗಿದಿದ್ದು, ಉಪಕರಣಗಳ ಖರೀದಿಗೆ 50 ಕೋಟಿ ರೂ. ಮೊತ್ತದ ಟೆಂಡರ್​ ಆಗಿದೆ. ಆಗಸ್ಟ್​ನಲ್ಲಿ ಈ ಆಸ್ಪತ್ರೆ ಜನಸೇವೆಗೆ ಸಮರ್ಪಣೆ ಮಾಡಲಾಗುವುದು. ಮಂಗಳೂರು ವಿಭಾಗದಲ್ಲೂ ಜಯದೇವ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ವಿಜಯಪುರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೊಸ ಮೆಡಿಕಲ್​ ಕಾಲೇಜು ಶುರುವಾಗಲಿದೆ. ಕಾರವಾರ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೀದರ್​, ರಾಯಚೂರು ಜಿಲ್ಲೆಗಳಲ್ಲಿ ಕ್ಯಾನ್ಸರ್​ ಆಸ್ಪತ್ರೆ ನಿರ್ಮಾಣ ಶುರುವಾಗಿದ್ದು, ಮಂಡ್ಯ, ತುಮಕೂರು ಉದ್ಘಾಟನೆ ಹಂತದಲ್ಲಿವೆ. ಶಿವಮೊಗ್ಗ, ಮೈಸೂರು ಹಾಸ್ಪಿಟಲ್​ ಆರು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿವೆ. ಬೆಳಗಾವಿ ಜಿಲ್ಲೆಯಲ್ಲಿ ಅಡಿಗಲ್ಲು, ಚಾಮರಾಜನಗರ, ಕೊಡುಗು ಸೇರಿ ಕೆಲವೆಡೆ ಪ್ರಸ್ತಾವನೆ ಹಂತದಲ್ಲಿವೆ ಎಂದು ಹೇಳಿದರು.
ಜಯದೇವ ಆಸ್ಪತ್ರೆಗಳಲ್ಲಿ ರೋಗಿಗಳ ಒತ್ತಡ ಹೆಚ್ಚಾಗಿದ್ದರಿಂದ ಮೈಸೂರು, ಬೆಂಗಳೂರು ಮತ್ತು ಕಲಬುರಗಿ ಸೇರಿ 400 ಹುದ್ದೆ ಮಂಜೂರಾಗಿವೆ. ಕಲಬುರಗಿ ಜಯದೇವನಲ್ಲಿ ಐದು ಕಾರ್ಡಿಯಾಲಜಿಸ್ಟ್​ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಬೀದರ್​, ರಾಯಚೂರು, ಹುಬ್ಬಳ್ಳಿ, ಬೆಳಗಾವಿ, ಗದಗ, ಶಿವಮೊಗ್ಗ ಆಸ್ಪತ್ರೆಗಳಲ್ಲಿ ಕ್ಯಾತ್​ಲ್ಯಾಬ್​ ಇದ್ದು, ಬಳ್ಳಾರಿ ಆಸ್ಪತ್ರೆಗೆ ಎರಡು ತಿಂಗಳಲ್ಲಿ ಹಾಗೂ ಕೊಪ್ಪಳ ಆಸ್ಪತ್ರೆಗೆ ಮುಂದಿನ ವರ್ಷ ಈ ಸೌಲಭ್ಯ ಒದಗಿಸಲಾಗುತ್ತಿದೆ. ಈ ವರ್ಷ 450 ಮೆಡಿಕಲ್​ ಸೀಟ್​ ಹೆಚ್ಚಾಗಿದ್ದು, ಮುಂದಿನ ವರ್ಷ ಇನ್ನೂ 400 ಮೆಡಿಕಲ್​ ಸೀಟು ಹೆಚ್ಚಳಕ್ಕೆ ಹಾಗೂ ಬಾಗಲಕೋಟೆ ಮತ್ತು ರಾಮನಗರ ಜಿಲ್ಲೆಗೆ ಸರ್ಕಾರಿ ಮೆಡಿಕಲ್​ ಕಾಲೇಜು ಸ್ಥಾಪನೆಯ ಪ್ರಸ್ತಾವನೆ ಇದೆ ಎಂದು ತಿಳಿಸಿದರು.
"

ಕಲಬುರಗಿ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ವಿವಿಧ ಹುದ್ದೆಗಳ ಕೊರತೆ ಇದ್ದು, ರೋಗಿಗಳ ಒತ್ತಡ ಹೆಚ್ಚಾಗಿದೆ. ಹೀಗಾಗಿ ಒತ್ತಡ ಕಡಿಮೆ ಮಾಡಲು ಶ್ರೀವೇ ತಜ್ಞ ವೈದ್ಯರು ಸೇರಿ ವಿವಿಧ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಬಡವರ ಆರೋಗ್ಯ ಸೇವೆಗೆ ನಮ್ಮ ಸರ್ಕಾರ ಬದ್ಧವಾಗಿದೆ.

> ಡಾ.ಶರಣಪ್ರಕಾಶ ಪಾಟೀಲ್​

ವೈದ್ಯಕಿಯ ಶಿಕ್ಷಣ ಸಚಿವ