ಒಂದು ದೇಶ ಒಂದು ಚುನಾವಣೆ ಶಿಕ್ಷಕರ ಪಾತ್ರ
- ಎಲ್ಲ ರಾಜ್ಯಗಳಿಂದಲೂ ಬಹು ಚುನಾವಣೆಗಳನ್ನು ನಡೆಸುವುದರಿಂದ ಆಗುತ್ತಿರುವ ಪರಿಣಾಮಗಳೇನು?, ಲಾಭ ನಷ್ಟಗಳೇನು ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
- ವಿಶೇಷವಾಗಿ ಶಿಕ್ಷಕರು ಚುನಾವಣೆ ಕೆಲಸಗಳಿಗಾಗಿ ಎಷ್ಟು ತರಗತಿಗಳು ಬೋಧನೆ ಮಾಡಿಲ್ಲ. ಇದರಿಂದ ಮಕ್ಕಳಿಗೆ ಆಗುತ್ತಿರುವ ಶೈಕ್ಷಣಿಕ ನಷ್ಟವೆಷ್ಟು ಎಂಬ ಮಾಹಿತಿಯನ್ನು ಕೋರಿದೆ.
- ಸಂವಿಧಾನ (129ನೇ ತಿದ್ದುಪಡಿ) ಮಸೂದೆ 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ 2024 ’ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಕುರಿತಂತೆ ಸಲಹೆಗಳು/ಸುಧಾರಣೆಗಳಿಗಾಗಿ ಮಾಹಿತಿ
- ಗುಣಮಟ್ಟದ ಬೋಧನೆ, ಶಿಕ್ಷಕರ ಮೂಲಭೂತ ಕರ್ತವ್ಯಗಳು/ಸಂಬಂಧಗಳನ್ನು ಪೂರೈಸುವ ಜವಾಬ್ದಾರಿ ಸಹ ದಾಖಲಿಸಬೇಕು.
ಕೇಂದ್ರ ಸರ್ಕಾರವು ಮುಂಬರುವ 2029ರಲ್ಲಿಯೇ ‘ಒಂದು ದೇಶ ಒಂದು ಚುನಾವಣೆ’ ನಡೆಸುವ ನಿಟ್ಟಿನಲ್ಲಿ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳುವ ಸುಳಿವು ನೀಡಿದ್ದು, ದೇಶಾದ್ಯಂತ ಚುನಾವಣೆ ಕೆಲಸಗಳಿಗೆ ಎಷ್ಟು ಸಮಯ ನೀಡಲಾಗುತ್ತಿದೆ ಎಂದು ಮಾಹಿತಿ ಕಲೆ ಹಾಕುತ್ತಿದೆ.
ಮಳೆಗಾಲದ ಅಧಿವೇಶನದಲ್ಲಿಯೇ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಅಂತಿಮ ಮುದ್ರೆಯನ್ನು ಒತ್ತುವ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದರ ಹೊರತಾಗಿ ಎಲ್ಲ ರಾಜ್ಯಗಳಿಂದಲೂ ಬಹು ಚುನಾವಣೆಗಳನ್ನು ನಡೆಸುವುದರಿಂದ ಆಗುತ್ತಿರುವ ಪರಿಣಾಮಗಳೇನು?, ಲಾಭ ನಷ್ಟಗಳೇನು ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಜಂಟಿ ಸಂಸದೀಯ ಸಮಿತಿಯು, ಕರ್ನಾಟಕದಲ್ಲಿ ಎಷ್ಟು ಸರ್ಕಾರಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣೆ ಕೆಲಸಗಳಿಗೆ ಎಷ್ಟು ಸಮಯ ತೊಡಗಿಸಿಕೊಳ್ಳುತ್ತಿದ್ದಾರೆ?, ಇದರಿಂದ ಸಾರ್ವಜನಿಕ ಸೇವೆಗೆ ಆಗುತ್ತಿರುವ ನಷ್ಟವೆಷ್ಟು, ಸಾರ್ವಜನಿಕ ಸೇವೆಗಳು ಎಷ್ಟು ವಿಳಂಬವಾಗುತ್ತಿವೆ?, ಯಾವೆಲ್ಲ ಚುನಾವಣೆ ಕೆಲಸಗಳಿಗೆ ಎಷ್ಟು ಸಮಯವನ್ನು ವಿನಿಯೋಗಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡುವಂತೆ ನಿರ್ದೇಶನ ನೀಡಿದೆ.
ವಿಶೇಷವಾಗಿ ಶಿಕ್ಷಕರು ಇತ್ತೀಚಿನ ಲೋಕಸಭಾ, ವಿಧಾನಸಭಾ, ಸ್ಥಳೀಯ ಚುನಾವಣೆ ಮತ್ತು ಪಂಚಾಯತ್ ಚುನಾವಣೆಗಳಿಗಾಗಿ ಅಂದರೆ ಎಸ್‌ಐಆರ್, ಮನೆಗಣತಿ, ಜಾತಿಗಣತಿ, ಜನಗಣತಿ ಕೆಲಸಗಳಿಗಾಗಿ ಎಷ್ಟು ತರಗತಿಗಳು ಬೋಧನೆ ಮಾಡಿಲ್ಲ. ಇದರಿಂದ ಮಕ್ಕಳಿಗೆ ಆಗುತ್ತಿರುವ ಶೈಕ್ಷಣಿಕ ನಷ್ಟವೆಷ್ಟು ಎಂಬ ಮಾಹಿತಿಯನ್ನು ಕೋರಿದೆ.
ಏನೆಲ್ಲ ಮಾಹಿತಿ ಕೋರಿದೆ?
ಸಂವಿಧಾನ (129ನೇ ತಿದ್ದುಪಡಿ) ಮಸೂದೆ 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ 2024 ’ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆ ಕುರಿತಂತೆ ಸಲಹೆಗಳು/ಸುಧಾರಣೆಗಳಿಗಾಗಿ ಮಾಹಿತಿ ಕೋರಲಾಗಿದೆ.
ವಿವಿಧ 11 ಅಂಶಗಳ ಮಾಹಿತಿಯನ್ನು ಕೋರಿದೆ. ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಸಂಖ್ಯೆ, ಸರ್ಕಾರಿ ರಾಜ್ಯ ಶಾಲೆಗಳಲ್ಲಿ ನೇಮಕಗೊಂಡವರ ಸಂಖ್ಯೆ, ಚುನಾವಣಾ ಸಂಬಂಧಿತ ಕರ್ತವ್ಯಗಳಿಗಾಗಿ ಶಿಕ್ಷಕರನ್ನು ಆಗಾಗ್ಗೆ ನಿಯೋಜಿಸುವುದರ ಪರಿಣಾಮ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳು, ಪಂಚಾಯತ್‌ಗಳಿಗೆ ಪ್ರತ್ಯೇಕ ಚುನಾವಣೆಗಳನ್ನು ನಿರ್ಣಯಿಸುವುದರಿಂದ ಸ್ಥಳೀಯ ಸರ್ಕಾರ, ಸ್ಥಳೀಯ ಸಂಸ್ಥೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಸೇರಿ ಯಾವೆಲ್ಲ ಅಧ್ಯಯನಗಳನ್ನು ಮಾಡಲಾಗಿದೆ.
ಮತದಾನ ಸಂಬಂಧಿತ ಕರ್ತವ್ಯಗಳಿಗಾಗಿ ಶಿಕ್ಷಕರನ್ನು ನಿಯೋಜಿಸಲಾದ ದಿನಗಳ ಸಂಖ್ಯೆ. ಮತದಾನಕ್ಕೆ ಸಂಬಂಧಿಸಿದ ತರಬೇತಿ ಸೇರಿ ಒಟ್ಟು ಮಾಹಿತಿಯನ್ನು ನೀಡುವುದು.
ಇದೇ ವೇಳೆ ಬೋಧನೆ, ಪರೀಕ್ಷೆಗಳನ್ನು ನಡೆಸುವುದು, ಮೌಲ್ಯಮಾಪನ ಇತ್ಯಾದಿಗಳ ಶೈಕ್ಷಣಿಕ ವೇಳಾಪಟ್ಟಿಗಳು/ಚಟುವಟಿಕೆಗಳನ್ನು ನೀಡಬೇಕು. ಗುಣಮಟ್ಟದ ಬೋಧನೆ, ಶಿಕ್ಷಕರ ಮೂಲಭೂತ ಕರ್ತವ್ಯಗಳು/ಸಂಬಂಧಗಳನ್ನು ಪೂರೈಸುವ ಜವಾಬ್ದಾರಿ ಸಹ ದಾಖಲಿಸಬೇಕು.
ಕಲಿಕೆ ಮೇಲಿನ ಪರಿಣಾಮಗಳೆನು?
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳು ಮತ್ತು ಅದರ ದೀರ್ಘಕಾಲೀನ ಪರಿಣಾಮಗಳನ್ನು ಸಹ ನೀಡಬೇಕು. ಈ ಕುರಿತಂತೆ ಪ್ರಮುಖ ಸಂಶೋಧನೆಗಳು ಅಧ್ಯಯನ ಮತ್ತು ಮಾಹಿತಿ ಸೇರಿ ಅಂತಹ ಯಾವುದೇ ಸಲಹೆ ಪರಿಹಾರವನ್ನು ಸೂಚಿಸಲು ಸೂಚಿಸಲಾಗಿದೆ. ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಂತಹ ನಷ್ಟವಾಗುತ್ತಿದೆ. ಮೊದಲ ಆದ್ಯತೆ ನೀಡಬೇಕಿರುವ ಪ್ರಾಥಮಿಕ ಹಂತದ ಕಲಿಕೆಯ ಮೇಲಿನ ಪರಿಣಾಮಗಳೇನು?, ಇದೇ ಖಾಸಗಿ ಶಾಲೆಗಳಲ್ಲಿನ ಕಲಿಕೆಗೆ ಇರುವ ವ್ಯತ್ಯಾಸಗಳೇನು?, ಕಲಿಕೆ ನಷ್ಟವನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳೇನು?, ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಮಕ್ಕಳ ಭವಿಷ್ಯ ಸೇರಿ ಹಲವು ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
ಬಹು ಚುನಾವಣೆ ಪರಿಣಾಮಗಳೇನು?
ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಚರ್ಚೆಗಳಾಗುತ್ತಿವೆ. ಇದೇ ಸಮಯದಲ್ಲಿ ಬಹು ಚುನಾವಣೆಗಳನ್ನು ನಡೆಸುವುದರಿಂದ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಮೇಲೆ ಆಗುತ್ತಿರುವ ಪ್ರಭಾವದ ಕುರಿತು ಯಾವುದೇ ಅಧ್ಯಯನವನ್ನು ನಡೆಸದಿದ್ದರೆ, ಅದನ್ನು ನಿಯೋಜಿಸಬಹುದು ಮತ್ತು ಪ್ರಮುಖ ಸಂಶೋಧನೆಗಳನ್ನು ಸಹ ಸಮಿತಿಯೊಂದಿಗೆ ಹಂಚಿಕೊಳ್ಳುವಂತೆ ತಿಳಿಸಲಾಗಿದೆ.
ಏನೆಲ್ಲ ಮಾಹಿತಿ ಕೇಳಿದೆ?
- ಪದೇ ಪದೆ ಎಲೆಕ್ಷನ್ ಡ್ಯೂಟಿಯಿಂದ ಶಿಕ್ಷಕರಿಗೆ ಕಳೆದುಹೋದ ತರಗತಿಗಳೆಷ್ಟು?
- ಬಹು ಚುನಾವಣೆಗಳನ್ನು ನಡೆಸುವುದರಿಂದ ರಾಜ್ಯದ ಶಿಕ್ಷಣ ಕ್ಷೇತ್ರದ ಮೇಲೆ ಆಗುತ್ತಿರುವ ಪ್ರಭಾವದ ಕುರಿತು ಯಾವುದೇ ಅಧ್ಯಯನವನ್ನು ನಡೆಸಲಾಗಿದೆಯೇ?
- ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳೇನು, ದೀರ್ಘಕಾಲೀನ ಪರಿಣಾಮ/ ಪರಿಹಾರಗಳೇನು?
ಚುನಾವಣೆ ವಿಚಾರವಾಗಿ ಶಿಕ್ಷಕರು ಎಷ್ಟು ಸಮಯ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಜಂಟಿ ಸಂಸದೀಯ ಸಮಿತಿಯು ಕೇಳಿರುವ ಮಾಹಿತಿಯನ್ನು ಇಲಾಖೆ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಎಲ್ಲ ದತ್ತಾಂಶಗಳು ದೊರೆತ ಬಳಿಕ ಸಮಿತಿಗೆ ತಲುಪಿಸಲಾಗುತ್ತದೆ.
— - ವಿಕಾಸ್ ಕಿಶೋರ್ ಸುರಳ್ಕರ್, ಶಾಲಾ ಶಿಕ್ಷಣ ಆಯುಕ್ತ
- ವಿಕಾಸ್ ಕಿಶೋರ್ ಸುರಳ್ಕರ್, ಶಾಲಾ ಶಿಕ್ಷಣ ಆಯುಕ್ತ