ಹುಲಸೂರಿನ ಕಸಾಯಿ ಬಡಾವಣೆಯಲ್ಲಿ ಬಕ್ರೀದ್​ ಹಬ್ಬದ ವೇಳೆ ಗೋಹತ್ಯೆ ನಡೆದ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 
ರಾಜ್ಯ

ಬಕ್ರೀದ್​ ವೇಳೆ ಗೋಹತ್ಯೆ ಆರೋಪ ಒಬ್ಬನ ಬಂಧನ

ಪ್ರಮುಖ ಮುಖ್ಯಾಂಶಗಳು

  • ಹುಲಸೂರಿನಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ
  • ಬಿಗಿ ಪೊಲೀಸ್​ ಬಂದೋಬಸ್ತ್​
ಹುಲಸೂರು: ಬಕ್ರೀದ್​ ಹಬ್ಬದ ನಿಮಿತ್ತ ಪಟ್ಟಣದಲ್ಲಿ ಗೋಹತ್ಯೆ ನಡೆಸಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿರುವುದು ಗುರುವಾರ ಸಂಜೆ ಬೆಳಕಿಗೆ ಬಂದಿದ್ದು, ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಪಟ್ಟಣದ ಕಸಾಯಿ ಬಡಾವಣೆಯ ಖುರೇಶಿ ಮನೆಯಲ್ಲಿ ದನವನ್ನು ಅಕ್ರಮವಾಗಿ ಕಡಿದು ಹಾಕಲಾಗಿದೆ ಎಂಬ ಮಾಹಿತಿ ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರಿಂದ ಪೊಲೀಸರಿಗೆ ಸಿಕ್ಕಿತು.ತಕ್ಷಣ ಪಿಎಸ್​ಐ ಶಿವಪ್ಪ ಮೇಟಿ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪತ್ತೆಯಾದ ಮಾಂಸದ ಅವಶೇಷ ಇತರ ವಸ್ತುಗಳನ್ನು ವಶಪಡಿಸಿಕೊಂಡಿತು.
ಘಟನೆಯ ಗಂಭೀರತೆ ಅರಿತು ಡಿವೈಎಸ್​ಪಿ ಮಡೋಳಪ್ಪ ಹಾಗೂ ಸಿಪಿಐ ಅಲಿಸಾಬ್​ ಪರಿಸ್ಥಿತಿಯ ಅವಲೋಕನ ನಡೆಸಿದರು. ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಎಲ್ಲರನ್ನು ಸಮಾಧಾನಪಡಿಸಿ ಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ವಶಪಡಿಸಿಕೊಂಡ ಮಾಂಸದ ತುಂಡುಗಳು ಯಾವ ಪ್ರಾಣಿಯವು ಎಂಬುದು ಇನ್ನೂ ದೃಢಪಟ್ಟಿಲ್ಲ. ಪಶು ವೈದ್ಯಾಧಿಕಾರಿಗಳು ಮಾದರಿಗಳನ್ನು ಪರಿಶೀಲನೆಗೆ ಒಳಪಡಿಸಿದ್ದು, ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಫಾರ್​ ಖುರೇಷಿ (45) ಎಂಬುವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಆರೋಪಿ ವಿರುದ್ಧ ಕರ್ನಾಟಕ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಜಾನುವಾರು ಸಂರಣೆ ಕಾಯ್ದೆ 2021ರ ಕಲಂ 12 ಹಾಗೂ ಬಿಎನ್​ಎಸ್​ನ 271, 272 ಮತ್ತು 325 ಕಲಂಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳದಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.