- ಒಆರ್‌ಆರ್ ರಸ್ತೆ ಪರಿಶೀಲನೆ: ಫುಟ್‌ಪಾತ್ ಒತ್ತುವರಿ ವಿರುದ್ಧ ಸಚಿವರ ಕಠಿಣ ಸಂದೇಶ
- ಮುಖ್ಯ ರಸ್ತೆಗಳ ಫುಟ್‌ಪಾತ್ ಖಾಲಿ ಮಾಡಿ: ವ್ಯಾಪಾರಿಗಳಿಗೆ ಸಚಿವರ ಮನವಿ
- ಸಿಲ್ಕ್ ಬೋರ್ಡ್‌ನಿಂದ ಬೈಯ್ಯಪ್ಪನಹಳ್ಳಿವರೆಗೆ ರಾತ್ರಿ ಸಂಚಾರ; ಅಧಿಕಾರಿಗಳಿಗೆ ಸಚಿವರ ತರಾಟೆ
ಬೆಂಗಳೂರು: ಗುರುವಾರ ತಡರಾತ್ರಿ ಸಿಲ್ಕ್ ಬೋರ್ಡ್‌ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಸಚಿವ ಕೃಷ್ಣಭೈರೇಗೌಡ(Krishna Bhairegowda) ಅಧಿಕಾರಿಗಳೊಂದಿಗೆ ಸಂಚರಿಸಿ ರಸ್ತೆ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ರಸ್ತೆ ಗುಂಡಿಗಳು, ಅವ್ಯವಸ್ಥಿತವಾಗಿ ನೇತಾಡುತ್ತಿರುವ ಬೆಸ್ಕಾಂ ತಂತಿಗಳು ಮತ್ತು ಸರ್ವೀಸ್ ರಸ್ತೆಗಳ ದುಸ್ಥಿತಿಯನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿಯಲ್ಲಿ ಯಾವುದೇ ಲೋಪ ಅಥವಾ ಗುಣಮಟ್ಟದ ಕೊರತೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿ-ಸ್ಮೈಲ್ ಯೋಜನೆಯಡಿ ಸಿಲ್ಕ್ ಬೋರ್ಡ್‌ನಿಂದ ಬೈಯ್ಯಪ್ಪನಹಳ್ಳಿವರೆಗೆ 17.1 ಕಿಲೋಮೀಟರ್ ಉದ್ದದ ರಸ್ತೆಯನ್ನು ಜಾಗತಿಕ ಮಟ್ಟದ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ 400 ಕೋಟಿ ರೂ. ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿಗಳ ಪ್ರಗತಿ ಹಾಗೂ ರಸ್ತೆ ಪರಿಸ್ಥಿತಿಯನ್ನು ಸಚಿವರು ಖುದ್ದಾಗಿ ಪರಿಶೀಲಿಸಿದರು. ಕಾಮಗಾರಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಏಕರೂಪದ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಲೌರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ ರಸ್ತೆ ಮಾರ್ಗದಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಸಂಚರಿಸಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ವೇಳೆ ಹಲವೆಡೆ ರಸ್ತೆ ಅಗೆದು ಬಿಟ್ಟಿರುವುದು, ಸರ್ವೀಸ್ ರಸ್ತೆಗಳು ಹಾಳಾಗಿರುವುದು ಹಾಗೂ ಬೆಸ್ಕಾಂ ವಿದ್ಯುತ್ ತಂತಿಗಳು ನೇತಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
'ವ್ಯಾಪಾರ ಮಾಡಬೇಡಿ ಎಂದು ಹೇಳುತ್ತಿಲ್ಲ'
ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೈರೇಗೌಡ, "ನಾವು ಯಾರಿಗೂ ವ್ಯಾಪಾರ ಮಾಡಬೇಡಿ ಎಂದು ಹೇಳುತ್ತಿಲ್ಲ. ಆದರೆ ನಗರದ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಬಾರದು ಎಂಬುದಷ್ಟೇ ನಮ್ಮ ಉದ್ದೇಶ. ಫುಟ್‌ಪಾತ್ ಇಲ್ಲದ ಕಾರಣ ಜನರು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ," ಎಂದು ಅವರು ಹೇಳಿದರು.
ಮುಖ್ಯ ರಸ್ತೆಗಳ ಫುಟ್‌ಪಾತ್‌ಗಳನ್ನು ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕಾಗಿ ಮುಕ್ತವಾಗಿಡಬೇಕು. ವ್ಯಾಪಾರಿಗಳು ಪಕ್ಕದ ರಸ್ತೆಗಳು ಅಥವಾ ಸೂಕ್ತ ಸ್ಥಳಗಳಲ್ಲಿ ವ್ಯಾಪಾರ ನಡೆಸಿದರೆ ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಸಚಿವರು ತಿಳಿಸಿದರು.
"ಫುಟ್‌ಪಾತ್ ಇಲ್ಲದ ಕಾರಣ ಜನರು ರಸ್ತೆಗೆ ಇಳಿದು ನಡೆಯುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರತಿವರ್ಷ ಸುಮಾರು 300 ಅಮಾಯಕರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಇಂತಹ ಸಾವುಗಳಿಗೆ ಯಾರು ಹೊಣೆ? ನಿಮ್ಮ ಕುಟುಂಬದವರೇ ಇದೇ ರೀತಿಯ ಅಪಘಾತದಲ್ಲಿ ಮೃತಪಟ್ಟರೆ ಏನು ಮಾಡುತ್ತೀರಿ ಎಂಬುದನ್ನು ಯೋಚಿಸಬೇಕು. ಜನರ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆ," ಎಂದು ಕೃಷ್ಣಭೈರೇಗೌಡ ಹೇಳಿದರು.